ಮಾಗಡಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ

| Published : Mar 18 2025, 12:34 AM IST

ಸಾರಾಂಶ

ಮಾಗಡಿ: ತಾಲೂಕಿನ ಸರ್ವಾಂಗಿನ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಹೇಳಿದರು.

ಮಾಗಡಿ: ತಾಲೂಕಿನ ಸರ್ವಾಂಗಿನ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಹೇಳಿದರು.

ತಾಲೂಕಿನ ಹಲಸಬೆಲೆ ಗ್ರಾಮದ ಶ್ರೀ ಮಹಾಲಿಂಗೇಶ್ವರ ಸ್ವಾಮಿ ದೇವಸ್ಥಾನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಾವನದುರ್ಗ ಉದ್ಯಾನವನಕ್ಕೆ ಈಗಾಗಲೇ 1 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಇನ್ನೊಂದು ಕೋಟಿ ಬಿಡುಗಡೆ ಮಾಡಲಿದೆ. ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು ಶಾಸಕ ಬಾಲಕೃಷ್ಣ ಕೂಡ ಅನುಭವಿ ರಾಜಕಾರಣಿ. ಅವರಿಂದ ಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಆಗಲಿದೆ ಎಂದು ಸಚಿವರು ತಿಳಿಸಿದರು.

ಹಿಂದಿನಿಂದಲೂ ಪ್ರಾಣಿ - ಮನುಷ್ಯನ ಸಂಘರ್ಷ ಇದೆ:

ರಾಮನಗರ ಜಿಲ್ಲೆಯಲ್ಲಿ ಆನೆ, ಚಿರತೆ, ಕರಡಿಗಳ ಹಾವಳಿ ಹೆಚ್ಚಿರುವ ಮಾಧ್ಯಮಗಳ ಪ್ರಶ್ನೆಗಳಿಗೆ, ಅರಣ್ಯ ಸಚಿವ ಈಶ್ವರ ಖಂಡ್ರೆ ಪ್ರಾಣಿ ಮತ್ತು ಮನುಷ್ಯರ ಸಂಘರ್ಷ ಹಿಂದಿನಿಂದಲೂ ಇದೆ. ಇದೀಗ ಕಾಡು ಕಡಿಮೆಯಾಗಿ ನಗರೀಕರಣ ಹೆಚ್ಚಾಗುತ್ತಿದ್ದು ಆಹಾರ ಅರಿಸಿ ಪ್ರಾಣಿಗಳು ನಾಡಿನತ್ತ ಬರುತ್ತಿವೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಸಾಕಷ್ಟು ಕ್ರಮ ವಹಿಸುತ್ತಿದೆ. ಆನೆಗಳ ಸೆರೆ ಹಿಡಿದು ಮತ್ತೆ ಕಾಡಿಗೆ ರವಾನಿಸಲಾಗುತ್ತಿದೆ. ಆನೆಗಳಿಗೆ ಕಾಡಿನಲ್ಲಿ ಆಹಾರ, ನೀರು ಕೊಡುತ್ತಿದ್ದು ತಜ್ಞರ ಸಮಿತಿ ರಚಿಸಿ ಆನೆಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಿ ಶಾಶ್ವತ ಪರಿಹಾರ ಕಲ್ಪಿಸುವುದಕ್ಕೂ ಇಲಾಖೆ ಕ್ರಮ ಕೈಗೊಳ್ಳಲಾತ್ತಿದೆ. ಆನೆ ಕಾರ್ಯಾಚರಣೆ ಪಡೆ ಹೊರಗುತ್ತಿಗೆ ಆಧಾರದಡಿ 30-40 ಜನಗಳನ್ನು ಕೆಲಸಕ್ಕೆ ತೆಗೆದುಕೊಂಡು ಅವರಿಗೆ ತರಬೇತಿ ನೀಡಿ ವಾಹನ ಸೇರಿದಂತೆ ಇತರ ಸೌಲಭ್ಯಗಳನ್ನು ನೀಡಿ ಆನೆಗಳ ಚಟುವಟಿಕೆ ಮತ್ತು ನಿಯಂತ್ರಣದ ಬಗ್ಗೆ ಇಲಾಖೆ ನಿಗಾ ವಹಿಸುತ್ತಿದೆ. ಪರಿಸರ ಸಂರಕ್ಷಣೆಗೆ ಸಸಿ ನಡೆಸುವುದು, ವೃಕ್ಷ ಅಭಿವೃದ್ಧಿ, ಇಲಾಖೆ ಧ್ಯೇಯವಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

ಹಲಸಬೆಲೆ ಗ್ರಾಮದ ಮಹಾಲಿಂಗೇಶ್ವರ ದೇವಸ್ಥಾನ ಉದ್ಘಾಟನೆಗೆ ಬರಲೇಬೇಕು ಎಂದು ಶಾಸಕರು ಹಾಗೂ ಮಾಜಿ ಸಚಿವ ಎಚ್.ಎಂ.ರೇವಣ್ಣ ಒತ್ತಡ ಹಾಕಿದ ಹಿನ್ನೆಲೆಯಲ್ಲಿ ಅಧಿವೇಶನ ಇದ್ದರೂ ದೇವಸ್ಥಾನ ಉದ್ಘಾಟನಾ ಸಮಾರಂಭಕ್ಕೆ ಭಾಗವಹಿಸಿದ್ದು ದೇವರ ಕೃಪೆಯಿಂದ ಎಲ್ಲರಿಗೂ ಒಳಿತಾಗಲಿ ಎಂದು ಹಾರೈಸಿದರು.

ಶಾಸಕ ಬಾಲಕೃಷ್ಣ ಮಾತನಾಡಿ, ಹಲಸಬೆಲೆ ಗ್ರಾಮದಲ್ಲಿ ಹೆಚ್ಚು ದೇವಾಲಯಗಳಿದ್ದು, ಉತ್ಸವಗಳನ್ನು ವಿಜೃಂಭಣೆಯಿಂದ ನೆರವೇರಿಸಲಾಗುತ್ತದೆ. ಈಗ ಹೊಸ ದೇವಾಲಯದಲ್ಲಿ ಪ್ರತಿದಿನ ದೇವರ ಆರಾಧನೆಯಿಂದ ಗ್ರಾಮದಲ್ಲಿ ಶಾಂತಿ ನೆಲೆಸಲಿದೆ. ಕ್ಷೇತ್ರದ ಅಭಿವೃದ್ಧಿಗೆ ಈಶ್ವರ್ ಖಂಡ್ರೆ ಕಾಣಿಕೆ ಹೆಚ್ಚಾಗಿರಬೇಕು ಎಂದರು. ಕಾರ್ಯಕ್ರಮದಲ್ಲಿ ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿದರು.

ಪೂಜಾ ಕಾರ್ಯಕ್ರಮ: ನೂತನ ದೇವಸ್ಥಾನ ಉದ್ಘಾಟನೆ ಅಂಗವಾಗಿ ಗಂಗಪೂಜೆಯೊಂದಿಗೆ ಆಲಯ ಪ್ರವೇಶ, ಧ್ವಜಾರೋಹಣ, ಗಣಪತಿ ಪೂಜೆ, ಪುಣ್ಯಾಃ, ದೇವನಾಂದಿ ಗಣಪತಿ ಹೋಮ, ವಾಸ್ತು ಹೋಮ ನೂತನ ವಿಗ್ರಹಗಳಿಗೆ ಪಂಚಗವ್ಯ ಪ್ರೋಕ್ಷಣೆ ನಡೆಯಿತು.

ಸೋಮವಾರ ಬೆಳಗ್ಗೆ ನೂತನ ವಿಗ್ರಹ ಪ್ರತಿಷ್ಠಾಪನೆ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ,. ಗಣಪತಿ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ರುದ್ರಾಹೋಮ, ದುರ್ಗಾ ಹೋಮ, ಪ್ರಧಾನ ದೇವರ ಹೋಮ, ಪೂರ್ಣಾಹುತಿ, ಗೋಪುರ ಕಳಸಾರೋಹಣ, ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ನಡೆಯಿತು.

ಕಾರ್ಯಕ್ರಮದಲ್ಲಿ ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಅಶೋಕ್, ವಿಎಸ್ಎಸ್ ಎನ್ ಅಧ್ಯಕ್ಷ ಜೆ.ಪಿ.ಚಂದ್ರೇಗೌಡ, ತಾ.ಪಂ. ಸದಸ್ಯೆ ಸುಮಾ ರಮೇಶ್ ಇತರರು ಭಾಗವಹಿಸಿದ್ದರು.

(ಫೋಟೋ ಕ್ಯಾಪ್ಷನ್‌)

ಮಾಗಡಿ ತಾಲೂಕಿನ ಹಲಸಬೆಲೆ ಶ್ರೀ ಮಹಾಲಿಂಗೇಶ್ವರಸ್ವಾಮಿ ದೇವಸ್ಥಾನ ಉದ್ಘಾಟನಾ ಸಮಾರಂಭದಲ್ಲಿ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ, ಶಾಸಕ ಬಾಲಕೃಷ್ಣ , ಮಾಜಿ ಸಚಿವ ಎಚ್.ಎಂ.ರೇವಣ್ಣ ಇತರರಿದ್ದರು.