Committed to the development of Basaveshwara Circle: Dr. Sharanaprakash Patil

-ವಾಸ್ತು ತಜ್ಞರೊಂದಿಗೆ ಸ್ಥಳಕ್ಕೆ ಭೇಟಿ, ಪರಿಶೀಲನೆ । ಹೆಚ್ಚುವರಿ ಕಾಮಗಾರಿಗಳ ಯಾದಿ ತಯಾರಿ

--

ಕನ್ನಡಪ್ರಭ ವಾರ್ತೆ ಸೇಡಂ

ಸೇಡಂನಲ್ಲಿರುವ ಬಸವೇಶ್ವರ ಪುತ್ಥಳಿ ಇರುವ ವೃತ್ತದ ಸೌಂದರ್ಯೀಕರಣಕ್ಕೆ ತಾವು ಬದ್ಧರೆಂದು ಸಚಿವ ಡಾ. ಶರಣಪ್ರಕಾಶ ಪಾಟೀಲ್‌ ಹೇಳಿದ್ದಾರೆ.

ಬಹು ದಿನಗಳ ಬೇಡಿಕೆ ಹಾಗೂ ನಗರ ಸೌಂದರ್ಯಕ್ಕೆ ಪುಷ್ಠಿ ನೀಡುವಂತಹ ಬಸವೇಶ್ವರ ವೃತ್ತದ ಅಭಿವೃದ್ಧಿಗೆ ಬದ್ಧವಾಗಿದ್ದೇನೆ. ಅಗತ್ಯ ಕ್ರಮಗಳನ್ನು ಅನುಸರಿಸಿ ದುರಸ್ತಿ ಕೈಗೊಂಡು ಬಸವೇಶ್ವರ ವೃತ್ತವನ್ನು ಅಭಿವೃದ್ಧಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ಬಸವೇಶ್ವರ ವೃತ್ತಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ವಾಸ್ತು ತಜ್ಞ ಬಸರಾಜಪ್ಪ ಖಂಡೇರಾವ್ ಅವರೊಂದಿಗೆ ಚರ್ಚಿಸಿ ಮಾತನಾಡಿದ ಅವರು, ಸೇಡಂ ಪಟ್ಟಣದ ಹೃದಯ ಭಾಗದಲ್ಲಿ ಸ್ಥಾಪಿತವಾಗಿರುವ ಅಣ್ಣ ಬಸವಣ್ಣ ಅವರ ಅಶ್ವಾರೂಢ ಮೂರ್ತಿ ಹಾಗೂ ಅದರ ಸುತ್ತಲಿನ ಸ್ಥಳದ ಸೌಂದರ್ಯ ಹೆಚ್ಚಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.

ತಜ್ಞ ಖಂಡೇರಾವ್ ಅವರೊಟ್ಟಿಗೆ ಚರ್ಚಿಸಿದಂತೆ ಫ್ಲೋರಿಂಗ್‌, ಹಿಂಭಾಗ ಗೋಡೆ ಹಾಗೂ ಬಸವೇಶ್ವರ ಮೂರ್ತಿ ಸ್ಥಳದ ಸುತ್ತಲಿನ ಗ್ರ್ಯಾನೇಟ್ ದುರಸ್ತಿ ಕೈಗೊಳ್ಳಬೇಕಾಗಿದೆ ಎಂದರು.

ಬಸವೇಶ್ವರ ವೃತ್ತದ ರಸ್ತೆ ನಡುವೆ ಇರುವ ಬಾಣಂತಿ ಕಂಬದ ಸುತ್ತಲೂ ವಾಹನಗಳು ಅಂತರ ಕಾಯ್ದು ಸಂಚರಿಸಲು ಒಂದೂವರೆ ಅಡಿ ವೃತ್ತಾಕಾರದ ಗಾರ್ಡನ್ ಸ್ಥಳವನ್ನು ನಿರ್ಮಿಸುವ ಕುರಿತು ಸೂಚಿಸಿಲಾಗಿದೆ. ಈಗಿರುವ ಪಾಕಿರ್ಂಗ್ ಟೈಲ್ಸ್ ತೆಗೆದು ಸಿಸಿ ರಸ್ತೆ ಕಾಮಗಾರಿ ಕುರಿತು ಯೋಜಿಸಲಾಗಿದೆ ಎಂದು ಹೇಳಿದರು.

ಈ ವೇಳೆ ಮುಖಂಡರಾದ ಬಸವರಾಜ ಪಾಟೀಲ ಊಡಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿಶ್ವನಾಥ ಪಾಟೀಲ ಬೊಮ್ಮನಹಳ್ಳಿ, ಕೃಷಿ ಸಮಾಜದ ಅಧ್ಯಕ್ಷ ಬಸವರಾಜ ರೇವಗೊಂಡ, ಪುರಸಭೆ ಮಾಜಿ ಅಧ್ಯಕ್ಷ ವೀರೇಂದ್ರ ರುದ್ನೂರು, ಶಿವರುದ್ರ ಕೊಳಕುರು, ಸತೀಶ್ ಪೂಜಾರಿ, ಸಂತೋಷ ತಳವಾರ ಸೇರಿದಂತೆ ಅನೇಕರಿದ್ದರು.

....ಕೋಟ್.....

ನಗರ ಸೌಂದರ್ಯದ ಅಭಿವೃದ್ಧಿ ಕೆಲಸ ಮುಂದುವರೆಸಿಕೊಂಡು ಹೋಗಲಾಗುತ್ತದೆ. ಬಸವೇಶ್ವರ ವೃತ್ತ ಸೇರಿದಂತೆ ಅಂಬಿಗ ಚೌಡಯ್ಯ, ಸಂಗೊಳ್ಳಿ ರಾಯಣ್ಣ ಮೂರ್ತಿ ಸ್ಥಳದ ಅಭಿವೃದ್ಧಿ ಕೈಗೊಳ್ಳುವ ಕುರಿತು ವಾಸ್ತು ತಜ್ಞರೊಟ್ಟಿಗೆ ಚರ್ಚಿಸಿದ್ದೇನೆ. ಬರುವ ದಿನಗಳಲ್ಲಿ ಅನುದಾನ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಂಡು ಈ ಮೂರು ಸ್ಥಳಗಳ ಅಭಿವೃದ್ಧಿ ಪಡಿಸುತ್ತೇನೆ.

- ಡಾ.ಶರಣಪ್ರಕಾಶ ಪಾಟೀಲ, ವೈದ್ಯಕೀಯ ಶಿಕ್ಷಣ ಸಚಿವ.

ಫೋಟೋ- ಸೇಡಂ ಬಸವ