ಕನ್ನಡಪ್ರಭ ವಾರ್ತೆ ನಾಲತವಾಡ
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅವ್ಯವಹಾರ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಮಾನವ ಹಕ್ಕು ಆಯೋಗಕ್ಕೆ ಸಲ್ಲಿಸಿದ್ದ ದೂರಿನ ಹಿನ್ನೆಲೆಯಲ್ಲಿ ಮಂಗಳವಾರ ತನಿಖಾಧಿಕಾರಿಗಳ ತಂಡ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.ಸಮುದಾಯ ಆರೋಗ್ಯ ಕೇಂದ್ರದಲ್ಲಿ ಐ.ಪಿ.ಡಿ ಹಾಗೂ ಒ.ಪಿ.ಡಿ ಹಣವನ್ನು ವೈದ್ಯ ಡಾ.ಸಿ.ಬಿ.ವಿರಕ್ತಮಠ ದುರುಪಯೋಗ ಮಾಡಿಕೊಂಡಿದ್ದಾರೆಂದು ಆರೋಪಿಸಿ ವೀರೇಶ ಆಲಕೊಪ್ಪರ ಅವರು ಕಳೆದ ತಿಂಗಳು ಆರೋಗ್ಯ ಸಚಿವರು ಹಾಗೂ ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿ ಸೂಕ್ತಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಆಯೋಗವು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸೂಚಿಸಿತ್ತು. ಅದರಂತೆ ಡಿಎಚ್‌ಒ ಅವರು ತನಿಖಾ ತಂಡ ರಚಿಸಿದ್ದರು.ಮಂಗಳವಾರ ದಿಢೀರ್ ಭೇಟಿ ನೀಡಿದ ತನಿಖಾ ತಂಡ ಆಸ್ಪತ್ರೆಯ ವಿವಿಧ ವಿಭಾಗಗಳನ್ನು ಪರಿಶೀಲಿಸಿತು. ಬಳಿಕ ದೂರುದಾರರ ಸಮ್ಮುಖದಲ್ಲಿ ವಿಚಾರಣೆ ನಡೆಸಿದ ತಾಲೂಕು ನೋಡಲ್ ಅಧಿಕಾರಿ ಡಾ.ಎಂ.ಬಿ.ಬಿರಾದಾರ ಹಾಗೂ ತಾಲೂಕು ಆರೋಗ್ಯಾಧಿಕಾರಿ ಸತೀಶ ತಿವಾರಿ ಅವರು ಸಿಬ್ಬಂದಿ ಸಮಯ ಪಾಲನೆ ಮಾಡದಿರುವುದು, ಸಮವಸ್ತ್ರ ಧರಿಸದಿರುವುದು ಸೇರಿದಂತೆ ಇತರೆ ಸಮಸ್ಯೆಗಳ ಕುರಿತು ಚರ್ಚಿಸಿದರು.ವಿಚಾರಣೆ ವೇಳೆ ಅಧಿಕಾರಿಗಳು ಸಿಬ್ಬಂದಿಗೆ ಸಮಯ ಪಾಲನೆ ಸೇರಿ ಆಸ್ಪತ್ರೆಯ ಶಿಸ್ತು ಮತ್ತು ಸೇವಾ ಗುಣಮಟ್ಟದಲ್ಲಿ ಸುಧಾರಿಸಬೇಕು. ಇಲ್ಲವಾದರೇ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಆಸ್ಪತ್ರೆಯ ಸಿಬ್ಬಂದಿ, ಹೋರಾಟಗಾರರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.ಆಸ್ಪತ್ರೆಯ ಸಮಸ್ಯೆಗಳ ಕುರಿತು ತನಿಖೆ ನಡೆಸುವಂತೆ ಮೇಲಧಿಕಾರಿಗಳಿಂದ ಸೂಚನೆ ಇತ್ತು. ಎಲ್ಲರ ಸಮ್ಮುಖದಲ್ಲೇ ಪರಿಶೀಲನೆ ನಡೆಸಲಾಗಿದೆ. ಸಣ್ಣಪುಟ್ಟ ಲೋಪಗಳನ್ನು ಸರಿಪಡಿಸಲು ಆಸ್ಪತ್ರೆಯ ಸುಪರಿಂಟೆಂಡೆಂಟ್ ಅವರಿಗೆ ಸಲಹೆ ನೀಡಲಾಗಿದೆ. ತನಿಖಾ ವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸಲಾಗುವುದು.
-ಡಾ.ಎಂ.ಬಿ.ಬಿರಾದಾರ, ತಾಲೂಕು ನೋಡಲ್ ಅಧಿಕಾರಿ.ಆಸ್ಪತ್ರೆಯಲ್ಲಿನ ಅವ್ಯವಹಾರ ಕುರಿತು ನಾನು ದೂರು ಸಲ್ಲಿಸಿದ್ದೇನೆ. ತನಿಖೆ ಸಮಗ್ರವಾಗಿ ನಡೆದು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ.
-ವೀರೇಶ ಆಲಕೊಪ್ಪರ, ದೂರುದಾರ