ಚನ್ನಪಟ್ಟಣ: ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮೂಲಸೌಲಭ್ಯ ಕಲ್ಪಿಸುವುದು ಮೊದಲ ಆದ್ಯತೆಯಾಗಿದೆ. ಚನ್ನಪಟ್ಟಣದ ಸಮಗ್ರ ಅಭಿವೃದ್ಧಿಯೇ ನನ್ನ ಆಡಳಿತ ಗುರಿ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.

ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಗರದ ೩೧ ವಾರ್ಡ್‌ಗಳಲ್ಲಿಯೂ ಕನಿಷ್ಠ ೧ ಕೋಟಿ ವೆಚ್ಚದಲ್ಲಿ ಹಲವು ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ಹಲವು ವಾರ್ಡ್‌ಗಳಲ್ಲಿ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿವೆ. ಅದರಂತೆ ಎಲ್ಲಾ ವಾರ್ಡ್‌ಗಳಲ್ಲಿಯೂ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅರ್ಪಿಸಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ನಗರಸಭೆ ವ್ಯಾಪ್ತಿಯ ವಾರ್ಡ್ ಅಭಿವೃದ್ಧಿಗಾಗಿ ವಿಶೇಷ ಘಟಕ ಯೋಜನೆ ಮತ್ತು ನಗರಸಭೆ ವಿಶೇಷ ಅನುದಾನದಡಿ ೧.೪೭ ಕೋಟಿ ರೂ. ವೆಚ್ಚದಲ್ಲಿ ನಾಲ್ಕನೇ ಹಂತದಲ್ಲಿ ೧೭ನೇ ವಾರ್ಡ್, ೨೨ನೇ ವಾರ್ಡ್, ಮದೀನಾ ಚೌಕ್, ೨೫ನೇ ವಾರ್ಡ್ ನಿಜಾಮಿ ಚೌಕ್, ೨೭ನೇ ವಾರ್ಡ್ ಮೇಹದಿ ನಗರದ ನ್ಯಾಷನಲ್ ಪಬ್ಲಿಕ್ ಶಾಲೆ ಪಕ್ಕ ಸಿಸಿ ರಸ್ತೆ ಮತ್ತು ಚರಂಡಿ, ಕವರಿಂಗ್ ಸ್ಲಾಬ್ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸಿ.ಪಿ.ಯೋಗೇಶ್ವರ್ ಭೂಮಿ ಪೂಜೆ ನೆರವೇರಿಸಿದರು.

ಶಾಲಾ ಕಟ್ಟಡ ಕಾಮಗಾರಿ ಕಳಪೆ, ತನಿಖೆಗೆ ಸೂಚನೆ: ಇದೇ ತಾಲೂಕಿನ ಭೈರಾಪಟ್ಟಣ ಗ್ರಾಮದಲ್ಲಿ ನಿರ್ಮಾಣ ಮಾಡಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಉದ್ಘಾಟನೆಯನ್ನು ಶಾಸಕ ಸಿ.ಪಿ.ಯೋಗೇಶ್ವರ್ ನೆರವೇರಿಸಿದರು.

ಈ ವೇಳೆ ಎಸ್‌ಡಿಎಂಸಿ ಸದಸ್ಯರು, ಶಾಲಾ ಕಟ್ಟಡ ಕಾಮಗಾರಿ ಪ್ರಾರಂಭವಾದಾಗಿನಿಂದಲೂ ಕಾಮಗಾರಿ ಕಳಪೆಯಿಂದ ಕೂಡಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿ, ಬಿಲ್ ತಡೆ ಹಿಡಿಯುವಂತೆ ಮನವಿ ಮಾಡಿದರೂ, ಅಧಿಕಾರಿಗಳು ಸ್ಪಂದಿಸಲಿಲ್ಲ. ಗುತ್ತಿಗೆದಾರರಿಗೆ ಪೂರ್ಣ ಹಣ ಪಾವತಿ ಮಾಡಿ, ಕಾಮಗಾರಿಯ ಪೂರ್ಣಗೊಂಡಿದೆ ಎಂದು ನಿರಪೇಕ್ಷಣಾ ಪತ್ರ ಕೊಟ್ಟಿದ್ದಾರೆ. ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ದೂರಿದರು.


ಈ ವೇಳೆ ಮಾತನಾಡಿದ ಶಾಸಕರು, ಶಾಲಾ ಕಟ್ಟಡವನ್ನು ಸುಮಾರು ೫೯ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಕಟ್ಟಡ ಸಂಪೂರ್ಣ ಕಳಪೆಯಾಗಿರುವ ಆರೋಪವನ್ನು ಗಂಭೀರವಾ ಪರಿಗಣಿಸಿ, ಸಂಪೂರ್ಣ ತನಿಖೆಗೆ ಸಂಬಂಧಪಟ್ಟ ಅಧಿಕಾರಿಗಳಿನ ಸೂಚಿಸಲಾಗುವುದು. ಗುತ್ತಿಗೆದಾರರನ್ನು ಬ್ಲಾಕ್ ಲೀಸ್ಟ್ ಸೇರಿಸಲಾಗುವುದು ಎಂದರು.

ನಗರಸಭೆ ಅಧ್ಯಕ್ಷ ನಾಗೇಶ್ ಬಿ.ಎಂ., ಉಪಾಧ್ಯಕ್ಷ ಲೋಕೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಕೋಟೆ ಚಂದ್ರಶೇಖರ್, ಮಾಜಿ ಅಧ್ಯಕ್ಷ ವಾಸಿಲ್ ಅಲಿ ಖಾನ್, ಸದಸ್ಯರಾದ ಮಹಮದ್ ಸಾಬೀರ್ ಉಲ್ಲಾ, ಮಂಗಳಮ್ಮ, ರಫೀಕ್, ಮತೀನ್, ಪೌರಾಯುಕ್ತ ಮಹೇಂದ್ರ ಹಾಗೂ ಇತರರು ಇದ್ದರು.

ಪೊಟೋ೧೨ಸಿಪಿಟಿ೧:

ಚನ್ನಪಟ್ಟಣ ನಗರದಲ್ಲಿ ಚರಂಡಿ ಹಾಗೂ ಸಿ.ಸಿ.ರಸ್ತೆ ಕಾಮಗಾರಿಗೆ ಶಾಸಕ ಸಿ.ಪಿ.ಯೋಗೇಶ್ವರ್ ಗುದ್ದಲಿಪೂಜೆ ನೆರವೇರಿಸಿದರು.