ಸಾರಾಂಶ
ಕನ್ನಡ ಪ್ರಭ ವಾರ್ತೆ ಬ್ಯಾಕೋಡು
ಶರಾವತಿ ಮುಳುಗಡೆ ಸಂತ್ರಸ್ತರಿಗೆ ನ್ಯಾಯ ಒದಗಿಸುವ ಜೊತೆಗೆ ಹಲವು ವರ್ಷಗಳಿಂದ ಭೂಮಿ ಸಮಸ್ಯೆ ಎದುರಿಸುತ್ತಿರುವ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೂ ಅಗತ್ಯ ನ್ಯಾಯ ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.ಸಾಗರ ತಾಲೂಕಿನ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿ, ನಮ್ಮ ಸರ್ಕಾರ ಶರಾವತಿ ಮುಳುಗಡೆ ಸಂತ್ರಸ್ತರ ಪರವಾಗಿ ಅಂದಿನಿಂದಲೂ ಇದೆ. ಈಗಾಗಲೇ ಸಂತ್ರಸ್ತರ ಸಮಸ್ಯೆ ಬಗ್ಗೆ ಸಮಗ್ರವಾಗಿ ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಿ ಅಗತ್ಯ ಕ್ರಮಕ್ಕೆ ಮನವಿ ಮಾಡಲಾಗಿದೆ, ಅಲ್ಲದೆ ಮುಳುಗಡೆ ಸಂತ್ರಸ್ತರ ರೈತರಿಗೆ ನಮ್ಮ ಅವಧಿಯಲ್ಲಿ ನಾನು ಅಧಿಕಾರ ವಹಿಸಿಕೊಂಡ ಬಳಿಕ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಹೇಳಿದರು.
ಬ್ರಹ್ಮಶ್ರೀ ನಾರಾಯಣ ಗುರುಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನಿಡುವಂತೆ ಸಂದೇಶ ನೀಡಿದ್ದರು ಇಂದು ಅವರ ಆಶಯದಂತೆ ಸಿಗಂದೂರು ಕ್ಷೇತ್ರದ ಧರ್ಮಾಧಿಕಾರಿಗಳು ಗ್ರಾಮೀಣ ಶಾಲೆಗಳ ಅಭಿವೃದ್ಧಿಗೆ ಶ್ರಮಿಸಿದ ಅವಿರತವಾಗಿ ಶ್ರಮಿಸುತ್ತಿರುವುದು ಪ್ರಶಂಶನೀಯ, ರಾಜ್ಯಾದ್ಯಂತ ಸರ್ಕಾರಿ ಶಾಲೆಗಳ ಉಳಿವಿಗೆ ದೇವಾಲಯದ ಈ ಕಾರ್ಯ ಮಾದರಿಯಾಗಿದ್ದು, ಮುಂದಿನ ದಿನಗಳಲ್ಲಿ ಈ ಯೋಜನೆಯು ರಾಜ್ಯಾದ್ಯಂತ ವಿಸ್ತರಣೆಯಾಗಲಿ ಎಂದು ಸಚಿವರು ಹೇಳಿದರು.ಇನ್ನು, ಭೂ ಮಂಜೂರಾತಿಗೆ ರೈತರ 70 ವರ್ಷಗಳ ದಾಖಲೆ ಕೇಳುತ್ತಿರುವುದು ಸರಿಯಲ್ಲ, ಶರಾವತಿ ಮುಳುಗಡೆ ಸಂತ್ರಸ್ತರಿಗೆ ಈ ನಿಯಮವನ್ನು ಸಡಿಲಿಸಿ ವಿಶೇಷ ಪ್ಯಾಕೇಜ್ ಮೂಲಕ ಅನುಭವದ ಮಿತಿಯನ್ನು ಕನಿಷ್ಠ 25 ವರ್ಷಗಳಿಗೆ ಇಳಿಕೆ ಮಾಡಬೇಕು. ಇದರಿಂದ ಸಾವಿರಾರು ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಅನುಕೂಲ ಕಲ್ಪಿಸಬೇಕು ಸಿಗಂದೂರು ಧರ್ಮಾಧಿಕಾರಿ ಡಾ.ಎಸ್.ರಾಮಪ್ಪ ಒತ್ತಾಯಿಸಿದರು.
ಕೆಡಿಪಿ ಸದಸ್ಯ ಜಿ.ಟಿ.ಸತ್ಯನಾರಾಯಣ ಮಾತನಾಡಿ, ಕರೂರು ಹೋಬಳಿಯಲ್ಲಿ 160 ಶಿಕ್ಷಕರು ಕೆಲಸ ಮಾಡುವಲ್ಲಿ ಕೇವಲ 60 ಜನರು ಮಾತ್ರ ಕೆಲಸ ನಿರ್ವಹಿಸುತ್ತಿದ್ದು ಹಲವೆಡೆ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. ಹೊಸ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭವಾದರೆ ಇಲ್ಲಿನ ಮೂಲ ಸೌಕರ್ಯ ಕೊರತೆಯಿಂದ ಆಯ್ಕೆಯಾದ ಶಿಕ್ಷಕರು ಹಿನ್ನೀರ ಭಾಗವನ್ನು ಆಯ್ಕೆ ಮಾಡಿಕೊಳ್ಳಲು ಹಿಂದೇಟು ಹಾಕುತ್ತಾರೆ. ಆದರಿಂದ 2008 ರಲ್ಲಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಶರಾವತಿ ಹಿನ್ನೀರು ಪ್ರದೇಶಕ್ಕೆ ಮೊದಲ ಆದ್ಯತೆ ನೀಡಿ ನಂತರ ರಾಜ್ಯದಲ್ಲಿ ಉಳಿದ ಸ್ಥಾನ ತುಂಬಲಾಗಿತ್ತು. ಅದೇ ರೀತಿ ಮತ್ತೆ ಶರಾವತಿ ಸಂತ್ರಸ್ತರಿಗೆ ಮೊದಲ ಆದ್ಯತೆ ನೀಡಿ ಹಲವು ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಸಚಿವರ ಗಮನ ಸೆಳೆದರು.ಕಾರ್ಯಕ್ರಮದಲ್ಲಿ ರತ್ನಾಕರ ಕಲಗೋಡು, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ, ತುಮರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀದೇವಿ ರಾಮಚಂದ್ರ, ಕುದುರೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಸ್ವತಿ ಗಣಪತಿ, ಮಂಜಪ್ಪ ಮರಸ, ಅರುಣ್ ಪ್ರಸಾದ್ ಮತ್ತಿತರರು ಇದ್ದರು.
ದೇವಿಗೆ ವಿಶೇಷ ಪೂಜೆ:ನವರಾತ್ರಿ ಉತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಚಂಡಿಕಾ ಹವನ. ದೇವಿಗೆ ಮಹಾಭಿಷೇಕ ಪ, ಪಂಚಾಮೃತ ಅಭಿಷೇಕ, ಪಾರಾಯಣ, ನವ ಚಂಡಿಕಾ ಹವನ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ದೇವಸ್ಥಾನದ ಆವರಣ ಹಾಗೂ ಗರ್ಭಗುಡಿಯನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು.ಅರ್ಚಕ ರಘುಪತಿ ಭಟ್ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೇರವೇರಿತು.