ಜಾತಿ ಗಣತಿ ವರದಿ ಬಗ್ಗೆ ಪಕ್ಷದ ನಿಲುವಿಗೆ ಬದ್ಧ

| Published : Apr 16 2025, 12:43 AM IST

ಜಾತಿ ಗಣತಿ ವರದಿ ಬಗ್ಗೆ ಪಕ್ಷದ ನಿಲುವಿಗೆ ಬದ್ಧ
Share this Article
  • FB
  • TW
  • Linkdin
  • Email

ಸಾರಾಂಶ

ಜಾತಿ ಗಣತಿ ವರದಿ ಕುರಿತು ಪಕ್ಷದ ನಿಲುವು ಏನಿದೆ ಎಂಬುದು ನನಗೆ ಗೊತ್ತಿಲ್ಲ. ಪಕ್ಷದ ನಿಲುವೇ ನನ್ನ ನಿಲುವು ಎಂದು ಬೆಮುಲ್‌ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಜಾತಿ ಗಣತಿ ವರದಿ ಕುರಿತು ಪಕ್ಷದ ನಿಲುವು ಏನಿದೆ ಎಂಬುದು ನನಗೆ ಗೊತ್ತಿಲ್ಲ. ಪಕ್ಷದ ನಿಲುವೇ ನನ್ನ ನಿಲುವು ಎಂದು ಬೆಮುಲ್‌ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ ಗಣತಿ ವರದಿ ಬಗ್ಗೆ ಪಕ್ಷ ತೆಗೆದುಕೊಳ್ಳುವ ನಿಲುವಿಗೆ ನಾನು ಬದ್ಧನಾಗಿದ್ದೇನೆ. 2013ರಿಂದ 2018ರ ಅವಧಿಯಲ್ಲಿ ನಾನು ₹180 ಕೋಟಿ ವೆಚ್ಚದಲ್ಲಿ ಮಾಡಲಾಗಿರುವ ಜಾತಿ ಗಣತಿ ವರದಿ ಏನಾಗಿದೆ ಎಂದು ಲಿಖಿತವಾಗಿ ಕೇಳಿದ್ದೆ. ಆದರೆ, ನನಗೆ ಈ ಕುರಿತು ಪರಿಶೀಲನೆ ಮಾಡಲಾಗುತ್ತಿದೆ ಎಂದಷ್ಟೇ ಉತ್ತರ ಬಂದಿತ್ತು. ಜಾತಿ ಗಣತಿ ವರದಿ ಕುರಿತು ಪಕ್ಷದ ನಿಲುವೇ ನನ್ನ ನಿಲುವಾಗಿದೆ ಎಂದು ತಿಳಿಸಿದರು.ಬೆಲೆ ಏರಿಕೆ ವಿರೋಧಿಸಿ ಏ.16 ರಂದು ಬೆಳಗಾವಿಯಲ್ಲಿ ನಡೆಯಲಿರುವ ಬಿಜೆಪಿ ಜನಾಕ್ರೋಶ ಯಾತ್ರೆಯಲ್ಲಿ ನಾನು ಭಾಗವಹಿಸುತ್ತೇನೆ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ ಎಂದ ಅವರು, ಬಿಜೆಪಿಯಿಂದ ಉಚ್ಚಾಟಿತಗೊಂಡಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಮರಳಿ ಪಕ್ಷಕ್ಕೆ ಬರುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಅವರು ಎರಡು ಬಾರಿ ಬಿಜೆಪಿಯಿಂದ ಹೊರಹೋಗಿ ಮರಳಿ ಬಂದಿದ್ದಾರೆ. ಯತ್ನಾಳ ಮರಳಿ ಪಕ್ಷಕ್ಕೆ ಸೇರ್ಪಡೆಯಾಗುವಂತೆ ನಾನು ಬಹಿರಂಗವಾಗಿ ಹೇಳಿಕೆ ನೀಡುವುದಿಲ್ಲ. ಈ ಬಗ್ಗೆ ಪಕ್ಷದ ಶಾಸಕಾಂಗ ಸಭೆಯಲ್ಲಿ ಹೇಳುತ್ತೇನೆ. ಯತ್ನಾಳ ಅವರನ್ನು ಮರಳಿ ಪಕ್ಷಕ್ಕೆ ತೆಗೆದುಕೊಳ್ಳುವುದು ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದಷ್ಟೇ ಹೇಳಿದರು.ಸತೀಶ ಜಾರಕಿಹೊಳಿ 2028ಕ್ಕೆ ಮುಖ್ಯಮಂತ್ರಿಯಾಗುತ್ತಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅದು ಅವರ ಪಕ್ಷದ ಆಂತರಿಕ ವಿಚಾರ. ಈ ಬಗ್ಗೆ ನಾನು ಮಾತನಾಡುವುದು ತಪ್ಪಾಗುತ್ತದೆ. ಅದು ಅವರ ಪಕ್ಷಕ್ಕೆ ಬಿಟ್ಟದ್ದು ಎಂದರು.