ಹೆತ್ತೇನಹಳ್ಳಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುಮಾರು ೧೦ ಕೋಟಿ ರು. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ
ಕನ್ನಡಪ್ರಭ ವಾರ್ತೆ ತುಮಕೂರುತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಪ್ರಾರಂಭವಾಗಿದೆ. ತಾವು ವಿರೋಧ ಪಕ್ಷದಲ್ಲಿದ್ದರೂ ಹೋರಾಟ ಮಾಡಿ ಸರ್ಕಾರದಿಂದ ಹೆಚ್ಚು ಅನುದಾನ ತಂದು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡುತ್ತೇನೆ. ಕೇಂದ್ರ ಸಚಿವ ವಿ.ಸೋಮಣ್ಣ, ಜಿಲ್ಲಾ ಸಚಿವ ಡಾ.ಜಿ.ಪರಮೇಶ್ವರ್ ಅವರು ವಿವಿಧ ಇಲಾಖೆಗಳ ಅನುದಾನ ಕೊಡಿಸಲು ಸಹಕರಿಸುತ್ತಿದ್ದಾರೆ ಎಂದು ಶಾಸಕ ಬಿ.ಸುರೇಶ್‌ಗೌಡರು ಹೇಳಿದರು.ಕ್ಷೇತ್ರದ ಹೆತ್ತೇನಹಳ್ಳಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುಮಾರು ೧೦ ಕೋಟಿ ರು. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಕ್ಷೇತ್ರದಲ್ಲಿ ಶಾಲಾಕಾಲೇಜು, ಆಸ್ಪತ್ರೆ, ರಸ್ತೆ, ಕೆರೆಗಳಿಗೆ ನೀರು ತುಂಬಿಸುವುದು, ದೇವಸ್ಥಾನಗಳ ಜೀರ್ಣೋದ್ಧಾರ ಮತ್ತಿತರ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಲಾಗಿದೆ. ಅಮರಶಿಲ್ಪಿ ಜಕಣಾಚಾರಿಯವರ ಹುಟ್ಟೂರು ಕೈದಾಳದ ಚನ್ನಕೇಶವ ದೇವಸ್ಥಾನ, ಗೂಳೂರು ಗಣಪತಿ ದೇವಸ್ಥಾನ, ಹೆತ್ತೆನಹಳ್ಳಿ ಮಾರಮ್ಮ ದೇವಸ್ಥಾನಗಳು ಒಳಗೊಂಡ ಈ ಭಾಗವನ್ನು ಆಕರ್ಷಕ ಪ್ರವಾಸಿ ಕೇಂದ್ರವನ್ನಾಗಿ ರೂಪಿಸಲು ಅಗತ್ಯ ಸೌಲಭ್ಯ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.ರಾಜ್ಯದಲ್ಲಿ ನಮ್ಮ ಪಕ್ಷದ ಸರ್ಕಾರ ಅಧಿಕಾರದಲ್ಲಿಲ್ಲದಿದ್ದರೂ ಅಗತ್ಯವಿರುವ ಅನುದಾನ ತರುವ ಪ್ರಯತ್ನ ಮಾಡುತ್ತಿದ್ದೇನೆ. ಎಲ್ಲಾ ವಿಚಾರಗಳಿಗೂ ಆಡಳಿತ ಪಕ್ಷವನ್ನು ವಿರೋಧ ಮಾಡುವುದು ಸರಿಯಲ್ಲ, ಅಭಿವೃದ್ಧಿ ಕಾರ್ಯದಲ್ಲಿ ರಾಜಕಾರಣ ಮಾಡಬಾರದು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರೊಂದಿಗೆ ವಿಶ್ವಾಸದಿಂದ ಅವರ ಸಹಕಾರದಿಂದ ಹೆಚ್ಚು ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ. ತಮಗೆ ಸಹಕರಿಸುತ್ತಿರುವ ಸಚಿವ ಡಾ.ಪರಮೇಶ್ವರ್ ಅವರಿಗೆ ಅಭಿನಂದನೆಗಳು ಎಂದರು.ಇದೇ ವೇಳೆ ಸುರೇಶ್‌ಗೌಡರು ಹೆತ್ತೇನಹಳ್ಳಿ ಮಾರಮ್ಮ ದೇವಸ್ಥಾನದ ಕಾಂಪೌಂಡ್, ನೆಲಹಾಸು, ದೇವಸ್ಥಾನದ ಸಮುದಾಯ ಭವನ, ಕಲ್ಯಾಣಿ ಅಭಿವೃದ್ಧಿ ಕಾಮಗಾರಿ, ಆಂಜನೇಯ, ತಿರುಮಲ ದೇವಸ್ಥಾನದ ಅಭಿವೃದ್ಧಿ, ಹಾಲನೂರು-ಗೂಳೂರು-ಹರಳೂರು ರಸ್ತೆ ಕಾಮಗಾರಿ, ಕೈದಾಳ ಅಣೆಯ ಕೋಡಿ ದುರಸ್ತಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಲಕ್ಷ್ಮಿ, ಉಪಾಧ್ಯಕ್ಷೆ ಮಮತಾ, ತಾಲೂಕು ಬಿಜೆಪಿ ಅಧ್ಯಕ್ಷ ರಾಜಶೇಖರ್, ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಗೂಳೂರು ಶಿವಕುಮಾರ್, ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಣ್ಣಪ್ಪ, ಸುಭಾಷ್ ಚಂದ್ರಣ್ಣ, ಆಂಜನಪ್ಪ, ಸಿದ್ಧೇಗೌಡರು, ಶಂಕರಣ್ಣ, ನರಸಿಂಹಮೂರ್ತಿ, ವೆಂಕಟೇಶ್, ಗಂಗಣ್ಣ, ಶೇಷಕುಮಾರ್, ಕೆಂಪಹನುಮಯ್ಯ, ರೇಣುಕಮ್ಮ, ಶಿವರಾಜು, ಗೋವಿಂದರಾವ್, ಎಂಜಿನಿಯರ್ ನಂಜರಾಜ್, ಭಾನುಪ್ರಕಾಶ್, ಗುತ್ತಿಗೆದಾರ ಪ್ರದೀಪ್ ಪದ್ಮರಾಜ್ ಮೊದಲಾದವರು ಭಾಗವಹಿಸಿದ್ದರು.