ಸಾರಾಂಶ
ಬಾಗಲಕೋಟೆ : ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಅತ್ಯಾಚಾರ ಕೊಲೆಯನ್ನು ನಾನು ಯಾವಾಗಲೂ ಖಂಡಿಸುತ್ತೇನೆ. ಸೌಜನ್ಯಾಗೆ ನ್ಯಾಯ ಸಿಗಬೇಕು ಅನ್ನುವಂತದ್ದರಲ್ಲಿ ಎರಡನೇ ಮಾತಿಲ್ಲ. ಅದನ್ನು ಯಾರೂ ಕ್ಷಮೆ ಮಾಡುವಂತದ್ದಲ್ಲ. ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕು. ಆದರೆ ಸದ್ಯ ನಡೆಯುತ್ತಿರುವ ಧರ್ಮಸ್ಥಳ ಪ್ರಕರಣ ಹಿಂದೆ, ಕಮ್ಯುನಿಸ್ಟರು, ಕ್ರಿಶ್ಚಿಯನ್ನರ ಲಾಬಿ ಇದೆ ಅಂತ ಸಂಶಯ ಬರುತ್ತಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಸಂಶಯ ವ್ಯಕ್ತಪಡಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದಲ್ಲಿನ ಪ್ರಕರಣದ ಬಗ್ಗೆ ಇಲ್ಲಿವರೆಗೆ ಸಾಕಷ್ಟು ಪ್ರೂಫ್ ಇದೆ ಅಂದವರು ಏಕೆ ಬಹಿರಂಗ ಪಡಿಸುತ್ತಿಲ್ಲ? ಕೋರ್ಟ್‌ಗೆ ಏಕೆ ಹೋಗ್ತಿಲ್ಲ? ನೇರವಾಗಿ ವೀರೇಂದ್ರ ಹೆಗಡೆ, ಅಣ್ಣಪ್ಪ, ಮಂಜುನಾಥ ದೇವರು ಅಂತ ಹೇಳಿಕೆ ಕೊಡೋದು ಸರಿಯಲ್ಲ ಎಂದ ಅವರು, ಹೇಳುವ ಮುನ್ನ ಆಧಾರ ಬೇಕು. ಅದನ್ನು ಪೊಲೀಸ್, ಕೋರ್ಟ್ ಮುಂದೆ ಹಾಜರುಪಡಿಸಬೇಕು ಎಂದು ಹೇಳಿದರು.
ಧರ್ಮಸ್ಥಳ ಪ್ರಕರಣದಲ್ಲಿ ಯಾಕೆ ಎಡ ಪಂಥೀಯರು, ಬುದ್ಧಿ ಜೀವಿಗಳು, ನೇಹಾ, ಯಮುನಾ, ಅಂಜಲಿ ಕೊಲೆಯಾದಾಗ ಸುಮ್ಮನೆ ಇದ್ದು, ಆಗ ಬಾಯಿ ಮುಚ್ಚಿಕೊಂಡು ಕೂತಿದ್ರಲ್ಲಾ. ನಿಮ್ಮ ಉದ್ದೇಶ ಬರೀ ಹಿಂದೂ ಧರ್ಮ, ದೇಗುಲ ಮಾತ್ರ ಗುರಿ. ಮಹಿಳೆಯರ ಬಗ್ಗೆ ಕಾಳಜಿಯಿಲ್ಲ. ಇವತ್ತು ಏನು ಅನಾಮಿಕ ಅನ್ನುವ ವ್ಯಕ್ತಿ ಮುಖವಾಡ ಹಾಕಿಕೊಂಡು ಏನು ಶವ ಬಗ್ಗೆ ಹೇಳಿಕೆ ನೀಡಿ ಬಂದಿದ್ದಾನೆ. ಆತ ಬೋಗಸ್ ವ್ಯಕ್ತಿ. ಏನು ಇಲ್ಲ ನಿನ್ನೆಯೇ ಪ್ರೂವ್ ಆಗಿದೆ. ನೆಲ ಅಗೆದು ನೋಡಿದರೆ ಏನು ಸಿಕ್ಕಿಲ್ಲ. ಎಷ್ಟು ಅಡಿ ಅಗೆದಿದ್ದೆ ಅಂತ ಆತನಿಗೆ ಗೊತ್ತಿರುತ್ತದೆ. ಈ ವಿಷಯ ಜೀವಂತವಾಗಿ ಇಡುವ ಕೆಲಸ ನಡೆದಿದೆ. ಈಗಾಗಲೇ 13 ಸ್ಥಳ ಹೇಳಿದ್ದಾನೆ. ಎಲ್ಲರೂ ಉಳಿದ ಕೆಲಸ ಬಿಟ್ಟು ಅಲ್ಲೇ ಇರಬೇಕು. ಇದೆಲ್ಲ ವ್ಯವಸ್ಥಿತ ಸಂಚು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮದರಸಾ, ಚರ್ಚ್‌ನಲ್ಲೂ ಅತ್ಯಾಚಾರ ನಡೆದಿವೆ:
ಅತ್ಯಾಚಾರಗಳು ಮದರಸಾ, ಚರ್ಚ್‌ನಲ್ಲೂ ನಡೆದಿವೆ. ಇಂತಹ ಘಟನೆಗಳು ಬೇಕಾದಷ್ಟು ನಡೆದಿವೆ. ಅವುಗಳ ಬಗ್ಗೆ ಮಾತಾಡೋದಿಲ್ಲ. ಕಾಂಗ್ರೆಸ್ ಸರ್ಕಾರ ಹಿಂದೂ ಧರ್ಮವನ್ನು ಟಾರ್ಗೆಟ್ ಮಾಡುವಂತ ವ್ಯವಸ್ಥಿತ ನೀತಿಯಾಗಿದೆ. ಮದರಸಾದಲ್ಲಿ ನಡೆದ ಘಟನೆಗಳು, ಚರ್ಚ್‌ಗಳಲ್ಲಿ ನಡೆದ ಘಟನೆಗಳನ್ನು ಓಪನ್ ಮಾಡಿ, ಅವುಗಳಿಗೂ ಎಸ್ಐಟಿ ಮಾಡಿ. ಅವುಗಳಿಗೆ ಸಂಬಂಧಪಟ್ಟ ಆಧಾರಗಳನ್ನು ನಾವು ಕೊಡುತ್ತೇವೆ. ನಿಮ್ಮ ಗುರಿ ಇರೋದು ಅತ್ಯಾಚಾರ ಆರೋಪಿಗಳಿಗೆ ಶಿಕ್ಷೆಯಾಗಲಿ ಅನ್ನೋದಲ್ಲ. ನಿಮ್ಮ ಗುರಿ ಇರೋದು ಹಿಂದೂ, ಹಿಂದುತ್ವ, ಹಿಂದೂ ಧರ್ಮದ ಬಗ್ಗೆ ಅಪಪ್ರಚಾರ ಮಾಡೋದು ಆಗಿದೆ ಎಂದು ಆರೋಪಿಸಿದರು.
ಪಾಕ್ ಜೊತೆ ಕ್ರಿಕೆಟ್‌ಗೆ ಆಕ್ಷೇಪ:
ಪಾಕ್ ಜೊತೆ ಕ್ರಿಕೆಟ್ ಮ್ಯಾಚ್ ನಡೆಸುವ ಬಗ್ಗೆ ಕೇಂದ್ರ ಸರ್ಕಾರದ ನಿರ್ಧಾರ ಹಾಗೂ ಪ್ರಧಾನಿ ಮೋದಿ ಹೇಳಿಕೆಗೆ ಪ್ರಮೋದ್ ಮುತಾಲಿಕ್ ಆಕ್ಷೇಪ ವ್ಯಕ್ತಪಡಿಸಿದರು. ಇತ್ತೀಚೆಗೆ ಪಹಲ್ಗಾಂದಲ್ಲಿ 26 ಅಮಾಯಕ ಮುಗ್ಧ ಜನರ ಮೇಲೆ ಗುಂಡು ಹಾರಿಸಿ ಕೊಂದಿದ್ದು, ಇನ್ನೂ ನಾಲ್ಕು ತಿಂಗಳಾಗಿಲ್ಲ. ಇನ್ನೂ ಆ ಪ್ರಕರಣ ಹಸಿ ಹಸಿಯಾಗಿದೆ. ಅವ್ರ ಮನೆಗಳಲ್ಲಿ ಕಣ್ಣೀರು ನಿಂತಿಲ್ಲ. ಅಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಪಾಕಿಸ್ತಾನ ಜೊತೆ ಕ್ರಿಕೆಟ್ ಆಡುವ ನಿರ್ಣಯ ತಗೊಂಡಿದ್ದು ಮಹಾ ಅಪರಾಧ, ತಪ್ಪು ಮಾಡ್ತಿದ್ದಾರೆ. ಇದನ್ನು ಯಾರೂ ಒಪ್ಪಲ್ಲ. ಮೋದಿಯವ್ರೇ ನೀವೊಬ್ಬರೇ ನಮಗೆ ಆಧಾರ ಎಂದು ಮುತಾಲಿಕ್ ತಿಳಿಸಿದರು.
ಸಿಂಧೂರ ಅಂತ ಹೇಳುವವರು, ಇನ್ನೂ ಕಣ್ಣೀರು, ರಕ್ತದ ಕಲೆಗಳು ಆರಿಲ್ಲ. ಆ ಪುಟಗೋಸಿ ಪಾಕಿಸ್ತಾನದ ಜೊತೆಗೆ ಕ್ರಿಕೆಟ್ ಆಡೋದು ಏನ್ ಸಾಧನೆ, ಏನ್ ಸ್ವಾಭಿಮಾನ, ದೇಶಭಿಮಾನ ಏನಿದೆ?. ಕಾಂಗ್ರೆಸ್ ಮಾಡಿದ ತಪ್ಪನ್ನು ಮತ್ತೇ ನೀವೂ ಕೂಡ ಮಾಡ್ತಿದ್ದೀರಿ. ದುಡ್ಡಿಗೋಸ್ಕರನಾ? ಅದೇ ದುಡ್ಡನ್ನ ತಗೊಂಡು ಪಾಕಿಸ್ತಾನದವ್ರು ಬಾಂಬ್ ತಯಾರು ಮಾಡ್ತಾರೆ. ಪಹಲ್ಗಾಮಗಳಲ್ಲಿ ಬಾಂಬ್ ಹಾಕ್ತಾರೆ. ಮತ್ತೆ ಹೆಣಗಳು ಉರುಳುತ್ತವೆ. ಇದು ಪ್ರಜ್ಞೆ ಇಲ್ವಾ ನಿಮಗೆ?. ಕೇಂದ್ರ ಸರ್ಕಾರ, ಬಿಸಿಸಿಐ ಅಥವಾ ಎಸಿಸಿಗೆ ಪ್ರಜ್ಞೆ ಇಲ್ವಾ?. ನಿಮಗೆ ದುಡ್ಡೇ ಮುಖ್ಯವಾಯ್ತಾ?. ಎಷ್ಟು ದುಡ್ಡು ಬೇಕು ಹೇಳಿ, ನಾವು ನೂರು ಕೋಟಿ ಹಿಂದೂಗಳು ನಿಮ್ಮಗೆ ದುಡ್ಡು ತಲುಪಿಸ್ತೇವೆ ಎಂದು ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಮುತಾಲಿಕ್ ಕಿಡಿಕಾರಿದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ ಹಾಗೇ ಇವತ್ತಿನ ದಿನದಲ್ಲಿ ಹಿಂದೂ ಪಕ್ಷದ ಅವಶ್ಯಕತೆ ಇದೆ. ನಾನೇನು ಇನ್ನೂ ಯತ್ನಾಳರನ್ನು ಭೇಟಿ ಮಾಡಿಲ್ಲ, ಚರ್ಚೆಯನ್ನೂ ಮಾಡಿಲ್ಲ. ಆದ್ರೆ ಅವ್ರಿಗೆ ನಮ್ಮ ಅವಶ್ಯಕತೆ ಇದೆ ಅಂದ್ರೆ, ನಾನೂ ಕೂಡ ಅವ್ರ ಜೊತೆ ಕೈ ಜೋಡಿಸಲು ಸಿದ್ಧವಾಗಿದ್ದೇನೆ
ನಯನಾ ಮೋಟಮ್ಮಗೆ ಅಭಿನಂದನೆ
ಮೂಡಿಗೆರೆಯಲ್ಲಿ ನಯನಾ ಮೋಟಮ್ಮ ಕೇಸರಿ ಶಾಲು ಹಾಕಿ ಭಾಗಿಯಾಗಿ ಬಂದಿದ್ದೇ ಆಶ್ಚರ್ಯಕರ ಎಂದು ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಹಜವಾದ ಕಾರ್ಯಕ್ರಮದಲ್ಲಿ ನಯನಾ ಮೋಟಮ್ಮ ಬಹಳ ಮುಕ್ತವಾಗಿ ಮಾತನಾಡಿದ್ದಾರೆ. ಬಿಜೆಪಿ ಸೇರುತ್ತೇನೆ ಅಂತೇಳಿ ನಯನಾ ಮೋಟಮ್ಮ ಹೇಳಿಲ್ಲ. ಮೊದಲು ನನ್ನ ಧರ್ಮ, ಆಮೇಲೆ ಪಕ್ಷ ಅಂತೇಳಿ ಸಹಜವಾಗಿ ಹೇಳಿದ್ದಾರೆ. ಎಲ್ಲ ಕಾಂಗ್ರೆಸ್, ಪ್ರತಿನಿಧಿಗಳದ್ದು ಇದೇ ಧ್ವನಿ ಇರಬೇಕು. ಮೊದಲು ದೇಶ, ಧರ್ಮ ಆಮೇಲೆ ಪಕ್ಷ ಅಂತಿರಬೇಕು. ಧರ್ಮ, ದೇಶ ಉಳಿದ್ರೆ ನಿಮ್ಮ ಪಕ್ಷ ಉಳಿಯುತ್ತದೆ. ಇದನ್ನೇ ನಯನಾ ಮೋಟಮ್ಮ ಬಹಳ ಚೆನ್ನಾಗಿ ಹೇಳಿದ್ರು. ಹಾಗಾಗಿ ನಯನಾ ಮೋಟಮ್ಮ ಅವ್ರನ್ನು ಅಭಿನಂದಿಸುತ್ತೇನೆ ಎಂದ ಮುತಾಲಿಕ್, ಬಿಜೆಪಿ ಸೇರ್ತಾರೋ, ಇಲ್ವೊ ಅದು ಅವರ ವೈಯಕ್ತಿಕ ವಿಚಾರ ಎಂದು ಹೇಳಿದರು.