ರಾಜಗೋಪುರ ನಿರ್ಮಾಣಕ್ಕೆ ಭಕ್ತರ ಸಹಕಾರ ಕೋರಿದ ಸಮಿತಿ

| Published : Jul 26 2025, 12:00 AM IST

ಸಾರಾಂಶ

ಇತಿಹಾಸ ಪ್ರಸಿದ್ದ ಪುಣ್ಯ ಕ್ಷೇತ್ರ ಕ್ಯಾಮೇನಹಳ್ಳಿ ಶ್ರೀಆಂಜನೇಯಸ್ವಾಮಿ ದೇವಾಲಯ ರಾಜ ಗೋಪುರ ಅಭಿವೃದ್ಧಿಗೆ ತೀರ್ಮಾನಿಸಿದ್ದು ಭಕ್ತರ ಸಹಕಾರ ಅಗತ್ಯವಾಗಿದೆ ಎಂದು ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ವಿ ರಾಮಮೂರ್ತಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ ಇತಿಹಾಸ ಪ್ರಸಿದ್ದ ಪುಣ್ಯ ಕ್ಷೇತ್ರ ಕ್ಯಾಮೇನಹಳ್ಳಿ ಶ್ರೀಆಂಜನೇಯಸ್ವಾಮಿ ದೇವಾಲಯ ರಾಜ ಗೋಪುರ ಅಭಿವೃದ್ಧಿಗೆ ತೀರ್ಮಾನಿಸಿದ್ದು ಭಕ್ತರ ಸಹಕಾರ ಅಗತ್ಯವಾಗಿದೆ ಎಂದು ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ವಿ ರಾಮಮೂರ್ತಿ ತಿಳಿಸಿದರು. ತಾಲೂಕಿನ ಹೊಳವನಹಳ್ಳಿ ಹೋಬಳಿ ಕಮನೀಯ ಕ್ಷೇತ್ರ ಕ್ಯಾಮೇನಹಳ್ಳಿ ಶ್ರೀಆಂಜನೇಯ ಸ್ವಾಮಿ ದೇವಾಲಯದಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ದೇವಾಲಯ ರಾಜಗೋಪುರ ನೀಲಿ ನಕ್ಷೆ ಈಗಾಗಲೇ ಸಿದ್ದವಾಗಿದೆ. ೪೫ ಅಡಿ ಎತ್ತರ, ೨೩ ಅಡಿ ಅಗಲ, ಬಾಗಿಲು ಕಲ್ಲು ಎತ್ತರ ೧೬ ಅಡಿಯನ್ನು ಹೊಂದಿದೆ. ರಾಜಗೋಪುರ ಅಭಿವೃದ್ಧಿಗೆ ಗಾರೆ, ಸುಣ್ಣ, ಇಟ್ಟಿಗೆ, ಕಲ್ಲು, ಸಿಮೆಂಟ್ ಬಳಸಲಿದ್ದು, ಮುಜುರಾಯಿ ಇಲಾಖೆ ಒಳಪಟ್ಟ ದೇವಾಲಯವಾದ್ದರಿಂದ ೧೦ಲಕ್ಷ ನೀಡುವಂತೆ ಸಮಿತಿಯು ಈಗಾಗಲೇ ಮನವಿ ಮಾಡಿದೆ. ತಹಸೀಲ್ದಾರ್ ಮಂಜುನಾಥ್ ಈ ಎಲ್ಲಾ ಕೆಲಸಗಳಿಗೂ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದರು. ಉದ್ಯಮಿ ಮಹಾಲಿಂಗಪ್ಪ ಮಾತನಾಡಿ, ಕಮನೀಯ ಕ್ಷೇತ್ರ ಎಂದೇ ಹೆಸರು ಪಡೆದಿರುವ ಕ್ಯಾಮೇನಹಳ್ಳಿ ಶ್ರೀಆಂಜನೇಯ ಸ್ವಾಮಿ ದೇವಾಲಯ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ೪೫ ಅಡಿ ಎತ್ತರದ ರಾಜಗೋಪುರ ನಿರ್ಮಾಣ ಮಾಡಲಾಗುವುದು, ಈ ಕೆಲಸಕ್ಕೆ ದಾನಿಗಳು ಹೆಚ್ಚಿನ ಸಹಕಾರ ನೀಡಬೇಕು. ಈಗಾಗಲೇ ೧೫ಲಕ್ಷ ವೆಚ್ಚದ ಕೆಲಸ ಈಗಾಗಲೇ ಪೂರ್ಣಗೊಂಡಿದೆ. ರಥೋತ್ಸವದಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ರಾಜ ಗೋಪುರ ಲೋಕಾರ್ಪಣೆಗೊಳ್ಳಲಿದೆ ಎಂದು ಹೇಳಿದರು.ರಾಜ ಗೋಪುರ ದಾನಿ ಪ್ರವೀಣ್ ಮಾತನಾಡಿ, ರಾಜಗೋಪುರ ನಿರ್ಮಾಣ ಮಾಡುವುದು ತಂದೆಯ ಕನಸು. ನನಗೆ ಪರಿಚಯ ಇರುವ ಉದ್ಯಮಿಗಳ ಸಹಕಾರ ಪಡೆದು ಈ ಪುಣ್ಯ ಕಾರ್ಯದ ಕೆಲಸಕ್ಕೆ ಪ್ರಮಾಣಿಕವಾಗಿ ನನ್ನ ಸೇವೆ ಮಾಡುತ್ತಿರುವೆ. ಇತಿಹಾಸ ಹೊಂದಿರುವ ಈ ದೇವಾಲಯ ಅಭಿವೃದ್ಧಿಗಾಗಿ ಪ್ರತಿ ಭಕ್ತರ ಸಹಕಾರ ಅಗತ್ಯವಾಗಿದ್ದು, ಹೆಚ್ಚಿನ ತನು ಮನ ಧನ ನೀಡುವಂತೆ ಮಾನವಿ ಮಾಡಿದರು.ಸಮಿತಿ ಸದಸ್ಯ ಜಯರಾಮ್ ಮಾತನಾಡಿ, ನಮ್ಮ ತಂದೆಯವರ ಕಾಲದಿಂದಲೂ ಈ ದೇವಸ್ಥಾನಕ್ಕೆ ಧರ್ಮದರ್ಶಿಗಳಾಗಿ ಸೇವೆ ಸಲ್ಲಿಸಿಕೊಂಡು ಬರಲಾಗುತ್ತಿದ್ದು, ದೇವಾಲಯದ ಅಭಿವೃದ್ಧಿಗಾಗಿ ಈ ಸಮಿತಿ ಪ್ರಾಮಾಣಿಕವಾಗಿ ಶ್ರಮಿಸುತ್ತಾ ಬಂದಿದೆ. ಸ್ವಾಮಿಯ ದೇವಾಲಯಕ್ಕೆ ರಾಜಗೋಪುರ ಅಗತ್ಯತೆಯಿದ್ದು ಅಭಿವೃದ್ಧಿ ಕಾರ್ಯಕ್ಕೆ ಭಕ್ತರ ಸಹಕಾರ ಪ್ರಾಮುಖ್ಯತೆ ವಹಿಸಲಿದೆ ಎಂದರು. ಈ ಸುದ್ದಿಗೋಷ್ಠಿಯಲ್ಲಿ ಉಮಾಶಂಕರ್‌ಆರಾಧ್ಯ, ಚಂದ್ರಶೇಖರಯ್ಯ, ರಾಘವೇಂದ್ರ, ಶ್ರೀರಾಮಯ್ಯ, ಜಯರಾಮು, ದ್ರಾಕ್ಷಾಯಿಣಿ ರಾಜಣ್ಣ, ಡಿ.ಕೆ ರಂಗನಾಥ್, ಶಿಲ್ಪಿ ಸುಜೇಂದ್ರ ಮಣಿ ಸೇರಿದಂತೆ ಇತರರು ಹಾಜರಿದ್ದರು.