ಸಾರಾಂಶ
ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಮೀಸಲಿಟ್ಟಿರುವ ₹5,300ಕೋಟಿ ಅನುದಾನ ತಂದು ಯೋಜನೆ ಪೂರ್ಣಗೊಳಿಸಿ ಜಿಲ್ಲೆಯನ್ನು ಸಂಪೂರ್ಣವಾಗಿ ನೀರಾವರಿಯನ್ನಾಗಿಸುತ್ತೇನೆಂದು ನೂತನ ಸಂಸದ ಗೋವಿಂದ ಕಾರಜೋಳ ಹೇಳಿದರು.ಪಟ್ಟಣದ ಪದ್ಮ ಸಾಲಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಸಂಸದ ಗೋವಿಂದ ಕಾರಜೋಳ ಅವರಿಂದ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಗ್ಯಾರಂಟಿಗಳಿಂದಾಗಿ ರಾಜ್ಯದಲ್ಲಿ ಸರ್ಕಾರ ದಿವಾಳಿ ಅಂಚಿಗೆ ಬಂದಿದೆ. ಅವರದೇ ಶಾಸಕರು ಗ್ಯಾರಂಟಿ ವಿರುದ್ಧ ಅಪಸ್ವರ ಎತ್ತಿದ್ದಾರೆ. ಕ್ಷೇತ್ರಗಳಲ್ಲಿ ಅಭಿವೃದ್ಧಿ ಇಲ್ಲದೆ ರಾಜಿನಾಮೆ ಕೊಡುವ ಮಾತನಾಡುತ್ತಿದ್ದಾರೆ. ಪರಿಶಿಷ್ಟ ಪಂಗಡಕ್ಕೆ ಸೇರಬೇಕಾದ ನೂರಾರು ಕೋಟಿ ಅನುದಾನವನ್ನು ಹೈದರಾಬಾದ್ ಖಾತೆಗಳಿಗೆ ಹಾಕಿ ಖಜಾನೆ ಲೂಟಿ ಮಾಡಿದ್ದಾರೆ. ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು ಹಗರಣದ ನೈತಿಕ ಹೊಣೆ ಹೊತ್ತು ಇಡೀ ಸರ್ಕಾರವೇ ರಾಜಿನಾಮೆ ನೀಡಬೇಕು ಎಂದರು.
ಗ್ಯಾರಂಟಿಗಳಿಗೆ ಹಣ ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿಲುವಿಂದಾಗಿ ಕ್ಷೇತ್ರಗಳಲ್ಲಿ ಮೂಲ ಸೌಲಭ್ಯಗಳ ಅಭಿವೃದ್ಧಿಗೆ ಅನುದಾನ ಇಲ್ಲದಾಗಿದೆ. ಜಿಲ್ಲೆ ಅಪ್ಪರ್ ಭದ್ರ ಯೋಜನೆಗೆ ನಯಾ ಪೈಸೆ ನೀಡುತ್ತಿಲ್ಲ. ಮತ ನೀಡಿ ಆಶೀರ್ವದಿಸಿದ ಜಿಲ್ಲೆಯ ಋಣ ತೀರಿಸಲು ಭದ್ರಾ ಯೋಜನೆ ಪೂರ್ಣ ಗೊಳಿಸುತ್ತೇನೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೀಸಲಿಟ್ಟಿರುವ ₹5,300ಕೋಟಿ ಅನುದಾನ ತಂದು ಜಿಲ್ಲೆ ಸಮಗ್ರ ನೀರಾವರಿಯನ್ನಾಗಿಸಿ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆಂದು ಹೇಳಿದರು.ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಬೇಕಾದ ಅನುದಾನವನ್ನು ಗ್ಯಾರಂಟಿಗೆ ನೀಡಿ ಸಮುದಾಯಗಳ ಅಭಿವೃದ್ಧಿ ಕಡೆಗಣಿಸಿದ್ದಾರೆ. ಪರಿಶಿಷ್ಟ ಪಂಗಡಕ್ಕೆ ಸೇರಬೇಕಾದ ₹187ಕೋಟಿ ಹಣ ಕೊಳ್ಳೆ ಹೊಡೆದಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಇಲ್ಲದಾಗಿದೆ. ನನ್ನ ಮತ್ತು ಬಿಜೆಪಿ ಸರ್ಕಾರದ ಅವಧಿಯಲ್ಲಾದ ಕೆಲಸ ಹೊರತು ಪಡಿಸಿದರೆ ಬೇರೇನು ಇಲ್ಲದಾಗಿದೆ. ಬರುವಂತ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರ್ಯಕರ್ತರು ಸಿದ್ಧರಾಗಬೇಕು. ಕಾಂಗ್ರೆಸ್ ಭ್ರಷ್ಟಾಚಾರ ಜನತೆಗೆ ತಿಳಿಸುವ ಮೂಲಕ ಪಕ್ಷ ಇನ್ನಷ್ಟು ಬಲಗೊಳಿಸಬೇಕೆಂದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಜಿಲ್ಲೆಯಲ್ಲಿ ಸಚಿವ ಹಾಗೂ 7 ಜನ ಶಾಸಕರಿದ್ದರೂ ಕ್ಷೇತ್ರದ ಮತದಾರ ಬಿಜೆಪಿ ಬೆಂಬಲಿಸಿ ಆಶೀರ್ವದಿಸಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಪಡೆ ಇದೆ. ಎಲ್ಲರ ಶ್ರಮದಿಂದ ಕ್ಷೇತ್ರದಲ್ಲಿ ಗೋವಿಂದ ಕಾರಜೋಳರನ್ನು ಗೆಲ್ಲಿಸಿದ್ದಾರೆ. ಕ್ಷೇತ್ರದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರಿಗೆ ತೊಂದರೆ ಕೊಡುವ ಪ್ರಯತ್ನ ನಡೆಯುತ್ತಿದೆ. ಕಾರ್ಯಕರ್ತರು ಎದೆಗುಂದಬಾರದು. ನಿಮ್ಮ ಜೊತೆ ಸದಾ ಇರುತ್ತೇವೆ. ಎಲ್ಲರೂ ಸೇರಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಗೆಲ್ಲಿಸುತ್ತ ಮುಂದಾಗೋಣ ಎಂದರು.ಈ ವೇಳೆ ಜಿಲ್ಲಾಧ್ಯಕ್ಷ ಮುರುಳಿ.ಮಂಡಲ ಅಧ್ಯಕ್ಷ ಡಾ.ಪಿ.ಎಂ.ಮಂಜುನಾಥ, ಜೆಡಿಎಸ್ ಮುಖಂಡ ವೀರಭದ್ರಪ್ಪ, ಜೆಡಿಎಸ್ ಕ್ಷೇತ್ರಾಧ್ಯಕ್ಷ ಕರಿಬಸಪ್ಪ, ಹಿರಿಯ ಮುಖಂಡ ಡಿ.ಎಂ.ಈಶ್ವರಪ್ಪ, ಜಿಪಂ ಮಾಜಿ ಸದಸ್ಯ ಓಬಳೇಶ್, ಜಿಂಕಲು ಬಸವರಾಜ, ಸಹಕಾರ ಕ್ಷೇತ್ರದ ಮೊಗಲಹಳ್ಳಿ ರಾಮರೆಡ್ಡಿ, ಶ್ರೀರಾಮರೆಡ್ಡಿ, ತಾಪಂ ಮಾಜಿ ಸದಸ್ಯ ಟಿ.ರೇವಣ್ಣ, ತಿಮ್ಲಾಪುರ ಮೂರ್ತಿ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಭಾಕರ್, ಮುಖಂಡ ತಿಪ್ಪೇಸ್ವಾಮಿ, ನಿವೃತ್ತ ಶಿಕ್ಷಕ ಶಾಂತವೀರಣ್ಣ, ಎಸ್.ಸಿ, ಮೋರ್ಚಾ ಅಧ್ಯಕ್ಷ ಸಿದ್ದಾರ್ಥ ಇದ್ದರು.