ಬಾಲ್ಯ ವಿವಾಹ ಕೇವಲ ಅಪರಾಧವಲ್ಲ ಬದಲಿಗೆ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದೆ. ಇದು ಹೆಣ್ಣುಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಭವಿಷ್ಯಕ್ಕೆ ಧಕ್ಕೆ ತರುವ ಬಾಲ್ಯ ವಿವಾಹ ಅವರನ್ನು ದೈಹಿಕ ಮತ್ತು ಮಾನಸಿಕವಾಗಿ ಹಿಂಸೆಗೆ ಒಳಪಡಿಸುವ ಜೊತೆಗೆ ಹೆಣ್ಣು ಮಕ್ಕಳ ಜೀವನದ ಎಲ್ಲಾ ಆಯಾಮಗಳ ಮೇಲೆ ಪರಿಣಾಮ ಬೀರುತ್ತದೆ.
ಕನ್ನಡಪ್ರಭ ವಾರ್ತೆ ಮದ್ದೂರು
ಬಾಲ್ಯ ವಿವಾಹ ದಂತಹ ಸಾಮಾಜಿಕ ಪಿಡುಗು ನಿರ್ಮೂಲನೆಗೆ ಕಾನೂನು ಕ್ರಮದ ಜೊತೆಗೆ ಸಮುದಾಯದ ಸಹಭಾಗಿತ್ವ ಅಗತ್ಯವಾಗಿದೆ ಎಂದು ಮಂಡ್ಯ ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಆನಂದ ಹೇಳಿದರು.ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಜಿಲ್ಲಾ ಆಡಳಿತ, ಜಿಪಂ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮತ್ತು ನಿರ್ದೇಶನಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಡೆದ ಬಾಲ್ಯ ವಿವಾಹ ವಿರೋಧಿಸಿ ಹಮ್ಮಿಕೊಂಡಿದ್ದ ಜಾಥಾ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಬಾಲ್ಯ ವಿವಾಹದ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು.
ಬಾಲ್ಯ ವಿವಾಹ ಕೇವಲ ಅಪರಾಧವಲ್ಲ ಬದಲಿಗೆ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದೆ. ಇದು ಹೆಣ್ಣುಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಭವಿಷ್ಯಕ್ಕೆ ಧಕ್ಕೆ ತರುವ ಬಾಲ್ಯ ವಿವಾಹ ಅವರನ್ನು ದೈಹಿಕ ಮತ್ತು ಮಾನಸಿಕವಾಗಿ ಹಿಂಸೆಗೆ ಒಳಪಡಿಸುವ ಜೊತೆಗೆ ಹೆಣ್ಣು ಮಕ್ಕಳ ಜೀವನದ ಎಲ್ಲಾ ಆಯಾಮಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದರು.ಇತ್ತೀಚಿನ ಕೆಲ ದಿನಗಳ ಹಿಂದೆ ಎಲ್ಲಾ ಜಿಲ್ಲೆಗಳಿಗಿಂತ ಮಂಡ್ಯ ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪದ್ಧತಿ ಸಾಮಾಜಿಕ ಪಿಡುಗಾಗಿತ್ತು. ಈ ನಿಟ್ಟಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಕ್ಕಳ ರಕ್ಷಣಾ ಹಕ್ಕುಗಳ ಆಯೋಗ ಎಲ್ಲಾ ತಾಲೂಕುಗಳಲ್ಲಿ ಬಾಲ್ಯ ವಿವಾಹ ಕುರಿತು ಜಾಥ ನಡೆಸುವ ಮೂಲಕ ಜನರಲ್ಲಿ ಅರಿವು ಮೂಡಿಸುತ್ತಿರುವುದರಿಂದ ಪದ್ಧತಿ ಸಂಖ್ಯೆ ಕಡಿಮೆಯಾಗುತ್ತಿದೆ ಎಂದರು.
ತಹಸೀಲ್ದಾರ್ ಪರಶುರಾಮ ಸತ್ತಿಗೇರಿ ಮಾತನಾಡಿ, ಬಾಲ್ಯ ವಿವಾಹ ಹೆಣ್ಣು ಮಕ್ಕಳ ಯೋಗಕ್ಷೇಮ ಮತ್ತು ಭವಿಷ್ಯಕ್ಕೆ ದಕ್ಕೆ ತರುವ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಈ ಬಗ್ಗೆ ಪೋಷಕರು ಜಾಗೃತರಾಗಿ ಬಾಲ್ಯ ವಿವಾಹ ತಡೆಗಟ್ಟಲು ಪ್ರತಿಜ್ಞೆ ಮಾಡಬೇಕು ಎಂದರು.ಈ ವೇಳೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕ ಲೋಕೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಆಶಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಸ್.ರಶ್ಮಿ, ಪೌರಾಯುಕ್ತೆ ಎಸ್.ಎನ್.ರಾಧಿಕಾ, ಬಿಇಒ ಎಸ್.ಬಿ.ಧನಂಜಯ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅರುಣ್ ಕುಮಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.