ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಲಗಾಮಿಲ್ಲದ ಕುದುರೆಯಂತೆ ಇಡೀ ರಾಜ್ಯದಲ್ಲಿ ಜಿಹಾದಿಗಳು ತಮ್ಮ ಅಟ್ಟಹಾಸ ಮೆರೆಯುತ್ತಿರುವುದಕ್ಕೆ ನಾಗಮಂಗಲದಲ್ಲಿ ನಡೆದಿರುವ ಕೋಮುಗಲಭೆಯೇ ಸಾಕ್ಷಿ ಎಂದು ವಿಶ್ವ ಹಿಂದೂ ಪರಿಷತ್‌ನ ದಕ್ಷಿಣ ಭಾರತ ಧರ್ಮಪ್ರಸಾರ ಪ್ರಮುಖ್ ಸೂರ್ಯನಾರಾಯಣ ಕಿಡಿಕಾರಿದರು.ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸೋಮವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಹಾದಿ ಮಾನಸಿಕತೆಯುಳ್ಳ ಕೆಲವು ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಸಮಾಜದ ಶಾಂತಿ ಕದಡುವ ಕೆಲಸವನ್ನು ನಿರಂತವಾಗಿ ಮಾಡುತ್ತಾ ಬಂದಿವೆ ಎಂದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಸ್ಲಿಂ ದೇಶದ ಬಾವುಟ ಪ್ರದರ್ಶನ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೋಮು ಹಿಂಸಾಚಾರಕ್ಕೆ ಕುಮ್ಮಕ್ಕು ಕೊಡುವ ಘಟನೆ ನಡೆಯುತ್ತಿವೆ. ನಾಗಮಂಗಲದಲ್ಲಿ ನಡೆದಿರುವ ಕೋಮು ಗಲಭೆಯೂ ಕೂಡ ಇದಕ್ಕೆ ಹೊರತಲ್ಲ ಎಂದು ಹೇಳಿದರು.ರಾಜ್ಯ ಸರ್ಕಾರದ ಅತಿಯಾದ ತುಷ್ಟೀಕರಣದ ನೀತಿಯಿಂದ ಇಂತಹ ಜಿಹಾದಿ ಮಾನಸಿಕತೆ ವ್ಯಕ್ತಿಗಳಿಗೆ ಇನ್ನಷ್ಟು ಪುಷ್ಟಿ ಕೊಟ್ಟಂತಾಗಿ ನಾವು ಏನು ಬೇಕಾದರೂ ಮಾಡಬಹುದೆಂಬ ದುರಹಂಕಾರ ತಲೆಗೇರಿದೆ. ಇಂತಹ ದುಷ್ಟರು ಮತ್ತು ಅಯೋಗ್ಯರನ್ನು ಗುರುತಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯದ ಹಲವು ಭಾಗಗಳಲ್ಲಿ ನಡೆಯುತ್ತಿರುವ ಇಂತಹ ಘಟನೆಗಳ ಹಿಂದೆ ನಿಷೇಧಿತ ಪಿಎಫ್‌ಐ ಸಂಘಟನೆ ಕೈವಾಡವಿದೆ. ಅದಕ್ಕೆ ಪುಷ್ಟೀಕರಿಸಿದಂತೆ ಕೇರಳದ ಸಂಬಂಧ ಇರುವ ವ್ಯಕ್ತಿಗಳು ಇಲ್ಲಿದ್ದುಕೊಂಡು ಕೋಮು ಪ್ರಚೋದನೆಗೆ ಕಳೆದ ನಾಲ್ಕೈದು ವರ್ಷಗಳಿಂದ ಪ್ರಯತ್ನಿಸಿರುವುದು. ಅಲ್ಲದೆ ಕೆಲ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಿರುವುದೇ ಉದಾಹರಣೆಯಾಗಿದೆ ಎಂದರು.ಕೇರಳದ ಮಣಪುರಂ ಜಿಲ್ಲೆಯ ಸಂಬಂಧ ಈ ಘಟನೆಯಲ್ಲಿ ಕೇಳಿ ಬಂದಿರುವುದರಿಂದ ಜಿಹಾದಿ ಮನಸ್ಥಿತಿಯುಳ್ಳ ವ್ಯಕ್ತಿಗಳ ಕೈವಾಡವಿರುವ ಅನುಮಾನ ವ್ಯಕ್ತವಾಗುತ್ತಿದೆ. ರಾಜ್ಯದಲ್ಲಿ ಮುಸ್ಲಿಮರನ್ನು ತೃಷ್ಟೀಕರಿಸುವ ಸರ್ಕಾರವಿದೆ. ಹಾಗಾಗಿ ರಾಜ್ಯ ಸರ್ಕಾರದ ಮೇಲೆ ನಮಗೆ ವಿಶ್ವಾಸವಿಲ್ಲ. ಹಾಗಾಗಿ ಈ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕೆಂದು ಆಗ್ರಹಿಸಿದರು.
ಬದರಿಕೊಪ್ಪಲು ಗ್ರಾಮಕ್ಕೂ ಕೂಡ ಭೇಟಿ ಮಾಡಿದ್ದೇವೆ. ಪೊಲೀಸರು ಅಮಾಯಕರನ್ನು ಬೆದರಿಸಿ ಬಂಧಿಸಿದ್ದಾರೆ. ಘಟನೆಗೆ ಕಾರಣರಾದವರಿಗೆ ಮಾತ್ರ ಶಿಕ್ಷೆಯಾಗಬೇಕು. ಹಿಂದೂಗಳನ್ನು ಟಾರ್ಗೆಟ್ ಮಾಡಿ ಬಂಧಿಸಿದರೆ ಮುಂದಿನ ದಿನಗಳಲ್ಲಿ ನಾವು ಅನಿವಾರ್ಯವಾಗಿ ಹೋರಾಟ ನಡೆಸಲು ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಸುದ್ಧಿಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್‌ನ ಕಾನೂನು ವಿಧಿ ಪ್ರಕೋಷ್ಟ ರಾಜ್ಯ ಸಂಯೋಜಕ ಪ್ರದೀಶ್, ವಿಹಿಂಪ ಮೈಸೂರು ವಿಭಾಗದ ಸಹ ಕಾರ್ಯದರ್ಶಿ ಚಿಕ್ಕಬಳ್ಳಿ ಬಾಲು, ವಿಹಿಂಪ ಜಿಲ್ಲಾ ಕಾರ್ಯದರ್ಶಿ ಪುಣ್ಯಕೋಟಿ ರಾಘವೇಂದ್ರ, ಬಜರಂಗದಳ ಜಿಲ್ಲಾ ಸಹ ಸಂಯೋಜಕ ಶಶಿಕಿರಣ್, ತಾಲೂಕು ಕಾರ್ಯದರ್ಶಿ ಯು.ಜೆ.ಮಹೇಶ್ ಇದ್ದರು.