ಅಳ್ನಾವರದ ಸಮಗ್ರ ಅಭಿವೃದ್ಧಿಗೆ ಬದ್ಧ

| Published : Oct 05 2025, 01:01 AM IST

ಸಾರಾಂಶ

ಹೊಸ ತಾಲೂಕು ಕೇಂದ್ರಕ್ಕೆ ಅವಶ್ಯವಿರುವ ಕಚೇರಿ ಆರಂಭಿಸಲು ಹಾಗೂ ಹೊಸ ಕಟ್ಟಡ ಕಟ್ಟಲು ನಿವೇಶನ ಗುರುತಿಸುವ ಕಾರ್ಯ ನಡೆದಿದೆ ಎಂದು ಸಚಿವ ಸಂತೋಷ ಲಾಡ್‌ ಹೇಳಿದರು.

ಅಳ್ನಾವರ:

ಅಳ್ನಾವರದ ಸಮಗ್ರ ಅಭಿವೃದ್ಧಿಗೆ ತಾವು ಸದಾ ಬದ್ಧವಾಗಿದ್ದು, ಹಂತ-ಹಂತವಾಗಿ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಶನಿವಾರ ಹಮ್ಮಿಕೊಂಡ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜನಪ್ರತಿನಿಧಿಗಳ ಅಹವಾಲು ಆಲಿಸಿ ಮಾತನಾಡಿದ ಅವರು, ಹೊಸ ತಾಲೂಕು ಕೇಂದ್ರಕ್ಕೆ ಅವಶ್ಯವಿರುವ ಕಚೇರಿ ಆರಂಭಿಸಲು ಹಾಗೂ ಹೊಸ ಕಟ್ಟಡ ಕಟ್ಟಲು ನಿವೇಶನ ಗುರುತಿಸುವ ಕಾರ್ಯ ನಡೆದಿದೆ ಎಂದರು.

ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಕಡಬಗಟ್ಟಿ ಕ್ರಾಸ್‌ನಿಂದ ಪದವಿ ಕಾಲೇಜು ವರೆಗಿನ ರಸ್ತೆ ಅಭಿವೃದ್ಧಿಪಡಿಸಲಾಗುವುದು. ಪಟ್ಟಣ ಪಂಚಾಯಿತಿ ಆವರಣದಲ್ಲಿ ₹ ೩ ಕೋಟಿ ವೆಚ್ಚದ ಅಧುನಿಕ ಶೈಲಿಯ ಸಭಾಭವನ, ಬಸ್ ನಿಲ್ದಾಣದ ಆಧುನಿಕರಣ, ಪಟ್ಟಣಕ್ಕೆ ಮಂಜೂರಾದ ಸರ್ಕಾರಿ ಪಿಯು ಕಾಲೇಜಿಗ ಬೇಕಾದ ನಿವೇಶನ ಒದಗಿಸಿ ಕಟ್ಟಡ ನಿರ್ಮಿಸಲಾಗುವುದು ಎಂದ ಸಚಿವರು, ಈ ಭಾಗದ ಜನಪ್ರತಿನಿಧಿಗಳು, ಸಾರ್ವಜನಿಕರು ತಮ್ಮ ಮಕ್ಕಳನ್ನು ಸರ್ಕಾರಿ ಕಾಲೇಜನಲ್ಲಿ ಓದಿಸಬೇಕೆಂದು ಕರೆ ನೀಡಿದರು.

ಪಟ್ಟಣವನ್ನು ಪುರಸಭೆಯಾಗಿ ಮೇಲ್ದೆರ್ಜೆಗೇರಿಸುವುದು, ಆಶ್ರಯ ಕಾಲನಿಯಲ್ಲಿ ಸಮುದಾಯ ಭವನ ನಿರ್ಮಾಣ, ಪಟ್ಟಣದಲ್ಲಿ ಅರಣ್ಯ ಕಾಲೇಜು ಪ್ರಾರಂಭಿಸುವುದು, ಕೈಗಾರಿಕಾ ವಲಯಕ್ಕೆ ಬೇಕಾದ ಅವಶ್ಯ ನಿವೇಶನ, ಆಶ್ರಯ ಯೋಜನೆಯಡಿ ಬಡವರಿಗೆ ಮನೆ ಹಂಚಿಕೆ, ಹಳ್ಳ, ಕೆರೆಗಳಿಗೆ ಬಾಂದಾರ ನಿರ್ಮಾಣ, ಕುಂಬಾರಕೊಪ್ಪ ರೈಲ್ವೆ ಸೇತುವೆ ಕಾಮಗಾರಿ ಶೀಘ್ರ ಪೂರ್ಣಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಈಚೆಗೆ ಧಾರವಾಡದಲ್ಲಿ ಮಾಜಿ ಸೈನಿಕನ ಮೇಲೆ ನಡೆದ ಹಲ್ಲೆಗೆ ಕಾರಣರಾದವರ ಮೇಲೆ ಕ್ರಮ ಜರುಗಿಸಬೇಕು ಎಂದು ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಸಚಿವರಿಗೆ ಮನವಿ ಸಲ್ಲಿಸಿದರು. ತಾಲೂಕಿನ ದೊಪೆನಟ್ಟಿ ಗ್ರಾಮದಲ್ಲಿ ಅಕ್ರಮವಾಗಿ ಸಾಗುವಳಿ ಮಾಡಿರುವ ಅರಣ್ಯ ಜಮೀನಿನಲ್ಲಿ ಗಿಡ ನೆಡುವ ಮೂಲಕ ಸಾಗುವಳಿದಾರರನ್ನು ಒಕ್ಕಲೆಬ್ಬಿಸಿದ್ದಾರೆ ಎನ್ನುವ ದೂರುಗಳ ಬಗ್ಗೆ ಸಚಿವ ಸಂತೋಷ ಲಾಡ್‌ ಅರಣ್ಯ ಇಲಾಖೆಯ ಅಧಿಕಾರಿಗಳಾದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿವೇಕ ಕವರಿ, ಎಸಿಎಫ್ ಪರಿಮಳ, ಆರ್‌ಎಫ್‌ಒ ಶಕುಂತಲಾ ಅವರಿಂದ ಮಾಹಿತಿ ಪಡೆದುಕೊಂಡರು. ವಾಸ್ತವದಲ್ಲಿ ಜಮೀನು ರೈತರ ವಶದಲ್ಲಿದ್ದರೆ ತೊಂದರೆ ನೀಡದಂತೆ ಸೂಚಿಸಿದರು.

ಸಭೆಯಲ್ಲಿ ಪಪಂ ಅಧ್ಯಕ್ಷ ಅಮೋಲ ಗುಂಜೀಕರ, ಉಪಾಧ್ಯಕ್ಷ ಛಗನಲಾಲ ಪಟೇಲ, ಸ್ಥಾಯಿ ಸಮಿತಿ ಅಧ್ಯಕ್ಷ ಜೈಲಾನಿ ಸುದರ್ಜಿ, ಜಿಪಂ ಸಿಇಒ ಭುವನೇಶ್ವರ ಪಾಟೀಲ, ಉಪ ವಿಭಾಗಾಧಿಕಾರಿ ಶಾಲೆಮ್ ಹುಸೇನ್, ತಹಸೀಲ್ದಾರ್‌ ಬಸವರಾಜ ಬೆಣ್ಣೆಶಿರೂರ, ಯೋಜನಾ ನಿರ್ದೇಶಕ ಅಜೀಜ ದೇಸಾಯಿ, ತಾಪಂ ಇಒ ಪ್ರಶಾಂತ ತುರ್ಕಾಣಿ, ಪಪಂ ಮುಖ್ಯಾಧಿಕಾರಿ ಪ್ರಕಾಶ ಮಗದುಮ್ ಹಾಗೂ ಪಪಂ ಸದಸ್ಯರು, ಅಧಿಕಾರಿಗಳು ಇದ್ದರು.