ಹೊಸಪೇಟೆ: ಜಗತ್ತಿನಲ್ಲಿ ಕಾರ್ಪೊರೇಟ್ ವ್ಯವಸ್ಥೆ ಪತನವಾದ ನಂತರ ಅನಿವಾರ್ಯವಾಗಿ ಕಮ್ಯುನಿಸ್ಟ್ ವ್ಯವಸ್ಥೆಯೇ ಪರ್ಯಾಯವಾಗಿ ನಿರ್ಮಾಣವಾಗಲಿದೆ ಎಂದು ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಆರ್.ಭಾಸ್ಕರ್ ರೆಡ್ಡಿ ತಿಳಿಸಿದರು.ನಗರದ ಶ್ರಮಿಕ ಭವನದಲ್ಲಿ ಭಾನುವಾರ ನಡೆದ ಕೆಂಪು ಪುಸ್ತಕ ದಿನಾಚರಣೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಅಮೆರಿಕ ಹಲವು ಪ್ರಜಾಪ್ರಭುತ್ವ ದೇಶಗಳ ಮೇಲೆ ಆರ್ಥಿಕ ದಿಗ್ಬಂಧನ, ತೆರಿಗೆ ಭಯೋತ್ಪಾದನೆ ಮತ್ತು ಶಸ್ತ್ರಾಸ್ತ್ರ ಯುದ್ಧಗಳನ್ನು ಸಾರುತ್ತಿರುವುದು ಜಾಗತಿಕ ಮಾರುಕಟ್ಟೆಯ ಮೇಲೆ ತನ್ನ ಹಿಡಿತ ಸಾಧಿಸುತ್ತಿರುವುದರ ದ್ಯೋತಕವಾಗಿದೆ. ಅಮೆರಿಕ ಮತ್ತು ಭಾರತದ ವಾಣಿಜ್ಯ ಒಪ್ಪಂದಗಳು, ಕೇಂದ್ರ ಸರ್ಕಾರ ಭಾರತದ ಸಾರ್ವಭೌಮತೆ ಅಮೆರಿಕದ ಅಡಿಯಾಳಾಗಿಸುವ ಪ್ರಯತ್ನ ಮಾತ್ರವಲ್ಲದೇ ಭಾರತದ ರೈತ​ ಕಾರ್ಮಿಕ ವಿರೋಧಿಯಾಗಿದ್ದು, ಮುಂಬರುವ ದಿನಗಳಲ್ಲಿ ಖಂಡಿತ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗಲಿವೆ ಎಂದು ಅವರು ತಿಳಿಸಿದರು.

ಜಿಲ್ಲಾ ಸಮಿತಿ ಸದಸ್ಯ ಎ. ಕರುಣಾನಿಧಿ ಮಾತನಾಡಿ, ಜಗತ್ತಿನಲ್ಲಿ ಕಾರ್ಪೊರೇಟ್ ವ್ಯವಸ್ಥೆಯು ಬಂಡವಾಳಶಾಹಿಯ ಅತ್ಯುನ್ನತ ವ್ಯವಸ್ಥೆಯಾಗಿದೆ. ಈ ವ್ಯವಸ್ಥೆಯನ್ನು ಮತ್ತು ಅದರ ಸರ್ಕಾರವನ್ನು ಕಿತ್ತು ಹಾಕಲು ಶಕ್ತವಾಗಿರುವ ಏಕೈಕ ವರ್ಗ ಎಂದರೆ ಅದು ಕಾರ್ಮಿಕ ವರ್ಗ ಮಾತ್ರವೇ. ಕಾರ್ಮಿಕ ವರ್ಗಕ್ಕೆ ಮಾತ್ರ ಇಂತಹ ಗುಣವಿದೆ ಎಂಬುದನ್ನು ಕಾರ್ಲ್ ಮಾರ್ಕ್ಸ್ 170 ವರ್ಷಗಳ ಹಿಂದೆಯೇ ಹೇಳಿದ್ದಾರೆ ಎಂದು ಅವರು ವಿವರಿಸಿದರು.

ಆದರೆ ಆಳುವ ಕೇಂದ್ರ ಸರ್ಕಾರ ಭಾರತದಲ್ಲಿ ಕ್ರಾಂತಿಕಾರಿ ಕಾರ್ಮಿಕ ವರ್ಗದ ಕತ್ತು ಹಿಸುಕುವ ಉದ್ದೇಶದಿಂದಲೇ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದು ಅವುಗಳನ್ನು ಶಾಸನಬದ್ಧ ಮಾಡಿದ್ದಾರೆ. ಕಾರ್ಮಿಕ ವರ್ಗವು ಶಾಸನಗಳನ್ನು ರಾಜಕೀಯವಾಗಿ ಹಿಮ್ಮೆಟ್ಟಿಸದಿದ್ದಲ್ಲಿ ಕಾರ್ಮಿಕರಿಗೆ ಭವಿಷ್ಯವಿಲ್ಲ ಎಂದು ಅವರು ಹೇಳಿದರು.

ತಾಲೂಕು ಕಾರ್ಯದರ್ಶಿ ಯಲ್ಲಾಲಿಂಗ ಮಾತನಾಡಿ, ಕಾರ್ಮಿಕ ವರ್ಗ ದೇಹವಾದರೆ ಕಮ್ಯುನಿಸ್ಟ್ ಪಕ್ಷದ ಸದಸ್ಯರು ಅದರ ಮೆದುಳಾಗಿ ಕೆಲಸ ಮಾಡಿದಾಗ ಮಾತ್ರ ಕಾರ್ಪೊರೇಟ್ ಬಂಡವಾಳ ಮತ್ತು ಅದರ ಸರ್ಕಾರಗಳನ್ನು ಹಿಮ್ಮೆಟ್ಟಿಸಲು ಸಾಧ್ಯ. ಕಾರ್ಮಿಕ ವರ್ಗವು ಕಮ್ಯುನಿಸ್ಟ್ ಪಕ್ಷದ ಹೋರಾಟಗಳಲ್ಲಿ ಸಮ್ಮಿಳಿತಗೊಂಡು ಅದಕ್ಕೆ ವರ್ಗ ಹೋರಾಟದ ಸ್ವರೂಪ ನೀಡಬೇಕೆಂದು ಅವರು ಮನವಿ ಮಾಡಿದರು.


ಹಿರಿಯ ಮುಖಂಡರಾದ ಜಂಬಯ್ಯ ನಾಯಕ, ಸಿದ್ದಲಿಂಗಪ್ಪ, ತಾಯಪ್ಪ ನಾಯಕ, ಬಿಸಾಟಿ ಮಹೇಶ್, ಎಂ. ಗೋಪಾಲ್, ಸ್ವಾಮಿ ಸೇರಿದಂತೆ ಕಾರ್ಮಿಕ ಸಂಘಗಳ ಮುಖಂಡರು ಹಾಗೂ ಪಕ್ಷದ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.