ಸಾರಾಂಶ
ಬೆಂಗಳೂರು : ಸೆಕ್ಯೂರಿಟಿ ಏಜೆನ್ಸಿ ಮೂಲಕ ಹೊರ ಗುತ್ತಿಗೆ ಶಿಕ್ಷಕರ ನೇಮಕ ರದ್ದು ಪಡಿಸಿದ ಬಿಬಿಎಂಪಿ, ಈಗ ತನ್ನ ಶಾಲಾ-ಕಾಲೇಜುಗಳಲ್ಲಿ ‘ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ’ (ಎಸ್‌ಡಿಎಂಸಿ) ಮತ್ತು ‘ಕಾಲೇಜು ಅಭಿವೃದ್ಧಿ ಸಮಿತಿ’ (ಸಿಡಿಸಿ) ರಚಿಸಿ ಅವುಗಳ ಮೂಲಕ ಶಿಕ್ಷಕರ ನೇಮಕಕ್ಕೆ ಮುಂದಾಗಿದೆ.
ಬಿಬಿಎಂಪಿಯು ಈವರೆಗೆ ತನ್ನ ಶಾಲಾ ಕಾಲೇಜುಗಳಿಗೆ ಖಾಸಗಿ ಸಂಸ್ಥೆಯ ಮೂಲಕ ಹೊರ ಗುತ್ತಿಗೆ ಆಧಾರದ ಮೇಲೆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತಿತ್ತು. ಪ್ರಸಕ್ತ ವರ್ಷ ಸಹ ಸೆಕ್ಯೂರಿಟಿ ಏಜೆನ್ಸಿ ಮೂಲಕ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದಕ್ಕೆ ಮುಂದಾದ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಸಮಸ್ಯೆ ಪರಿಹರಿಸಲು ಬಿಬಿಎಂಪಿ ತನ್ನ ಶಾಲಾ- ಕಾಲೇಜುಗಳಲ್ಲಿ ಎಸ್‌ಡಿಎಂಸಿ ಹಾಗೂ ಸಿಡಿಸಿ ರಚಿಸಿ, ಅವುಗಳ ಮೂಲಕ ಹೊರ ಗುತ್ತಿಗೆ ಶಿಕ್ಷಕರ ನೇಮಕ ಮಾಡಿಕೊಳ್ಳುವ ಸೂತ್ರ ಹುಡುಕಿಗೊಂಡಿದೆ.
ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಶಿಕ್ಷಣ ವಿಭಾಗದ ವಿಶೇಷ ಆಯುಕ್ತರು ಸುತ್ತೋಲೆ ಹೊರಡಿಸಿ ಎಸ್‌ಡಿಎಂಸಿ ಮತ್ತು ಸಿಡಿಸಿ ರಚಿಸುವಂತೆ ಶಾಲಾ-ಕಾಲೇಜು ಮುಖ್ಯಸ್ಥರಿಗೆ ನಿರ್ದೇಶಿಸಿದ್ದಾರೆ. ಜೂನ್ 10ರ ಒಳಗಾಗಿ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿಯ ಹೆಸರಿನಲ್ಲಿ ಜಂಟಿ ಬ್ಯಾಂಕ್ ಖಾತೆ ತೆರೆಯಬೇಕು, ಪ್ರಾಥಮಿಕ ಶಾಲೆಯಲ್ಲಿ 24 ಸದಸ್ಯರ ಎಸ್‌ಡಿಎಂಸಿ ರಚನೆ, ಪ್ರೌಢ ಶಾಲೆಯಲ್ಲಿ 15 ಸದಸ್ಯರ ಸಮಿತಿ ರಚನೆ ಮಾಡುವುದು. ಉಳಿದಂತೆ ಪದವಿ ಪೂರ್ವ ಕಾಲೇಜುಗಳಲ್ಲಿ ವಿಧಾನಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ 9 ಮಂದಿ ಸದಸ್ಯರ ಸಿಡಿಸಿ ರಚನೆ ಮಾಡಬೇಕು ಎಂದು ಸೂಚಿಸಲಾಗಿದೆ.
ನರ್ಸರಿ, ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜಿಗಳಲ್ಲಿ ಈ ರೀತಿಯ ಸಮಿತಿ ರಚನೆಗೆ ಅವಕಾಶವಿಲ್ಲ. ಹಾಗಾಗಿ, ಸಮೀಪದ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗೆ ಜವಾಬ್ದಾರಿ ನೀಡಲು ಬಿಬಿಎಂಪಿ ನಿರ್ಧರಿಸಿದೆ.ಬಿಬಿಎಂಪಿ ಶಾಲೆಗೆ ಶೈಕ್ಷಣಿಕ ಸಲಹೆಗಾರರ ನೇಮಕಾತಿ
ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿಬಿಎಂಪಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹಾಗೂ ಫಲಿತಾಂಶ ಸುಧಾರಣೆ ಮಾಡುವುದಕ್ಕೆ ಮೂವರು ಶೈಕ್ಷಣಿಕ ಸಲಹೆಗಾರರನ್ನು ಬಿಬಿಎಂಪಿ ಶಿಕ್ಷಣ ವಿಭಾಗ ನೇಮಕ ಮಾಡಿಕೊಂಡಿದೆ.
ಕಳೆದ ವರ್ಷದಿಂದ ಶೈಕ್ಷಣಿಕ ಸಲಹೆಗಾರರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಕಳೆದ ಬಾರಿ ನೇಮಕ ಮಾಡಿಕೊಂಡಿದ್ದ ಶಿಕ್ಷಣ ಇಲಾಖೆಯ ನಿವೃತ್ತ ಸಹ ನಿರ್ದೇಶಕ ಎನ್.ಕೆಂಚೇಗೌಡ ಅವರನ್ನು ಹಿರಿಯ ಶೈಕ್ಷಣಿಕ ಸಲಹೆಗಾರರಾಗಿ 11 ತಿಂಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಉಳಿದಂತೆ ನಿವೃತ್ತ ಸಹ ನಿರ್ದೇಶಕ ರಾಮಾಂಜನೇಯ ಹಾಗೂ ಬಿಬಿಎಂಪಿಯ ನಿವೃತ್ತ ಹಿರಿಯ ಉಪನ್ಯಾಸಕ ಓಬಳೇಶಪ್ಪ ಅವರನ್ನು ಶೈಕ್ಷಣಿಕ ಸಲಹೆಗಾರರಾಗಿ ನೇಮಿಸಲಾಗಿದೆ.
ಕಾನೂನು ಬಾಹಿರ ನೇಮಕ
ಸರ್ಕಾರದ ನಿವೃತ್ತ ಅಧಿಕಾರಿಗಳನ್ನು ಹೊರ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಬಾರದು ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ಆದರೂ ಕಾನೂನು ಬಾಹಿರವಾಗಿ ಶೈಕ್ಷಣಿಕ ಸಲಹೆಗಾರರನ್ನು ನೇಮಕ ಮಾಡಿಕೊಳ್ಳಲಾಗಿದೆ. ಕೂಡಲೇ ನೇಮಕವನ್ನು ರದ್ದುಪಡಿಸಬೇಕೆಂದು ಬಿಬಿಎಂಪಿ ಅಧಿಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಅಮೃತ್ ರಾಜ್ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪತ್ರ ಬರೆದಿದ್ದಾರೆ.