ಹಾವೇರಿ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿ ರಚನೆ

| Published : Feb 23 2025, 12:31 AM IST

ಸಾರಾಂಶ

ಹಿಂದಿನ ಸರ್ಕಾರ ಕಳೆದ ಎರಡು ವರ್ಷಗಳ ಹಿಂದೆ ಆರಂಭಿಸಿದ ಹಾವೇರಿ ವಿಶ್ವವಿದ್ಯಾಲಯ ಉಳಿಸಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ''ಹಾವೇರಿ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿ'' ವೇದಿಕೆ ರಚಿಸಲಾಗಿದೆ. ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳು ಸಹಭಾಗಿಯಾಗಿವೆ.

ಹಾವೇರಿ: ಹಿಂದಿನ ಸರ್ಕಾರ ಕಳೆದ ಎರಡು ವರ್ಷಗಳ ಹಿಂದೆ ಆರಂಭಿಸಿದ ಹಾವೇರಿ ವಿಶ್ವವಿದ್ಯಾಲಯ ಉಳಿಸಿ ಅಭಿವೃದ್ಧಿಪಡಿಸಲು ಆಗ್ರಹಿಸಿ ಜಿಲ್ಲೆಯ ಎಲ್ಲ ಸಂಘ-ಸಂಸ್ಥೆಗಳು ಹಾಗೂ ಜನಸಾಮಾನ್ಯರು ಏಕತೆಯಿಂದ ಆಂದೋಲನ ನಡೆಸುವ ತೀರ್ಮಾನ ಕೈಗೊಳ್ಳಲಾಯಿತು.

ನಗರದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಎಲ್ಲ ಸಂಘ ಸಂಸ್ಥೆಗಳ ಸಭೆಯಲ್ಲಿ ಪಾಲ್ಗೊಂಡ ವಿವಿಧ ಸಂಘಟನೆಗಳ ಮುಖಂಡರು, ಹಾವೇರಿ ವಿವಿ ಉಳಿವಿಗಾಗಿ ಎಲ್ಲರೂ ಪಕ್ಷಾತೀತವಾಗಿ ಏಕತೆಯಿಂದ ಆಂದೋಲನ ನಡೆಸುವ ತೀರ್ಮಾನಕ್ಕೆ ಬಂದು ''ಹಾವೇರಿ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿ'' ವೇದಿಕೆ ರಚಿಸಿದರು. ವಿಶ್ವವಿದ್ಯಾಲಯ ಉಳಿವಿಗಾಗಿ ಕೈಜೋಡಿಸುವ ಎಲ್ಲ ಸಂಘಟನೆಗಳನ್ನೊಳಗೊಂಡು ಈ ವೇದಿಕೆ ಜತೆಯಲ್ಲಿ ಸೇರಿಸಿಕೊಂಡು ಕಾರ್ಯ ಚಟುವಟಿಕೆ ನಡೆಸಲು ತೀರ್ಮಾನಿಸಲಾಯಿತು.

ಹೋರಾಟದ ಮೊದಲ ಹಂತವಾಗಿ ಜಿಲ್ಲೆಯ ಎಲ್ಲ ಶಾಸಕರಿಗೆ ಹಾವೇರಿ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿ ವತಿಯಿಂದ ಮನವಿ ಸಲ್ಲಿಸಿ, ಕೂಡಲೇ ವಿಶ್ವ ವಿದ್ಯಾಲಯ ಮುಚ್ಚುವ ಪ್ರಕ್ರಿಯೆಯನ್ನು ಕೈಬಿಟ್ಟು, ವಿಶ್ವವಿದ್ಯಾಲಯಕ್ಕೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮುಂಬರುವ ಬಜೆಟ್‌ನಲ್ಲಿ ಅನುದಾನ ತೆಗೆದಿರಿಸಲು ಶಾಸಕರು ಮುತುವರ್ಜಿ ವಹಿಸಲು ಒತ್ತಾಯಿಸುವುದು. ಹಾಗೆಯೇ ಸಂಸದರು, ವಿಧಾನ ಪರಿಷತ್ ಸದಸ್ಯರು, ನಿಗಮ-ಮಂಡಳಿಗಳು, ಪ್ರಾಧಿಕಾರ, ನಗರಸಭೆ ಅಧ್ಯಕ್ಷರಿಗೆ ಮನವಿ ಕೊಡುವುದು. ಜಿಲ್ಲೆಯ ಶಾಸಕರ ಅಭಿಪ್ರಾಯ ಪಡೆದ ನಂತರ ಹೋರಾಟದ ಮುಂದಿನ ಹಂತಗಳನ್ನು ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಯಿತು.

ಸಭೆಯಲ್ಲಿ ಸಾಹಿತಿ ಸತೀಶ ಕುಲಕರ್ಣಿ, ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ಕಸಾಪ ಹಾವೇರಿ ತಾಲೂಕಾಧ್ಯಕ್ಷ ವೈ.ಬಿ. ಆಲದಕಟ್ಟಿ, ಕರ್ನಾಟಕ ರಾಜ್ಯ ರೈತ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಇಡಾರಿ ಸಂಸ್ಥೆಯ ಮುಖ್ಯಸ್ಥೆ ಪರಿಮಳಾ ಜೈನ, ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಉಡಚಪ್ಪ ಮಾಳಗಿ, ಏಳುಕೋಟೆಪ್ಪ ಪಾಟೀಲ, ಶೆಟ್ಟಿ ವಿಭೂತಿ, ಶ್ರೀನಿವಾಸ ಯರೇಸೀಮಿ, ಎಂ. ಆಂಜನೇಯ, ಮಲಿಕಸಾಬ್ ಬಾಣಿ, ನೂರಾಹ್ಮದ್ ಕರ್ಜಗಿ, ಶರಣು ಸಂಗನಾಳ, ಸಂತೋಷ ಹಲಗೇರ, ರಾಜು ಮಾಳಗಿ, ಬಸವರಾಜ ಎಸ್., ರೇಣುಕಾ ಗುಡಿಮನಿ, ಜುಬೇದಾ ನಾಯಕ, ಅಮೀರ್ ಚೀಗಳ್ಳಿ, ಶಿವಯೋಗಿ ಹೊಸಗೌಡ್ರ, ಸುರೇಶ ಚಲವಾದಿ, ಸತೀಶ ಎಂ.ಬಿ., ಗೀತಾ ಲಮಾಣಿ, ಪೂರ್ಣಿಮಾ ಕೆ., ಮಕಬುಲ್ ಎಂ.ಕೆ., ವಿಜಯಕುಮಾರ ಚಿನ್ನಿಕಟ್ಟಿ, ಸಿಖಂದರ್ ಪಟೇಲ್, ಮಾಲತೇಶ ಯಲ್ಲಾಪುರ ಪಾಲ್ಗೊಂಡಿದ್ದರು.

ಈ ಹೋರಾಟಕ್ಕೆ ಅತಿಥಿ ಉಪನ್ಯಾಸಕರ ಸಂಘಟನೆ, ವಿದ್ಯಾರ್ಥಿ ಸಂಘಟನೆಗಳು, ವರ್ತಕರು, ವಕೀಲರ ಸಂಘಟನೆ, ರೈತ-ಕಾರ್ಮಿಕ, ಮಹಿಳೆ ಸೇರಿದಂತೆ ಇನ್ನೂ ಅನೇಕ ಸಂಘಟನೆಯಗಳು ಬೆಂಬಲ ನೀಡಿವೆ. ಬಸವರಾಜ ಪೂಜಾರ ಸ್ವಾಗತಿಸಿದರು. ವಿಶ್ವ ವಿದ್ಯಾಲಯದ ಉಳಿವಿಗೆ ಹೋರಾಟದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ್ ಎಂ.ಬಿ. ವಂದಿಸಿದರು.