ಜಿಲ್ಲಾಡಳಿತದ ಆದೇಶಕ್ಕೂ ಕಿಮ್ಮತ್ತು ಕೊಡದ ಕಂಪನಿಗಳು

| Published : Aug 13 2025, 12:30 AM IST

ಜಿಲ್ಲಾಡಳಿತದ ಆದೇಶಕ್ಕೂ ಕಿಮ್ಮತ್ತು ಕೊಡದ ಕಂಪನಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್‌ ಕಂಪನಿಗಳು ವಿಷಕಾರಿ ರಾಸಾಯನಿಕ ತ್ಯಾಜ್ಯವನ್ನು ಹಳ್ಳಕೊಳ್ಳ-ನದಿಗಳಿಗೆ ಡ್ರೈನೇಜ್‌ ಮೂಲಕ ಕಳ್ಳತನದಿಂದ ಹೊರಬಿಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿಬರುತ್ತಿವೆ. ಈ ದೂರುಗಳ ಹಿನ್ನೆಲೆಯಲ್ಲಿ, ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ, ದೂರು ದಾಖಲಾಗಿದ್ದರೂ ಸಹ, ಕಂಪನಿಗಳು ಎಂದಿನಂತೆ ಮತ್ತೇ ಮತ್ತೇ ತ್ಯಾಜ್ಯವನ್ನು ಹರಿಬಿಡುತ್ತಿರುವುದು ಭಾರಿ ಆತಂಕ ಮೂಡಿಸಿದೆ.

ಕನ್ನಡಪ್ರಭ ಸರಣಿ ವರದಿ ಭಾಗ : 127

ಆನಂದ್‌ ಎಂ. ಸೌದಿ

ಕನ್ನಡಪ್ರಭ ವಾರ್ತೆ ಯಾದಗಿರಿ

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್‌ ಕಂಪನಿಗಳು ವಿಷಕಾರಿ ರಾಸಾಯನಿಕ ತ್ಯಾಜ್ಯವನ್ನು ಹಳ್ಳಕೊಳ್ಳ-ನದಿಗಳಿಗೆ ಡ್ರೈನೇಜ್‌ ಮೂಲಕ ಕಳ್ಳತನದಿಂದ ಹೊರಬಿಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿಬರುತ್ತಿವೆ. ಈ ದೂರುಗಳ ಹಿನ್ನೆಲೆಯಲ್ಲಿ, ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ, ದೂರು ದಾಖಲಾಗಿದ್ದರೂ ಸಹ, ಕಂಪನಿಗಳು ಎಂದಿನಂತೆ ಮತ್ತೇ ಮತ್ತೇ ತ್ಯಾಜ್ಯವನ್ನು ಹರಿಬಿಡುತ್ತಿರುವುದು ಭಾರಿ ಆತಂಕ ಮೂಡಿಸಿದೆ.

ಕಳೆದೊಂದು ವಾರದಿಂದ ಮಳೆಯ ಮಧ್ಯೆ ನಿರಂತರ ತ್ಯಾಜ್ಯವನ್ನು ಹಳ್ಳ-ನದಿಗೆ ಹರಿಸಲಾಗುತ್ತಿದೆ. ಅಲ್ಲಿನ ರೈತರ ಹೊಲಗದ್ದೆಗಳಲ್ಲಿ ಬೇಕಾಬಿಟ್ಟಿಯಾಗಿ ತ್ಯಾಜ್ಯ ವಿಲೇವಾರಿ ಮಾಡಿ, ಟ್ಯಾಂಕರುಗಳು ಪರಾರಿಯಾಗಿದ್ದವು. ಇದೆಲ್ಲದರ ಪರಿಣಾಮ, ವಿಷಕಾರಿ ತ್ಯಾಜ್ಯ ನೀರಿಗೆ ಬೆರೆತಿದ್ದರಿಂದ ಹಳ್ಳದಲ್ಲಿನ ಎರಡು ದಿನಗಳ ಹಿಂದೆ ಸಾವಿರಾರು ಮೀನು-ಜಲಚರಗಳ ಮಾರಣಹೋಮದ ದೃಶ್ಯಗಳು ಕಂಡುಬಂದಿದ್ದವು. ಜನ-ಜಾನುವಾರುಗಳು ಹಳ್ಳಕೊಳ್ಳ-ನದಿ ನೀರನ್ನು ಬಳಸದಂತೆ ಜನರಿಗೆ ಸ್ಥಳೀಯರು ಎಚ್ಚರಿಸಿದ್ದರು.

ಕೈಗಾರಿಕಾ ಪ್ರದೇಶದಲ್ಲಿ ಸವಲತ್ತುಗಳ ನೀಡುವುದರ ಜೊತೆಗೆ, ಕೆಮಿಕಲ್‌ ಕಂಪನಿಗಳು ಸರ್ಕಾರದ ಷರತ್ತುಗಳ ಪಾಲಿಸುವಂತೆ, ಎಲ್ಲೆಂದರೆಲ್ಲಿ ಬೇಕಾಬಿಟ್ಟಿಯಾಗಿ ಕೆಮಿಕಲ್‌ ತ್ಯಾಜ್ಯ ವಿಲೇವಾರಿ ಮಾಡದಂತೆ ಇತ್ತೀಚೆಗೆ ಸಭೆ ನಡೆಸಿದ್ದ ಜಿಲ್ಲಾಧಿಕಾರಿ ಹರ್ಷಲ್‌ ಭೋಯರ್‌, ಕಂಪನಿಗಳಿಗೆ ಎಚ್ಚರಿಕೆ ನೀಡಿದ್ದರು, ಸಹ ಜಿಲ್ಲಾಧಿಕಾರಿ ಆದೇಶಕ್ಕೂ ಕಿಮ್ಮತ್ತು ನೀಡದಂತೆ ವರ್ತಿಸುತ್ತಿರುವ ಕೆಮಿಕಲ್‌ ಕಂಪನಿಗಳು, ಶನಿವಾರದಿಂದ ಮಂಗಳವಾರ ಸಂಜೆವರೆಗೂ ಎಗ್ಗಿಲ್ಲದೆ ತ್ಯಾಜ್ಯ ಹರಿಬಿಡುತ್ತಿದ್ದಾರೆ. ಜಲಚರಗಳ ಸಾವಿನ ನಂತರ ಇದೀಗ ಜನರ ಜೀವವನ್ನೂ ಬಲಿ ಪಡೆಯಲಿದೆ ಎಂದು ಆತಂಕ ಮೂಡಿ ಬಂದಿದೆ.

------------

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ ಬಹುತೇಕ ರಾಸಾಯನಿಕ ಕಂಪನಿಗಳು ಮತ್ತು ತ್ಯಾಜ್ಯ ವಿಲೇವಾರಿ ಘಟಕಗಳು ರಾತ್ರಿ ಮತ್ತು ಮಳೆ ಬರುವ ಸಮಯದಲ್ಲಿ ಅಪಾಯಕಾರಿ ರಾಸಾಯನಿಕ ದ್ರವರೂಪದ ತ್ಯಾಜವನ್ನು ನೇರವಾಗಿ ಕಾಲುವೆಗಳ ಮೂಲಕ ಹಳ್ಳಗಳಿಗೆ ಬಿಡುತ್ತಿದ್ದಾರೆ. ಶನಿವಾರ ರಾತ್ರಿ ಹೆಚ್ಚು ಮಳೆ ಬರುವುದನ್ನು ಗಮನಿಸಿದ ತ್ಯಾಜ್ಯ ವಿಲೇವಾರಿ ಘಟಕದವರು ತ್ಯಾಜವನ್ನು ಬಿಟ್ಟಿದ್ದಾರೆ. ಭಾನುವಾರ ಬೆಳಗಾಗುವ ವೇಳೆಗೆ ನೂರಾರು ಮೀನುಗಳ ಸತ್ತಿವೆ. ಈ ಕುರಿತು ದೂರು ನೀಡಿದಾಗ ಸೋಮವಾರ ಸ್ಥಳಕ್ಕೆ ಆಗಮಿಸಿದ ವಿವಿಧ ಇಲಾಖೆಯ ಅಧಿಕಾರಿಗಳು, ಪೂರ್ವಾಗ್ರಹಪೀಡಿತರಂತೆ ವರ್ತಿಸಿದ್ದಾರೆ, ಈ ಮೀನುಗಳು ಕಂಪನಿಗಳ ತ್ಯಾಜ್ಯದಿಂದ ಸತ್ತಿಲ್ಲ ಎಂದು ಕೈಗಾರಿಕಾ ಪರವಾಗಿ ಬೇಜವಾಬ್ದಾರಿಯುತ ಉತ್ತರವನ್ನು ನೀಡಿದ್ದಾರೆ. ಇವರಿಂದಾಗಿ ಸಾರ್ವಜನಿಕರು ಅಧಿಕಾರಿಗಳ ಮೇಲಿರುವ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ.

: ಇಮ್ತಿಯಾಜ್, ಕಡೇಚೂರು.

-----------

ನಮ್ಮೂರಲ್ಲಿರುವ ಈ ರಾಸಾಯನಿಕ ಮತ್ತು ತ್ಯಾಜ್ಯ ವಿಲೇವಾರಿ ಕೈಗಾರಿಕೆಗಳು ಬಿಡುವ ದುರ್ನಾತದಿಂದ ನಾವು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಅದರಂತೆ, ಪ್ರತಿ ಮಳೆಗಾಲದ ವೇಳೆಯಲ್ಲಿ ಮೀನುಗಳು ಸೇರಿದಂತೆ ಜಲಚರಗಳ ಮಾರಣಹೋಮ ನಡೆಯುತ್ತಿದೆ. ಇದರ ಬಗ್ಗೆ ಈ ವರ್ಷ ಸ್ಥಳೀಯರು ದೂರು ನೀಡಿದಾಗ, ಸ್ಥಳಕ್ಕೆ ಆಗಮಿಸಿ ತನಿಖೆ ಮಾಡುವ ಅಧಿಕಾರಿಗಳು, ಸತ್ತ ಮೀನುಗಳು ಮತ್ತು ಇಲ್ಲಿನ ನೀರನ್ನು ಪರೀಕ್ಷೆಗೆ ಕೊಂಡೊಯ್ಯುವ ಮೊದಲೇ, ಇವು ಕಂಪನಿಗಳ ರಾಸಾಯನಿಕ ತ್ಯಾಜ್ಯದಿಂದ ಸತ್ತಿರುವುದಿಲ್ಲ ಎಂದು ಸಮಜಾಯಿಸಿ ನೀಡುತ್ತಿರುವುದು ನೋಡಿದರೆ, ಅಧಿಕಾರಿಗಳಿಂದ ಸತ್ಯಾಸತ್ಯತೆ ವರದಿ ಹೇಗೆ ನಿರೀಕ್ಷಿಸಬಹುದು? ದಯವಿಟ್ಟು ಜಿಲ್ಲಾಧಿಕಾರಿಗಳು ವಿಶೇಷ ಗಮನಹರಿಸಿ ಈ ಘಟನೆಯನ್ನು ಅತ್ಯಂತ ದಕ್ಷ ಅಧಿಕಾರಿಗಳನ್ನೊಳಗೊಂಡ ತಂಡವನ್ನು ನೇಮಿಸಿ ವಿಚಾರಣೆ ಮಾಡಬೇಕು.:

ನಾಗಪ್ಪ ಸಜ್ಜನ್, ಕಡೇಚೂರು.