ಕಾರ್ಮಿಕರ ಬದುಕಿಗೆ ಸವಲತ್ತುಗಳನ್ನು ಒದಗಿಸುವ ಜವಾಬ್ದಾರಿ ಸರ್ಕಾರದ್ದು, ನಾನು ಸರ್ಕಾರದ ಭಾಗವಾಗಿ ಸವಲತ್ತುಗಳನ್ನು ಒದಗಿಸಲು ಬದ್ದ ಎಂದು ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.
ಕನ್ನಡಪ್ರಭ ವಾರ್ತೆ ಆನವಟ್ಟಿ
ಕಾರ್ಮಿಕರ ಬದುಕಿಗೆ ಸವಲತ್ತುಗಳನ್ನು ಒದಗಿಸುವ ಜವಾಬ್ದಾರಿ ಸರ್ಕಾರದ್ದು, ನಾನು ಸರ್ಕಾರದ ಭಾಗವಾಗಿ ಸವಲತ್ತುಗಳನ್ನು ಒದಗಿಸಲು ಬದ್ದ ಎಂದು ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.ಆನವಟ್ಟಿಯ ವಾಸವಿ ಕಲ್ಯಾಣ ಮಂಟಪದಲ್ಲಿ ಶ್ರಮಶಕ್ತಿ ಕಟ್ಟಡ ಕಾರ್ಮಿಕ ಹಾಗೂ ಅಸಂಘಟಿತ ಕಾರ್ಮಿಕರ ಸಂಘ ಆನವಟ್ಟಿ ಇವರು ಹಮ್ಮಿಕೊಂಡಿದ್ದ, ಕಾರ್ಮಿಕ ದಿನಾಚರಣೆ ಹಾಗೂ ನೂತನ ಸಂಘದ ಉದ್ಘಾಟನೆ, ಪದಗ್ರಹಣ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕಾರ್ಮಿಕರ ಮಕ್ಕಳ ಕಲ್ಯಾಣಕ್ಕಾಗಿ 10 ಎಕರೆಯಲ್ಲಿ ಶಿವಮೊಗ್ಗ ಹಾಗೂ ಸೊರಬದಲ್ಲಿ ಅಂದಾಜು 35 ಕೋಟಿ ರು. ವೆಚ್ಚದಲ್ಲಿ ವಸತಿ ಶಾಲೆ ತೆರೆಯುವ ಪ್ರಸ್ತಾವನೆಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಂಜೂರಾತಿ ನೀಡಿದ್ದು, ಶೀಘ್ರದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.ಯಾವುದೇ ಸಂಘಟನೆಯ ಮುಖಂಡರಾಗಲಿ ಅಥವಾ ಅಧಿಕಾರಿಗಳಾಗಲಿ ಒಗ್ಗಟ್ಟನ್ನು ಒಡೆಯುವ ಕೆಲಸ ಮಾಡಬಾರದು, ಕಾರ್ಮಿಕರು ಒಗ್ಗಟ್ಟಾಗಿದ್ದರೆ ರಾಜ್ಯ ಎತ್ತರಕ್ಕೆ ಬೆಳೆಯುತ್ತದೆ ಎಂದರು. ಕಾರ್ಮಿಕರಾಗಿ ಕೆಲಸ ಮಾಡುವವರಿಗೆ ರಾಜಕೀಯ ಬೇಡ, ಬದಲಾಗಿ ಸಹಕಾರದ ಮನೋಭಾವ ಬೆಳೆಸಿಕೊಂಡು ಉತ್ತಮ ಬದುಕು ರೂಪಿಸಿಕೊಳ್ಳುವುದು ಅವಶ್ಯ ಎಂದರು.
ಕಾರ್ಮಿಕರನ್ನು ಅಲೆದಾಡಿಸದೆ ನಿಗದಿತ ಸಮಯದಲ್ಲಿ ಅವರ ಕೆಲಸ ಕಾರ್ಯಗಳನ್ನು ಮಾಡಿಕೊಂಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.ಎಸ್ಎಸ್‌ಎಲ್‌ಸಿ, ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಹಿರಿಯ ಕಾರ್ಮಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಜಿಲ್ಲಾ ಅಧ್ಯಕ್ಷ ಪ್ರಕಾಶ್ ಹುಣಸವಳ್ಳಿ ಹಾಗೂ ತಾಲೂಕು ಅಧ್ಯಕ್ಷ ಮಂಜುನಾಥ್ ಕೆ ಹಾಗೂ ಸದಸ್ಯರು ಕಾರ್ಮಿಕರ ಭವನ ನಿರ್ಮಾಣ ಮಾಡಿಕೊಡುವಂತೆ ಮನವಿ ಸಲ್ಲಿಸಿದರು.ಸಮಾರಂಭದಲ್ಲಿ ಕೆಎಸ್‌ಸಿಡಬ್ಲ್ಯೂಸಿಯು ರಾಜ್ಯಾಧ್ಯಕ್ಷ ಎನ್.ಪಿ ಸ್ವಾಮಿ, ಜಿಲ್ಲಾಧ್ಯಕ್ಷ ಸುಬ್ರಹ್ಮಣಿ, ಸಂಘದ ಪ್ರಧಾನ ಕಾರ್ಯದರ್ಶಿ ಜೋಗಿಶಂಕರ್, ಗೌರವ ಅಧ್ಯಕ್ಷ ಮಹದೇವಪ್ಪ ತಿಮ್ಮಾಪುರ, ಕಾರ್ಯಾಧ್ಯಕ್ಷ ಗುತ್ಯಪ್ಪ ದೊಡ್ಡಿಕೊಪ್ಪ, ಉಪಾಧ್ಯಕ್ಷ ಮಾರುತಿ ಬಂಕಸಾಣ, ಸಂಚಾಲಕ ಕುಮಾರ್ ಸಾಬರ, ಖಜಾಂಚಿ ಸುರೇಶ್ ತಿಮ್ಮಾಪುರ, ಸಂಘಟನಾ ಕಾರ್ಯದರ್ಶಿ ಕೃಷ್ಣಪ್ಪ ತತ್ತೂರು ಮುಖಂಡರಾದ ಸದಾನಂದಗೌಡ ಬಿಳಗಲಿ, ಕೆ.ಪಿ ರುದ್ರಗೌಡ, ಸುರೇಶ್ ಹಾವಣ್ಣನವರ್ ಇದ್ದರು.