ಕನ್ನಡಪ್ರಭ ವಾರ್ತೆ ಕೋಲಾರ
ವೀರಶೈವ ಲಿಂಗಾಯತ ಸಮುದಾಯ ಭವನಕ್ಕೆ ಜಾಗ ಕೊಡಿಸಲು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಅತಿ ಶೀಘ್ರ ಸಮುದಾಯ ಭವನಕ್ಕೆ ಜಾಗ ನೀಡಲಾಗುವುದು ಎಂದು ಶಾಸಕ ಕೊತ್ತೂರು ಮಂಜುನಾಥ್ ಭರವಸೆ ನೀಡಿದರು.ನಗರದ ಟಿ.ಚನ್ನಯ್ಯ ರಂಗಮಂದಿರಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ವೀರಶೈವ ಸಮುದಾಯದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಾಸಕರು ಮಾತನಾಡಿದರು.
ಮಠಾಧೀಶರ ಆಶೀರ್ವಾದ ಎಲ್ಲರ ಮೇಲಿದ್ದು, ಮಕ್ಕಳಿಗೆ ವಿದ್ಯಾಬ್ಯಾಸದ ನಂತರ ಒಳ್ಳೆಯ ಕೆಲಸ ಸಿಗಬೇಕು, ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಗುರುಗಳ ಆಶೀರ್ವಾದ ಪಡೆದು ಅವರ ಮಾರ್ಗದರ್ಶನದೊಂದಿಗೆ ಜೀವನ ರೂಪಿಸಿಕೊಳ್ಳಬೇಕು ಎಂದರು.ಮಠದಲ್ಲಿ ಗುರುಗಳು ಇರುವುದರಿಂದಲೇ ಸಂಸ್ಕೃತಿ, ಸಿದ್ಧಾಂತಗಳು ಉಳಿದುಕೊಂಡಿವೆ, ವರ್ಷಕ್ಕೊಮ್ಮೆ ನಡೆಯುವ ಮಹನೀಯರ ಜಯಂತಿಗೆ ಆಗಮಿಸಿ ಯಶಸ್ವಿಗೊಳಿಸುವ ಮೂಲಕ ಮಹನೀಯರ ಇತಿಹಾಸವನ್ನು ತಿಳಿದುಕೊಳ್ಳಲು ಉತ್ತಮ ವೇದಿಕೆಯಾಗಿದೆ, ಮುಂದೆ ವೀರಶೈವ ಲಿಂಗಾಯತ ಸಮುದಾಯ ಭವನಕ್ಕೆ ಸ್ಥಳದ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆ ನೀಡಿದರು.
ಬೆಳ್ಳಾವಿ ಸಂಸ್ಥಾನ ಮಠದ ಶ್ರೀ ಪಟ್ಟದ ಮಹಾಂತ ಶಿವಾಚಾರ್ಯ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಲಿಂಗಾಯತರು ರಾಜ್ಯದಲ್ಲಿ ಬಹುಸಂಖ್ಯಾತರು, ಜಿಲ್ಲೆಯಲ್ಲಿ ಅಲ್ಪಸಂಖ್ಯಾತರಾಗಿದ್ದರೂ ರೇಣುಕಾಚಾರ್ಯ ಹಾಗೂ ಬಸವಣ್ಣ ಜಯಂತಿಗಳನ್ನು ಅದ್ಧೂರಿ ಆಚರಣೆ ಮಾಡುವುದು ವಾಡಿಕೆ. ಕಳೆದ ವರ್ಷಕ್ಕಿಂತ ಈ ವರ್ಷ ಸಮುದಾಯ ಜನರು ಕಾರ್ಯಕ್ರಮದಲ್ಲಿ ಹೆಚ್ಚಿನದಾಗಿ ಭಾಗವಹಿಸಿರುವುದು ಸಂತಸ ಮೂಡಿಸಿದೆ ಎಂದರು.
ನಾಗಲಾಪುರ ಸಂಸ್ಥಾನ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ಭಾರತ ದೇಶ ಪುಣ್ಯ ಭೂಮಿ. ಇದು ಸಾವಿರಾರು ಸಂತರು, ಮಹಾಂತರು ಜನ್ಮ ತಾಳಿದ ಭೂಮಿ, ಈ ದೇಶದಲ್ಲಿ ಅಧರ್ಮ, ಅಟ್ಟಹಾಸ ಮೆರೆಯುವಾಗ ಒಬ್ಬೊಬ್ಬ ಪುಣ್ಯ ಪುರುಷ ಹುಟ್ಟಿ ಶಾಂತಿ, ನೆಮ್ಮದಿ ತಂದುಕೊಟ್ಟಿದ್ದಾರೆ. ಮಾನವನನ್ನು ದೇವನನ್ನಾಗಿ ಮಾಡಿದ್ದು ರೇಣುಕಾಚಾರ್ಯರು ಎಂದರು.
ನಿವೃತ್ತ ಪ್ರಾಧ್ಯಾಪಕ ಎ.ಆರ್ ಶಿವಕುಮಾರ್ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು, ಅಪರ ಜಿಲ್ಲಾಧಿಕಾರಿ ಮಂಗಳ, ಸಮುದಾಯ ಮುಖಂಡರು ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಎನ್. ವಿಜಯಲಕ್ಷ್ಮೀ ಸ್ವಾಗತಿಸಿದರು, ಮಾಲೂರು ಗಾಯಿತ್ರಿ ನಿರೂಪಿಸಿ ವಂದಿಸಿದರು.ಕಾರ್ಯಕ್ರಮದಲ್ಲಿ ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ವೈ. ಶಿವಕುಮಾರ್, ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸೀಸಂದ್ರ ಗೋಪಾಲಗೌಡ, ಮೈಲಾಂಡಹಳ್ಳಿ ಮುರಳಿ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ಸುರೇಶ್, ಸಮುದಾಯ ಮುಖಂಡರಾದ ಸಿದ್ದಲಿಂಗ ಒಡೆಯರ್, ರಾಮಸಂದ್ರ ಕುಮಾರ್, ವೀರೇಂದ್ರ ಪಾಟೀಲ್, ಬಿಆರ್ ಎಂ ಚನ್ನಪ್ಪ, ಶರಣೆಯರ ಬಳಗದ ಜಿಲ್ಲಾಧ್ಯಕ್ಷೆ ಉಷಾ ಗಂಗಾಧರ್ ಮುಂತಾದವರು ಇದ್ದರು.