ಬೇಸಿಗೆಯಲ್ಲಿ ಜಲಾಶಯ ನಿರ್ವಹಣೆಗೆ ಸಮಿತಿ ರಚನೆ

| Published : Mar 28 2025, 12:32 AM IST

ಬೇಸಿಗೆಯಲ್ಲಿ ಜಲಾಶಯ ನಿರ್ವಹಣೆಗೆ ಸಮಿತಿ ರಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಅಭಾವ ತಡೆಯಲು ಜಲಾಶಯಗಳ ನಿರ್ವಹಣಾ ವ್ಯವಸ್ಥೆ ಬದಲಾವಣೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಅಭಾವ ತಡೆಯಲು ಜಲಾಶಯಗಳ ನಿರ್ವಹಣಾ ವ್ಯವಸ್ಥೆ ಬದಲಾವಣೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.

ಜತೆಗೆ, ಪ್ರಕೃತಿ ವಿಕೋಪದಿಂದ ಎದುರಾಗುವ ಅನಾಹುಗಳನ್ನು ತಡೆಯಲು ರಾಜ್ಯದಲ್ಲಿ ವಿಪತ್ತು ಉಪಶಮನ ನಿಧಿ ಅಡಿಯಲ್ಲಿ 194.80 ಕೋಟಿ ರು. ಮೊತ್ತದ 330 ಉಪಶಮನ ಕಾಮಗಾರಿ ಅನುಷ್ಠಾನಗೊಳಿಸಲು ಜಿಲ್ಲಾಧಿಕಾರಿಗಳಿಗೆ ಅನುಮತಿಸಲೂ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ವಿವರಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ್‌. ಈ ಬಾರಿಯ ಬೇಸಿಗೆಯಲ್ಲಿ ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವುದನ್ನು ತಡೆಯಲು ಪ್ರಮುಖ ಜಲಾಶಯಗಳ ನಿರ್ವಹಣೆ ವ್ಯವಸ್ಥೆಯಲ್ಲಿ ಬದಲಾವಣೆ ತರಲಾಗುತ್ತಿದೆ. ಅದಕ್ಕಾಗಿ ಕುಡಿಯುವ ನೀರಿಗೆ ಒತ್ತು ನೀಡಿ ನಿರ್ವಹಣೆ ಮಾಡಲು ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ತಾಂತ್ರಿಕ ವ್ಯಕ್ತಿಯನ್ನೊಳಗೊಂಡ ಸಮಿತಿ ರಚಿಸಲಾಗುತ್ತಿದೆ. ಸಮಿತಿಗೆ ಜಲಾಶಯಗಳ ನೀರಿನ ಮಟ್ಟ ಸೇರಿದಂತೆ ಮತ್ತಿತರ ವಿವರಗಳನ್ನು ಪರಿಶೀಲಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳುವ ಅಧಿಕಾರ ನೀಡಿ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಪ್ರಕೃತಿ ವಿಕೋಪದಿಂದ ಉಂಟಾಗುವ ವಿಪತ್ತುಗಳನ್ನು ತಡೆಯಲು ಹಾಗೂ ಅದಕ್ಕೆ ಪರಿಹಾರ ಕಂಡುಕೊಳ್ಳಲು ರಾಜ್ಯ ವಿಪತ್ತು ಉಪಶಮನ ನಿಧಿಯ 194.80 ಕೋಟಿ ರು. ಬಳಸಿಕೊಂಡು 330 ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಆ ಕಾಮಗಾರಿಗಳ ಅನುಷ್ಠಾನದ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ ಎಂದರು.

ವಿಜಯಪುರ ಜಿಲ್ಲೆಯ ಸಿಂಧಗಿ, ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ಮಂಡ್ಯ ಜಿಲ್ಲೆಯ ಮಳವಳ್ಳಿ ಹಾಗೂ ಚಿಕ್ಕಮಗಳೂರಿನಲ್ಲಿ ಪ್ರಜಾಸೌಧ ಹೊಸದಾಗಿ ನಿರ್ಮಾಣ ಮತ್ತು ಬಾಕಿ ಕಾಮಗಾರಿಗಳ ಪೂರ್ಣಕ್ಕೆ 119.23 ಕೋಟಿ ರು. ಅನುದಾನ ನೀಡಲು ಘಟನೋತ್ತರ ಅನುಮೋದನೆ ನೀಡಲಾಗಿದೆ. ಸಮಾಜಕಲ್ಯಾಣ ಇಲಾಖೆ ಸೇರಿದಂತೆ ಅದಕ್ಕೆ ಸಂಬಂಧಿಸಿದ ನಿಗಮಗಳ ಕಚೇರಿಗಳನ್ನು ಒಂದೆಡೆಗೆ ತರುವ ಉದ್ದೇಶದೊಂದಿಗೆ ವಿಕಾಸಸೌಧದ ಮುಂಭಾಗದಲ್ಲಿನ 25.89 ಗುಂಟೆ ಖಾಲಿ ಜಾಗದಲ್ಲಿ 87 ಕೋಟಿ ರು. ವೆಚ್ಚದಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್‌ ಸ್ಫೂರ್ತಿಸೌಧ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಲಾಗಿದೆ ಎಂದರು.ಇತರ ಪ್ರಮುಖ ನಿರ್ಧಾರಗಳು

* ಬಂಕಾಪುರ ತೋಳ ವನ್ಯಜೀವಿ ಧಾಮ, ಉತ್ತಾರೆಗುಡ್ಡ ವನ್ಯಜೀವಿ ಧಾಮ, ಅರಸೀಕೆರೆ ಕರಡಿ ವನ್ಯಜೀವಿ ಧಾಮಗಳ ಸುತ್ತಲಿನ ಪ್ರದೇಶ ಹಾಗೂ ಭದ್ರಾ ವನ್ಯಜೀವಿಧಾಮದ ಪರಿಷ್ಕೃತ ಪರಿಸರ ಸೂಕ್ಷ್ಮ ವಲಯದ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸುವುದು

* ವಿಜಯಪುರ ನಗರಕ್ಕೆ ಆಲಮಟ್ಟಿಯಿಂದ ನೀರು ಸರಬರಾಜಾಗುವ ಪಿಎಸ್‌ಸಿ ಕೊಳವೆ ಮಾರ್ಗ ಬದಲಿಸಿ ಎಂಎಸ್‌ ಕೊಳವೆ ಅಳವಡಿಸಲು 50.13 ಕೋಟಿ ರು. ಮಂಜೂರು.

* ಜೇವರ್ಗಿ ತಾಲೂಕಿನಲ್ಲಿ ಕೆಕೆಆರ್‌ಡಿಬಿ ಮೂಲಕ ಕೈಗೊಳ್ಳುತ್ತಿರುವ ರಾಜ್ಯ ಹೆದ್ದಾರಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಅನುಮೋದನೆ

* ಕುಶಾಲನಗರದ ಮಸಗೋಡು-ಯಲಕನೂರು ಕಣಿವೆ ರಸ್ತೆ ಅಭಿವೃದ್ಧಿ.

* ಕರ್ನಾಟಕ ರಾಜ್ಯ ಬಾಲಬ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ನಿಯಮ 2025ಕ್ಕೆ ಅನುಮೋದನೆ.

* ಗದಗ ಮೆಡಿಕಲ್‌ ಕಾಲೇಜಿಗೆ ಸಹಕಾರಿ ರಂಗದ ಭೀಷ್ಮ ಕೆ.ಎಚ್‌. ಪಾಟೀಲ್‌ ಹೆಸರು ಮರುನಾಮಕರಣ.

* ಬೆಂಗಳೂರಿನ ಯುನಾನಿ-ಹೋಮಿಯೋಪತಿ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಅನುಮೋದನೆ.

* ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಅಲಮೇಲದಲ್ಲಿ ಹೊಸ ತೋಟಗಾರಿಕೆ ಕಾಲೇಜು ಸ್ಥಾಪನೆ.

* ದತ್ತಾಂಶ ಕೇಂದ್ರ ನೀತಿ, ನಿಪುಣ ಕರ್ನಾಟಕ ಮಾರ್ಗಸೂಚಿ ಬದಲಾವಣೆಗೆ ಸಚಿವ ಸಂಪುಟ ಒಪ್ಪಿಗೆ.ಮೂವರು ಪ್ರಮುಖರು ಗೈರು

ಹನಿಟ್ರ್ಯಾಪ್‌ ಪ್ರಕರಣ ಸರ್ಕಾರದ ಮಟ್ಟದಲ್ಲಿ ಭಾರೀ ಚರ್ಚೆಯಲ್ಲಿರುವಾಗಲೇ ಗುರುವಾರದ ಸಚಿವ ಸಂಪುಟ ಸಭೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೇರಿದಂತೆ ಮೂವರು ಸಚಿವರು ಗೈರಾಗಿದ್ದು ಕುತೂಹಲಕ್ಕೆ ಕಾರಣವಾಗಿತ್ತು. ಪಕ್ಷದ ಕಾರ್ಯಕ್ರಮದ ನಿಮಿತ್ತ ಡಿ.ಕೆ. ಶಿವಕುಮಾರ್‌ ಗುರುವಾರ ಬೆಳಗ್ಗೆ ದೆಹಲಿಗೆ ತೆರಳಿದರು. ಹಾಗೆಯೇ, ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಎರಡು ದಿನಗಳಿಂದ ದೆಹಲಿ ಪ್ರವಾಸದಲ್ಲಿದ್ದರು. ಇನ್ನು, ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ಕಾರವಾರ ಪ್ರವಾಸದಲ್ಲಿದ್ದ ಕಾರಣ ಸಂಪುಟ ಸಭೆಗೆ ಬಂದಿಲ್ಲ ಎಂದು ತಿಳಿದುಬಂದಿದೆ.