ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಭಾರತದಲ್ಲೇ ವಿಶಿಷ್ಟತೆ ಹೊಂದಿರುವ ಕರ್ನಾಟಕ ರಾಜ್ಯ ಬಹು ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕೆ ಹೊರತು ಕೋಮುವಾದಕ್ಕೆ ಆದ್ಯತೆ ನೀಡಬಾರದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.ಭಾರತೀ ಕಾಲೇಜು ಆವರಣದಲ್ಲಿ ನಡೆದ ಭಾರತೀ ಸಂಭ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ಕರ್ನಾಟಕ ರಾಜ್ಯ ವಿಶಿಷ್ಟ, ಬಹು ಸಂಸ್ಕೃತಿಯ ನೆಲೆಬೀಡು. ಬಿಹಾರದಿಂದ ಬೌದ್ಧಧರ್ಮ ಸನ್ನತಿ, ಕೊಪ್ಪಳ ಮಸ್ಕಿ ಮೈಸೂರಿನಲ್ಲಿ ಬೌದ್ಧ ಧರ್ಮ ಮೊದಲಾದ ಕಡೆ ಆವರಿಸಿಕೊಂಡಿದೆ. ನಮ್ಮ ಬಹು ಸಂಸ್ಕೃತಿ ನೆಲೆಗಳಾಗಿ ಶ್ರೀಮಂತಿಕೆಯಿಂದ ಕೂಡಿರುವ ಪ್ರದೇಶಕ್ಕೆ ಹುಳಿ ಹಿಂಡಬೇಡಿ, ಇಲ್ಲಿನ ಜನರು ನೆಮ್ಮದಿಯಿಂದ ಬದಕಲು ಬಿಡಬೇಕೆಂದು ಸಲಹೆ ನೀಡಿದರು.
1979ರಲ್ಲಿ ಕುರುಂಜಿ ವೆಂಕಟರಮಣಗೌಡರ ಜೊತೆಯಲ್ಲಿ ಜಿ.ಮಾದೇಗೌಡರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಎಲ್ಲಿ ಬೇಕಾದರೂ ಸೀಟು ಸಿಗುತ್ತದೆ. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು, ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮೊದಲು ಸೀಟು ಕೊಡಬೇಕೆಂದು ಮಾದೇಗೌಡರು ನಿರ್ಧಾರ ಮಾಡಿದ್ದು, ನನಗೆ ಹೆಮ್ಮೆ ಎನಿಸಿತು ಎಂದರು.ಭಾರತೀ ಎಜುಕೇಷನ್ ಟ್ರಸ್ಟ್ ಒಂದು ದೊಡ್ಡ ಸಂಸ್ಥೆಯಾಗಿ ಮುಂದುವರಿದು ವಿವಿಧ ರಾಜ್ಯಗಳಿಂದ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಕೆ.ಎಂ ದೊಡ್ಡಿಗೆ ಆಗಮಿಸುತ್ತಿರುವುದು ಮಾದೇಗೌಡರ ಪರಿಶ್ರಮದ ಫಲವಾಗಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ, ರೈತರಿಗೆ ಕಾರ್ಖಾನೆಯನ್ನು ತಂದುಕೊಟ್ಟ ಮಾದೇಗೌಡರನ್ನು ಪ್ರತಿಯೊಬ್ಬರೂ ಸ್ಮರಿಸಿಕೊಳ್ಳಬೇಕಿದೆ ಎಂದರು.
ಶಾಸಕ ಪಿ.ರವಿಕುಮಾರ್ ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ಹೋರಾಟದ ಮುಂಚೂಣಿ ನಾಯಕ ಜಿ. ಮಾದೇಗೌಡರು ನಮ್ಮಂತಹ ಸಾವಿರಾರು ಯುವಕರಿಗೆ ಸ್ಫೂರ್ತಿಯಾಗಿದ್ದಾರೆ. ಅವರ ಹೋರಾಟದಲ್ಲಿ ನಾನು ಭಾಗವಹಿಸಿರುವುದು ಪುಣ್ಯ. ನನಗೂ ಮಾದೇಗೌಡರಿಗೂ ತಾತ- ಮೊಮ್ಮಗನ ಸಂಬಂಧವಾಗಿದ್ದು, ರಾಜಕೀಯ, ಶಿಕ್ಷಣ, ಧಾರ್ಮಿಕ, ಆರೋಗ್ಯ ಹೋರಾಟ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ಜಿ.ಮಾದೇಗೌಡರು ಧೀಮಂತ ವ್ಯಕ್ತಿ. ಇವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ನಾನು ಕೂಡ ಸರ್ಕಾರಕ್ಕೆ ಪತ್ರ ಬರೆಯುತ್ತೇನೆಂದು ಹೇಳಿದರು.ಮಧು.ಜಿ ಮಾದೇಗೌಡರು ಭಾರತೀ ಕಾಲೇಜನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗುವ ಜೊತೆಗೆ ಗ್ರಾಮೀಣ ಮಕ್ಕಳಿಗಾಗಿ 10 ಕೋಟಿ ರು. ವೆಚ್ಚದ ಸ್ಫೋರ್ಟ್ಸ್ ಕ್ಲಬ್ ತೆರೆದು ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಮಂಡ್ಯ ವಿಶ್ವವಿದ್ಯಾಲಯ ಉಳಿದಿದೆ. ಇದರ ಪ್ರಯುಕ್ತ ಡಿಸೆಂಬರ್ ತಿಂಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಒಳಗೊಂಡ ಅತ್ಯುತ್ತಮ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು. ಭಾರತೀ ಕಾಲೇಜಿನ ವಿದ್ಯಾರ್ಥಿಗಳು ಕೂಡ ಭಾಗವಹಿಸಬೇಕು ಎಂದು ತಿಳಿಸಿದರು.