ಉಪ್ಪಿರಲಾರದೇ ಉರಿದರೆ ಹೀಗೆಯೇ ಆಗೋದು: ಕಾಶಪ್ಪನವರ

| Published : Mar 28 2025, 12:31 AM IST

ಸಾರಾಂಶ

ಆರೋವಾಗ ದೀಪ ಜೋರಾಗಿ ಉರಿಯುತ್ತೆ, ಅದೇ ರೀತಿ ಯತ್ನಾಳ ಅವ್ರದ್ದು ಆಗಿದೆ ಅಂತನಿಸ್ತಿದೆ. ಉಪ್ಪಿರಲಾರದೇ ಉರಿಯಬಾರದು ಎಂಬ ಮಾತು ತಮ್ಮಲ್ಲಿದೆ. ಉಪ್ಪಿರಲಾರದೇ ಉರಿದರೆ ಹೀಗೆಯೇ ಆಗುತ್ತದೆ ಎಂದು ಬಿಜೆಪಿಯಿಂದ ಉಚ್ಛಾಟಿಕ ಶಾಸಕ ಬಸನಗೌಡ ಯತ್ನಾಳರ ಕುರಿತು ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ವಾಗ್ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಯಾವುದಕ್ಕೆ ಆದ್ರೂ ಇತಿ, ಮಿತಿ ಇರುತ್ತೆ. ಪಕ್ಷದಡಿ ಗುರುತಿಸಿಕೊಂಡ ಯಾರೇ ಆಗಲಿ ಇತಿಮಿತಿಯಲ್ಲಿರಬೇಕು. ಈ ಇತಿಮಿತಿ ದಾಟಿದಾಗ ಪಕ್ಷ ಇಂತಹ ನಿರ್ಣಯ ಕೈಗೊಳ್ಳಬೇಕಾಗುತ್ತದೆ. ಆರೋವಾಗ ದೀಪ ಜೋರಾಗಿ ಉರಿಯುತ್ತೆ, ಅದೇ ರೀತಿ ಯತ್ನಾಳ ಅವ್ರದ್ದು ಆಗಿದೆ ಅಂತನಿಸ್ತಿದೆ. ಉಪ್ಪಿರಲಾರದೇ ಉರಿಯಬಾರದು ಎಂಬ ಮಾತು ತಮ್ಮಲ್ಲಿದೆ. ಉಪ್ಪಿರಲಾರದೇ ಉರಿದರೆ ಹೀಗೆಯೇ ಆಗುತ್ತದೆ ಎಂದು ಬಿಜೆಪಿಯಿಂದ ಉಚ್ಛಾಟಿಕ ಶಾಸಕ ಬಸನಗೌಡ ಯತ್ನಾಳರ ಕುರಿತು ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ವಾಗ್ದಾಳಿ ನಡೆಸಿದರು.

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೇ ಆಗಲಿ ಇತಿಮಿತಿ ದಾಟಿದಾಗ ಪಕ್ಷ ಇಂತಹ ನಿರ್ಣಯ ಕೈಗೊಳ್ಳಬೇಕಾಗುತ್ತದೆ, ಯತ್ನಾಳ ಅವರ ವಿರುದ್ಧ ಬಿಜೆಪಿ ತೆಗೆದುಕೊಂಡ ನಿರ್ಣಯ ಸರಿಯಾಗಿದೆ. ಅವರು ಪಕ್ಷ, ಪಕ್ಷದ ನಾಯಕರು, ಕುಟುಂಬದ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿದ್ರು, ಪಕ್ಷದ ಬಗ್ಗೆ, ಧರ್ಮದ ಬಗ್ಗೆನೂ ಮಾತನಾಡೋದು ಬಿಡಲಿಲ್ಲ, ಇವ್ರು ಯಾವ ಧರ್ಮದಲ್ಲಿ ಜನಿಸಿದ್ದಾರನ್ನೋದನ್ನೇ ಮರೆತಿದ್ದಾರೆ ಎಂದು ಕುಟುಕಿದರು.

ಜಯಮೃತ್ಯುಂಜಯ ಶ್ರೀಗಳ ವಿರುದ್ಧವೂ ವಾಗ್ದಾಳಿ:

ಪಂಚಮಸಾಲಿ ಶಾಸಕರು ಬಿಜೆಪಿ ಬಿಟ್ಟು ಬರುವಂತೆ ಪಂಚಮಸಾಲಿ ಜಯಮೃತ್ಯುಂಜಯ ಶ್ರೀಗಳು ಕರೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಕಾಶಪ್ಪನವರ, ಗುರುಗಳಾದಂತವರು ಸಲಹೆ ಕೊಡಬಾರದು ಅಂತ ನಾನು ಅಂದುಕೊಂಡಿದ್ದೇನೆ. ನಾನು ಸಮಾಜದಲ್ಲಿ ಜನಿಸಿದವನು, ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷನಾದವನು, ಇಂತಹ ಕರೆ, ನಿರ್ಧಾರ ತೆಗೆದುಕೊಳ್ಳುವುದು ಯಾರನ್ನ ಕೇಳಿ ಮಾಡ್ತಾರೆ? ಎಂದು ಪ್ರಶ್ನಿಸಿದ ಅವರು, ಅವರು ಗುರುಗಳು ಆಗಿರಬಹುದು, ಹಾಗಂತ ಗುರುಗಳೇ ನಿರ್ಧಾರ ಮಾಡಂಗಿಲ್ಲ, ಎಲ್ಲರೂ ಸೇರಿ ಅವ್ರನ್ನ ಗುರುಗಳನ್ನಾಗಿ ಮಾಡಿದ್ದೇವೆ, ಸಮುದಾಯವನ್ನು ಆಹ್ವಾನಿಸಿ ಚರ್ಚೆ ಮಾಡಬೇಕು, ಚರ್ಚೆ ಮಾಡದೆಯೇ ಏಕಾಏಕಿ ನಿರ್ಣಯ ತೆಗೆದುಕೊಂಡ್ರೆ, ರಾಜೀನಾಮೆ ಕೊಡೋದಿಕ್ಕೆ ನಮಗೇನು ತಲೆಗಿಲೆ ಕೆಟ್ಟಿದಿಯಾ? ಸ್ವಾಮೀಜಿ ಮಾತು ಕೇಳಿ ರಾಜೀನಾಮೆ ಕೋಡೊಕೆ ಬಿಜೆಪಿವ್ರಿಗೆ ತಲೆ ಕೆಟ್ಟಿದೆಯಾ? ಯಾರೊಬ್ರೂ ರಾಜೀನಾಮೆ ಕೊಡಲ್ಲ ಎಂದು ಹರಿಹಾಯ್ದರು.

ಯತ್ನಾಳ ಅವ್ರು ಮಾಡಿದ್ದು ಅತಿಯಾಗಿದೆ, ಅತಿಯಾಗಿದ್ದಕ್ಕೆ ಪಕ್ಷದವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ, ಇದಕ್ಕೆ ಸಮುದಾಯ ಬೆನ್ನಿಗೆ ನಿಲ್ಲುವ ಪ್ರಶ್ನೆಯೇ ಬರಲ್ಲ, ಸಮುದಾಯಕ್ಕೆ ಅನ್ಯಾಯ ಆಗಿದೆಯಾ?, ಇವರಿಂದ ಸಮುದಾಯಕ್ಕೆ ಅನ್ಯಾಯ ಆಗಿದೆ, ಸಮುದಾಯಕ್ಕೆ ಇವರ ವೈಯಕ್ತಿಕ ಕೊಡುಗೆ ಏನೂ ಇಲ್ಲ, ಇಂತವ್ರನ್ನ ಬೆಂಬಲಿಸುವ ಸ್ವಾಮೀಜಿ ನಿರ್ಧಾರ ಸರಿಯಲ್ಲ, ಸ್ವಾಮೀಜಿ ನಿರ್ಧಾರಕ್ಕೆ ನನ್ನ ವಿರೋಧವಿದೆ, ಅವರು ಏಕಮುಖವಾಗಿ ನಿರ್ಣಯ ತೆಗೆದುಕೊಳ್ಳಬಾರದು, ಇದಕ್ಕೆ ನನ್ನ ಒಪ್ಪಿಗೆ ಇಲ್ಲ, ಸ್ವಾಮೀಜಿ ಸಮುದಾಯ ಇಟ್ಕೊಂಡು ಬೆದರಿಕೆ ಹಾಕೋದು ಸರಿಯಲ್ಲ ಎಂದು ಹೇಳಿದರು.

ಸ್ವಾಮೀಜಿ ಸಮುದಾಯಗಳ ಸಭೆ ಕೂಡ ಮಾಡ್ತಿದಾರೆ ಎಂಬ ಪ್ರಶ್ನೆಗೆ ಉತ್ತರಿಸದ ಪಂಚಮಸಾಲಿ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಸ್ವಾಮೀಜಿಗಳ ಮೇಲೆಯೇ ರಾಜಕೀಯ ಸಿದ್ಧಾಂತಗಳು ನಿಂತಿವೆಯೇ? ಅವರವರ ಶಕ್ತಿ, ಸ್ವಂತ ಬಲದ ಮೇಲೆ ರಾಜಕಾರಣ ನಿರ್ಣಯ ಆಗುತ್ತೆ, ಸ್ವಾಮೀಜಿಗಳನ್ನು ಕೇಳಿ ರಾಜಕಾರಣ ನಡೆದಿಲ್ಲ, ಇದು ಪ್ರಜಾಪ್ರಭುತ್ವ ದೇಶ, ಪ್ರಜೆಗಳಿಂದಲೇ ನಿರ್ಣಯ ಆಗಬೇಕು, ಸುಮ್ನೆ ಬೆದರಿಕೆ ಹಾಕೋದು, ಲಿಂಗಾಯತ ವಿರೋಧಿ ಸರ್ಕಾರ ಅನ್ನೋದು, ಬಿಜೆಪಿ ಸ್ವಾಮೀಜಿ ಆಗಿ ಇವರು ಮಾತನಾಡ್ತಿದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಏನೇ ನಿರ್ಧಾರ ಆಗಬೇಕಿದ್ದರೂ ಕೂಡಲಸಂಗಮದಲ್ಲೇ ನಿರ್ಣಯ ಆಗಬೇಕು, ಸ್ವಾಮೀಜಿ ಅವರನ್ನು ಪೀಠಕ್ಕೆ ಕೂರಿಸಿದವರು ನಾವೆಲ್ಲ ಇದ್ದೀವಿ, ನಿರ್ಧಾರಗಳನ್ನು ಇಲ್ಲಿ ಬಂದು ಮಾಡಬೇಕು, ಬೆಳಗಾವಿಯಲ್ಲಿ ಮಾತನಾಡಿದೆ, ಬೆಳಗಾವಿಯಲ್ಲಿ, ಬೆಂಗಳೂರಿನಲ್ಲಿ ಮನೆ ಮಾಡಿದೆ ಎಂದು ಹೋದ್ರೆ ಆಗಲ್ಲ, ಪೀಠ ಬಿಟ್ಟು ಹೊರಗೇಕೆ ಓಡಾಡ್ತಾರೆ, ಪೀಠದಲ್ಲಿ ಕೂತು ಧರ್ಮ ಕಟ್ಟುವ ಕೆಲಸ ಮಾಡಬೇಕು, ಸಮಾಜಕ್ಕೆ ಏನೇನು ಅನ್ಯಾಯ ಆಗುತ್ತೆ ಅನ್ನೋದನ್ನು ಶ್ರೀಗಳು ಹೇಳಬೇಕಲ್ವ?, ನಿಮ್ಮ 2ಎ ಮೀಸಲಾತಿ ಹೋರಾಟ ಎಲ್ಲಿ ಹೋಯ್ತು?, ಈ ಬಗ್ಗೆ ಯಾರು ಧ್ವನಿ ಎತ್ತುತ್ತಿದ್ದೀರಿ? ಪಂಚಮಸಾಲಿ ಸಮಾಜ ಯತ್ನಾಳ ಅವರ ಗುಲಾಮಗಿರಿ ಮಾಡ್ತಿದೆಯಾ? ಇಲ್ಲವೆ ಸ್ವಾಮೀಜಿಯವರ ಗುಲಾಮಗಿರಿ ಮಾಡ್ತಿದಿವಿ ಅಂದುಕೊಂಡಿದ್ದೀರಾ?, ಸಮುದಾಯಕ್ಕೆ ಏನು ಬೇಕು, ಬೇಡ ಅನ್ನೋದಕ್ಕೆ ಪ್ರತಿನಿಧಿಗಳು ಇದೀವಿ, ಸಮುದಾಯದ ಜವಾಬ್ದಾರಿ ಹೊತ್ತಂತವ್ರು ಇದೀವಿ, ಸಮಾಜದ ಸಂಘಟನೆ ಮಾಡಿದಂತವ್ರು ಇದೀವಿ, ನಿಮ್ಮನ್ನ ಸ್ವಾಮೀಜಿ ಮಾಡಿದ್ದೇವೆ ಅಂತ ಏಕಪಕ್ಷೀಯ ನಿರ್ಣಯಕ್ಕೆ ನಮ್ಮಲ್ಲಿ ಅವಕಾಶ ಇಲ್ಲ ಎಂದು ಹೇಳಿದರು.

ಮೀಸಲಾತಿ ಕೊಡಿಸುವ ಕೆಲಸ ಮುಂದುವರಿಯುತ್ತದೆ, ಇಂತಹ ಗೊಳ್ಳು ನಿರ್ಣಯಕ್ಕೆ ನಾವ್ಯಾರು ತಲೆ ಬಾಗಲ್ಲ, ಸಮಾಜದವರು ಇದಕ್ಕೆ ತಲೆ ಕೆಡಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ, ಇದು ಅವರ ಪಕ್ಷದ ನಿರ್ಣಯ, ಸಮುದಾಯದ ನಿರ್ಣಯ ಅಲ್ಲ, ಸುಮ್ನೆ ಸಮಾಜದವರನ್ನು ದಾರಿ ತಪ್ಪಿಸುತ್ತಿದ್ದಾರೆ, ಮೊನ್ನೆ ಹೀಗೆಯೇ ದಾರಿ ತಪ್ಪಿಸಿ ಬೆಳಗಾವಿಯಲ್ಲಿ ಪ್ರತಿಭಟನೆ ವೇಳೆ ಆರ್ ಎಸ್ ಎಸ್ ನವರಿಂದ ಕಲ್ಲು ಒಗಿಸಿದ್ರು, ನನ್ನ ಕಡೆ ವಿಡಿಯೋ ಪ್ರೂಫ್ ಇವೆ, ಚಪ್ಪಲಿ, ಕಲ್ಲು ತಾವೇ ತೂರಿಕೊಂಡಿದ್ದಾರೆ, ತಾವೇ ತೂರಿಕೊಂಡು ಸರ್ಕಾರಕ್ಕೆ, ಪೊಲೀಸರ ಮೇಲೆ ಆರೋಪ ಮಾಡಿದ್ರು, ಸರ್ಕಾರ ಲಿಂಗಾಯತ ವಿರೋಧಿ ಅಂದ್ರು, ಸ್ವಾಮೀಜಿಗಳು ಇಂತಹ ದೊಡ್ಡ ದೊಡ್ಡ ಮಾತು ಆಡೋದನ್ನ ಬಿಡಬೇಕು, ಎಲ್ಲರನ್ನೂ ಸಮಾನವಾಗಿ ಕಾಣುವ ಲಿಂಗಾಯತ ಧರ್ಮದಲ್ಲಿ ಜನಿಸಿದ್ದೀವಿ, ಅಂತಹ ಧರ್ಮದಲ್ಲಿ ಜನಿಸಿದವರು ವೈಯಕ್ತಿಕ ಬೆಂಬಲ ಸೂಚಿಸವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜೀನಾಮೆ ಕೊಟ್ಟು ಚುನಾವಣೆಗೆ ನಿಲ್ಲಲಿ:ಯತ್ನಾಳ ಮಾತೆತ್ತಿದರೆ ಹಿಂದುತ್ವ ಅಂತಾರೆ, ಇದು ಹಿಂದು ರಾಷ್ಟ್ರವಲ್ಲ, ಭಾರತ ಸರ್ವಜನಾಂಗದ ಶಾಂತಿಯ ತೋಟ, ಇವರು ಜನಿಸಿದ್ದು ಯಾವ ಜಾತಿ? ನೀವು ಲಿಂಗಾಯತ ಪಂಚಮಸಾಲಿ ಅಂತೇಳ್ತೀರಿ, ಲಿಂಗಾಯತ ಅನ್ನೋದು ಧರ್ಮ ಅಲ್ವ ಹಾಗಾದ್ರೆ?, ಇದಕ್ಕೆ ಗುರುಗಳು ಇಲ್ಲವೇ? ಹೀಗಿದ್ದಾಗ ಹಿಂದೂತ್ವ ಅಂತ ಯಾಕೆ ಪ್ರತಿಪಾದಿಸ್ತಾರೆ? ಈ ದೇಶದಲ್ಲಿ ಒಂದೇ ಜನಾಂಗ ಇದೆಯಾ? ಯಾವ ದೇಶದಲ್ಲಿ ಜನಿಸಿದ್ದೀನಿ ಅನ್ನೋದೆ ಅರಿವಿಲ್ಲ, ಸುಮ್ನೆ ಧರ್ಮದ ಕುರಿತು ಮಾತನಾಡೋದು, ಮುಸ್ಲಿಮರನ್ನು ಟಾರ್ಗೆಟ್ ಮಾಡಿ ಮಾತನಾನಾಡ್ತಾರೆ. ಅದ್ರ ಮೇಲೆ ಈ ಪುಣ್ಯಾತ್ಮ ಚುನಾವಣೆ ಗೆದ್ದಿದ್ದಾನೆ. ಇವನಿಗೆ ತಾಕತ್ತಿದ್ರೆ ಈ ಬಾರಿ ಪಕ್ಷೇತರನಾಗಿ ನಿಲ್ಲಲಿ, ಉಚ್ಛಾಟನೆ ಮಾಡಿದ್ಮೇಲೆ ರಾಜೀನಾಮೆ ಕೊಟ್ಟು ಚುನಾವಣೆಗೆ ನಿಲ್ಲಲಿ, ನಾನೇ ಇವ್ರ ವಿರುದ್ಧ ನಿಲ್ತೀನಿ, ಆ ಯಪ್ಪನಿಗೆ ಒಂದು ನಡೆ ಇಲ್ಲ, ನುಡಿ ಇಲ್ಲ, ಬದ್ಧತೆ ಇಲ್ಲ, ಒಂದು ಪಕ್ಷದಲ್ಲಿ ನಿಯತ್ತಾಗಿ ಇಲ್ಲ, ಇಂತವ್ರಿಗೆ ಯಾರು ಗೌರವ ಕೊಡ್ತಾರೆ, ಒಂದ್ಸಾರಿ ಟಿಪ್ಪು ಸುಲ್ತಾನ್ ವೇಷ ಹಾಕ್ತಾನೆ, ಒಂದು ಸಾರಿ ಹಿಂದೂ ಅಂತ ಹೇಳ್ತಾನೆ, ಇಂತವ್ರನ್ನ ಯಾರು ನಂಬ್ತಾರೆ? ಇಂತವರು ಬಹಳ ಹುಟ್ಟಿ, ಸತ್ತೋಗಿದ್ದಾರೆ, ಇವರ ಬಗ್ಗೆ ಗಮನ ಕೊಡೋದು, ತಲೆ ಕೆಡಿಸಿಕೊಳ್ಳುವುದ್ರಲ್ಲಿ ಅರ್ಥವಿಲ್ಲ ಎಂದು ಕಾಶಪ್ಪನವರ ಹೇಳಿದರು.