ಕಾಂಗ್ರೆಸ್‌ ಸರ್ಕಾರ ಅಪಾರ್ಟ್‌ಮೆಂಟ್‌ ನಿವಾಸಿಗಳು ಹಾಗೂ ಮನೆ ಖರೀದಿದಾರರ ಪರ ನಿಲ್ಲಲಿದೆ. ಈ ಸರ್ಕಾರ ನನ್ನದಲ್ಲ, ನಿಮ್ಮದು. ಮುಂಬರುವ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗಳ ಚುನಾವಣೆಯಲ್ಲಿ ನಿಮ್ಮ ಸಹಾಯವನ್ನು ಮತಗಳ ಮೂಲಕ ಬಯಸುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಾಂಗ್ರೆಸ್‌ ಸರ್ಕಾರ ಅಪಾರ್ಟ್‌ಮೆಂಟ್‌ ನಿವಾಸಿಗಳು ಹಾಗೂ ಮನೆ ಖರೀದಿದಾರರ ಪರ ನಿಲ್ಲಲಿದೆ. ಈ ಸರ್ಕಾರ ನನ್ನದಲ್ಲ, ನಿಮ್ಮದು. ಮುಂಬರುವ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗಳ ಚುನಾವಣೆಯಲ್ಲಿ ನಿಮ್ಮ ಸಹಾಯವನ್ನು ಮತಗಳ ಮೂಲಕ ಬಯಸುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಶನಿವಾರ ಕರ್ನಾಟಕ ಅಪಾರ್ಟ್‌ಮೆಂಟ್‌ (ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕ 2025 ಕುರಿತು ಅಪಾರ್ಟ್‌ಮೆಂಟ್‌ ಅಸೋಸಿಯೇಷನ್ ಪ್ರತಿನಿಧಿಗಳೊಂದಿಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸಂವಾದ ನಡೆಸಿ ಮಾತನಾಡಿದ ಅವರು, ಅಪಾರ್ಟ್‌ಮೆಂಟ್‌ಗಳಲ್ಲಿ ಸಮಸ್ಯೆಗಳ ಬಗ್ಗೆ ಅರಿವಿದೆ. ಅದಕ್ಕಾಗಿಯೇ ನಗರದಲ್ಲಿ ಅಪಾರ್ಟ್‌ಮೆಂಟ್ ಹೊಂದಿದ್ದೇನೆ. ನಿಮ್ಮ ಜತೆಗೆ ನಿಂತು, ಸಮಸ್ಯೆ ಪರಿಹರಿಸಲು ಬದ್ಧನಾಗಿದ್ದೇನೆ ಎಂದರು.

ನಿಮಗೆ ಸಹಾಯ ಮಾಡುವುದರ ಜತೆಗೆ ನಿಮ್ಮ ಸಹಾಯವನ್ನು ಮತಗಳ ಮೂಲಕ ಬಯಸುತ್ತೇನೆ. ಜಿಬಿಎ ಚುನಾವಣೆಯಲ್ಲಿ ನಮ್ಮ ಜತೆ ನಿಲ್ಲಬೇಕು. ನಿಮ್ಮ ಮೇಲೆ ನಂಬಿಕೆ ಇಟ್ಟಿದ್ದೇನೆ. ಅದಕ್ಕಾಗಿ ಯಾರೂ ಜಾರಿಗೆ ತರದ ಕಾನೂನನ್ನು ಜಾರಿಗೆ ತರಲು ಮುಂದಾಗಿದ್ದೇನೆ. ನಿರಾಸೆ ಮಾಡಬೇಡಿ. ಚುನಾವಣೆ ಸಮಯದಲ್ಲಿ 100 ಅಪಾರ್ಟ್‌ಮೆಂಟ್‌ಗಳಿಗೆ ಭೇಟಿ ನೀಡಿ ಬೆಂಬಲ ನೀಡಿ ಎಂದು ಕೇಳಿಕೊಂಡಿದ್ದೆ. ಆಗ ಬೆಂಗಳೂರಿನಲ್ಲಿ ಸುಮಾರು 6 ಸಾವಿರ ಕೊಳವೆಬಾವಿ ಬತ್ತಿದ್ದಾಗ ಎಷ್ಟೇ ಕಷ್ಟ ಆದರೂ ತೊಂದರೆ ಆಗಬಾರದು ಎಂದು ಸಹಾಯ ಮಾಡಿದ್ದೆ. ಆದರೆ, ಚುನಾವಣೆ ಫಲಿತಾಂಶ ಬಂದಾಗ ನೀವು ನಮಗೆ ಬೆಂಬಲ ನೀಡಲಿಲ್ಲ. ಕಷ್ಟಪಟ್ಟು ಸಹಾಯ ಮಾಡಿದರೂ ನಮಗೆ ಕರುಣೆ ತೋರಲಿಲ್ಲ. ಆಗ ನಾವು ಯಾಕೆ ಸಹಾಯ ಮಾಡಬೇಕು ಎಂದು ಅನಿಸಿದ್ದು ನಿಜ ಎಂದು ಬೇಸರ ವ್ಯಕ್ತಪಡಿಸಿದರು.

ಶೇ.19 ರಷ್ಟು ಅಪಾರ್ಟ್‌ಮೆಂಟ್‌ ವಾಸಿಗಳು: ಬೆಂಗಳೂರಿನ ಜನಸಂಖ್ಯೆ ಪೈಕಿ ಶೇ.19 ಜನ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿದ್ದಾರೆ. ನಗರದಲ್ಲಿ 2 ಲಕ್ಷ ವಿದೇಶಿ ಪಾಸ್ ಪೋರ್ಟ್ ಹೊಂದಿರುವವರು ಇದ್ದಾರೆ. ಕ್ಯಾಲಿಫೋರ್ನಿಯದಲ್ಲಿ 13 ಲಕ್ಷ ಐಟಿ ವೃತ್ತಿಪರರು, ಬೆಂಗಳೂರಿನಲ್ಲಿ 25 ಲಕ್ಷ ಐಟಿ ವೃತ್ತಿಪರರು ಇದ್ದಾರೆ. ಇದರಲ್ಲಿ ಬಹುತೇಕರು ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿದ್ದಾರೆ.

1972ರಲ್ಲಿ ಅಪಾರ್ಟ್‌ಮೆಂಟ್‌ ಕಾಯ್ದೆ ಬಂದಿದ್ದು, ಮತ್ತೆ ಯಾವುದೇ ಸರ್ಕಾರಗಳು ಅಪಾರ್ಟ್‌ಮೆಂಟ್‌ಗಳಿಗೆ ಶಕ್ತಿ ತುಂಬಲಿಲ್ಲ. ಬೆಂಗಳೂರು ಪೂರ್ವ ನಿಯೋಜಿತ ನಗರವಲ್ಲ. ಆದರೂ ಭವಿಷ್ಯದ ದೃಷ್ಟಿಯಿಂದ ಉತ್ತಮ ಯೋಜನೆ ರೂಪಿಸಬೇಕು. ಹೈದರಾಬಾದ್ ನಲ್ಲಿ 30 ಸಾವಿರ ಎಕರೆಯಲ್ಲಿ ಭವಿಷ್ಯದ ನಗರ ನಿರ್ಮಾಣ ಮಾಡುತ್ತಿದ್ದಾರೆ. ನಮ್ಮಲ್ಲಿ ಬಿಡದಿ, ನಂದಗುಡಿ ಹಾಗೂ ಸೋಲೂರಿನಲ್ಲಿ ನೂತನ ನಗರ ನಿರ್ಮಾಣ ಮಾಡುತ್ತಿದ್ದೇವೆ. ಬೆಂಗಳೂರಿನ ಮೇಲಿರುವ ಒತ್ತಡ ಇಳಿಸಬೇಕು ಎಂದರು.

ವಿಧೇಯಕ ಶಾಸಕರ ಧ್ವನಿ: ಈ ವಿಧೇಯಕ ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ಇರಬೇಕು. ಜನರ ಧ್ವನಿ, ಶಾಸಕರ ಧ್ವನಿ ಸರ್ಕಾರದ ಧ್ವನಿ ಆಗಬೇಕು. ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಆತುರದಲ್ಲಿ ವಿಧೇಯಕ ರೂಪಿಸುವ ಮುನ್ನ ನಿಮ್ಮೆಲ್ಲರ ಅಭಿಪ್ರಾಯ ತಿಳಿಯಲು ಬಂದಿದ್ದೇನೆ. ನಿಮ್ಮ ಅಭಿಪ್ರಾಯದ ಜತೆಗೆ ಸದನದಲ್ಲಿ ಶಾಸಕರೊಂದಿಗೆ ಚರ್ಚೆ ಮಾಡಲಾಗುವುದು. ವಿಧೇಯಕ ಇಡೀ ರಾಜ್ಯಕ್ಕೆ ಅನ್ವಯವಾಗಲಿದೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಬದಲಾವಣೆ ತರಬೇಕೆಂದು ಬಹಳ ಉತ್ಸಾಹದಿಂದ ನಗರದ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ಬಹಳ ಅಧ್ಯಯನ ಮಾಡಿ ಟನೆಲ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದೇನೆ. ಯಾರು ಏನೇ ಟೀಕೆ ಮಾಡಿದರೂ ಈ ಯೋಜನೆ ಮಾಡಿಯೇ ತೀರುತ್ತೇನೆ. ಪ್ರಧಾನಿ ಹಾಗೂ ಕೇಂದ್ರ ಸಚಿವ ನಿತೀನ್ ಗಡ್ಕರಿ ಈ ಯೋಜನೆ ಮುಂದುವರಿಸುವಂತೆ ತಿಳಿಸಿದ್ದಾರೆ ಎಂದರು.

ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯಾ, ಶಾಸಕ ರಿಜ್ವಾನ್ ಹರ್ಷದ್, ರಾಜ್ಯಸಭಾ ಮಾಜಿ ಸದಸ್ಯ ರಾಜೀವ್ ಗೌಡ, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್, ಅಪಾರ್ಟ್ ಮೆಂಟ್ ಅಸೋಸಿಯೇಷನ್‌ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಸಲಹೆಗಳನ್ನು ಈಮೇಲ್‌ ಮಾಡಿ

ಸಂವಾದ ಕಾರ್ಯಕ್ರಮದಲ್ಲಿ ಸಲಹೆ ನೀಡಲು ಸಾಧ್ಯವಾಗದವರು, gbasuggesion@gmail.com ಗೆ ಸಲಹೆ ಕಳುಹಿಸಬಹುದಾಗಿದೆ. 10 ದಿನಗಳಲ್ಲಿ ಸಲಹೆ ಕಳುಹಿಸಿ. ಎಲ್ಲವನ್ನು ಪರಿಶೀಲಿಸುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ವಿಧೇಯಕದಲ್ಲಿ ಏನೇನಿದೆ?ಕರ್ನಾಟಕ ಅಪಾರ್ಟ್‌ಮೆಂಟ್‌ ಮಾಲೀಕತ್ವ ಮತ್ತು ನಿರ್ವಹಣೆ ವಿಧೇಯಕ 2025ದ ಬಗ್ಗೆ ವಿವರಿಸಿದ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌, ಹೊಸ ಕಾಯ್ದೆಯು 8 ಫ್ಲ್ಯಾಟ್‌ಗಿಂತ ಹೆಚ್ಚಿದ್ದರೆ ಮಾತ್ರ ಅನ್ವಯವಾಗಲಿದೆ. ಕರ್ನಾಟಕ ರಾಜ್ಯ ಅಪಾರ್ಟ್‌ಮೆಂಟ್‌ ಕಾಯ್ದೆ-1971 ಸೇರಿದಂತೆ ಮೂರು ಕಾಯ್ದೆಯಡಿ ಅಪಾರ್ಟ್‌ಮೆಂಟ್‌ ಅಸೋಸಿಯೇಷನ್‌ ನೋಂದಣಿ ಮಾಡಿಕೊಳ್ಳಲಾಗುತ್ತಿತ್ತು. ಯಾವ ಇಲಾಖೆಯೂ ನಿಗಾ ವಹಿಸುವುದಕ್ಕೆ ಸಾಧ್ಯವಾಗುತ್ತಿಲ್ಲ.

ಇದರಿಂದ ಅಸೋಸಿಯೇಷನ್‌ಗಳಿಗೆ ಕಡಿವಾಣ ಇಲ್ಲದಂತಾಗಿದೆ. ಇನ್ನು ಮುಂದೆ ಹೊಸ ಕಾಯ್ದೆಯಡಿ ನೋಂದಾಯಿಸಿಕೊಂಡು ನಗರಾಭಿವೃದ್ಧಿ ಇಲಾಖೆ ನಿಗಾ ವಹಿಸಲಿದ್ದು, ಗ್ರೂಪ್‌ ಬಿ.ದರ್ಜೆಯ ಅಧಿಕಾರಿಗೆ ಅಧಿಕಾರ ನೀಡಲಾಗಿದೆ. ಅಪಾರ್ಟ್‌ಮೆಂಟ್‌ಗಳಲ್ಲಿ ಸಾಮಾನ್ಯ ಸೇವೆಗಳಿಗೆ ನಿರ್ವಹಣೆ ಶುಲ್ಕದ ಮೂಲಕ ಸಂಗ್ರಹಿಸಬೇಕು. ವಿಶೇಷ ಸೇವೆಗಳಿಗೆ ಬಳಕೆದಾರರಿಂದ ಶುಲ್ಕ ಪಡೆಯಬಹುದಾಗಿದೆ.

ಫ್ಲ್ಯಾಟ್‌ ಮಾಲೀಕನಿಗೆ ಸೂಪರ್‌ ಬಿಲ್ಡಪ್‌ ಪ್ರದೇಶಕ್ಕೆ ತಕ್ಕಂತೆ ಇತರೆ ಸ್ಥಳದಲ್ಲಿ ಪಾಲು ದೊರೆಯಬೇಕು. ಅಪಾರ್ಟ್‌ಮೆಂಟ್‌ ಮಾಲೀಕ ಅಥವಾ ಬಿಲ್ಡರ್‌ ಹೆಸರಿನಲ್ಲಿ ಭೂಮಿ ಉಳಿಯಬಾರದು. ಹೊಸ ಕಾಯ್ದೆ ಜಾರಿ ಬಳಿಕ ಒಂದು ವರ್ಷದಲ್ಲಿ ಕಾಮನ್‌ ಪ್ರದೇಶವನ್ನು ಫ್ಲ್ಯಾಟ್‌ ಮಾಲೀಕರಿಗೆ ವಿಂಗಡಿಸಿ ನೋಂದಾಯಿಸಬೇಕು. ಅಪಾರ್ಟ್‌ಮೆಂಟ್‌ ಮರು ನಿರ್ಮಾಣಕ್ಕೆ ಶೇ.75 ರಷ್ಟು ಮಂದಿ ಒಪ್ಪಿಗೆ ನೀಡಿದರೆ ಮಾಡಬಹುದಾಗಿದೆ. ಇಷ್ಟು ದಿನ ಒಂದು ಫ್ಲ್ಯಾಟ್‌ ಮಾಲೀಕ ಒಪ್ಪಿಗೆ ನೀಡದಿದ್ದರೆ ಸಾಧ್ಯವಾಗುತ್ತಿರಲಿಲ್ಲ. ಮುಂಬೈನಲ್ಲಿ ಶೇ.50 ರಷ್ಟು ನಿಗದಿ ಪಡಿಸಲಾಗಿದೆ. ರಾಜ್ಯದಲ್ಲಿ ಶೇ.75 ರಷ್ಟು ನಿಗದಿ ಪಡಿಸಲಾಗಿದೆ ಎಂದು ವಿವರಿಸಿದರು.

ನಿಮಗೆ ಸಹಾಯ ಮಾಡುವುದರ ಜತೆಗೆ ನಿಮ್ಮ ಸಹಾಯವನ್ನು ಮತಗಳ ಮೂಲಕ ಬಯಸುತ್ತೇನೆ. ಜಿಬಿಎ ಚುನಾವಣೆಯಲ್ಲಿ ನಮ್ಮ ಜತೆ ನಿಲ್ಲಬೇಕು. ನಿಮ್ಮ ಮೇಲೆ ನಂಬಿಕೆ ಇಟ್ಟಿದ್ದೇನೆ. ಅದಕ್ಕಾಗಿ ಯಾರೂ ಜಾರಿಗೆ ತರದ ಕಾನೂನನ್ನು ಜಾರಿಗೆ ತರಲು ಮುಂದಾಗಿದ್ದೇನೆ. ನಿರಾಸೆ ಮಾಡಬೇಡಿ.

-ಡಿ.ಕೆ. ಶಿವಕುಮಾರ್‌, ಉಪಮುಖ್ಯಮಂತ್ರಿ