ಸಾರಾಂಶ
ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಈಡಿಗ ಸಮುದಾಯದ ಪ್ರತಿಯೊಬ್ಬರು, ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಸಮುದಾಯವನ್ನು ಸಮಾಜ ಮುಖ್ಯವಾಹಿನಿಗೆ ತರಲು ಮುಂದಾಗಬೇಕು ಎಂದು ಕನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ಡಾ.ಎಂ. ತಿಮ್ಮೇಗೌಡ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಈಡಿಗ ಸಮುದಾಯದ ಪ್ರತಿಯೊಬ್ಬರು, ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಸಮುದಾಯವನ್ನು ಸಮಾಜ ಮುಖ್ಯವಾಹಿನಿಗೆ ತರಲು ಮುಂದಾಗಬೇಕು ಎಂದು ಕನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ಡಾ.ಎಂ. ತಿಮ್ಮೇಗೌಡ ಹೇಳಿದರು.ನಗರದ ಮರಿಯಪ್ಪನಪಾಳ್ಯದಲ್ಲಿ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಸಹಯೋಗದಲ್ಲಿ ಕೆಲಗೇರಿ ಹೋಬಳಿ ಆರ್ಯ ಈಡಿಗರ ಸಂಘ ಆಯೋಜಿಸಿದ್ದ ‘ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತ್ಯುತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈಡಿಗ ಸಮುದಾಯದ ಎಲ್ಲರೂ ತಮ್ಮಲ್ಲಿರುವ ವೈಮನಸ್ಸನ್ನು ಮರೆತು ಒಂದಾಗಬೇಕು. ಆಗ ಮಾತ್ರ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಸಮುದಾಯ ಪಡೆದುಕೊಳ್ಳಲು ಸಾಧ್ಯ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಪಿ. ಪ್ರಕಾಶ್ ಮಾತನಾಡಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ, ಸರ್.ಎಂ. ವಿಶ್ವೇಶ್ವರಯ್ಯ ಬಿಡಿಎ ಬಡಾವಣೆಯಲ್ಲಿ ಈಡಿಗ ಸಮುದಾಯ ಭವನ ನಿರ್ಮಾಣಕ್ಕೆ ಹತ್ತು ಸಾವಿರ ಚದರ ಅಡಿ ಜಮೀನು ಮಂಜೂರು ಮಾಡಿದೆ. ಈಡಿಗ ಅಭಿವೃದ್ಧಿ ನಿಗಮದ ಸ್ಥಾಪನೆಗೂ ಸುಮಾರು 30 ಕೋಟಿ ರು.ಗಳನ್ನು ಮೀಸಲಿಡಲು ಒಪ್ಪಿಗೆ ಸೂಚಿಸಿದೆ ಎಂದು ತಿಳಿಸಿದರು.ದೀನದಲಿತರ ಕಷ್ಟ ಕಾರ್ಪಣ್ಯ ತೊಡೆದು ಹಾಕಲು ಶ್ರಮಿಸಿದ, ವಿಶ್ವ ಮಾನವ ಧರ್ಮ ಬೋಧಿಸಿದ ನಾರಾಯಣ ಗುರುಗಳ ವಿಚಾರ, ಜೀವನ ಸಾಧನೆಗಳು ಶಾಲಾ ಪಠ್ಯ ಪುಸ್ತಕಗಳಲ್ಲಿ ಪ್ರಕಟವಾಗಬೇಕು ಎಂದು ಹೇಳಿದರು. ಇದೇ ವೇಳೆ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.
ಈ ವೇಳೆ ಸಂಘದ ಅಧ್ಯಕ್ಷ ಟಿ.ಮುತ್ತುರಾಜ್, ಈಡಿಗರ ಸಂಘದ ಉಪಾಧ್ಯಕ್ಷೆ ಆಶಾ ಲೋಹಿತ್, ಕೇಂದ್ರ ಸಮಿತಿ ಸದಸ್ಯ ಕೃಷ್ಣಮೂರ್ತಿ, ನಿಟ್ಟೂರು ಸಂಸ್ಥಾನದ ಧರ್ಮದರ್ಶಿ ಅಂಬರೀಷ್, ಸಾಹಿತಿ ಸುಜಯ ಸುರೇಶ್, ಉಪಾಧ್ಯಕ್ಷ ಮಹಾಲಿಂಗಪ್ಪ, ವಿ. ಉಮೇಶ್ ಕೇಶವಮೂರ್ತಿ, ಜಗದೀಶ್, ಪ್ರಧಾನ ಕಾರ್ಯದರ್ಶಿ ಟಿ.ಎನ್.ಶಂಕರ್, ಬಿಜೆಪಿ ಮುಖಂಡ ಜಯರಾಮು ಇದ್ದರು.