ಅಮೇರಿಕಾ ಹಾಗೂ ಇಸ್ರೇಲ್‌ ಜಂಟಿ ದಾಳಿಗೆ ಹತನಾಗಿರುವ ಇರಾನ್‌ ಸರ್ವೋಚ್ಚ ನಾಯಕ ಆಯತೋಲ್ಲಾ ಖಮೇನಿ ಸಾವಿಗೆ ಕಲಬುರಗಿ ಪಾಲಿಕೆಯಲ್ಲಿ ಕಂಬನಿ ಮಿಡಿದು ಮೌನಾಚರಣೆ ಶ್ರದ್ದಾಂಜಲಿ ಸಲ್ಲಿಸಿರೋದನ್ನ ತೀವ್ರವಾಗಿ ಖಂಡಿಸಿರುವ ಶಿವಸೇನೆ ಪಕ್ಷದ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ಕಲಬುರಗಿಗೂ ಪಾಲಿಕೆಗೂ ಖಮೇನಿಗೂ ಅದೇನ್‌ ಸಂಬಂಧ? ಇಲ್ಯಾಕೆ ಇಂತಹ ಮೌನಾಚರಣೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಹಲ್ಗಾಮ್‌ ದಾಳಿಯನ್ನು ಖಂಡಿಸಲಿಲ್ಲ, ಕಂಬನಿ ಸುರಿಸಲಿಲ್ಲ, ತಮ್ಮ ಸಮುದಾಯದ ಯುವತಿಯ ಹತ್ಯೆಗೂ ಮರುಗಲಿಲ್ಲ, ದೂರದ ಇರಾನ್‌ ನಾಯಕ ಸತ್ತರೆ ಇವರಿಲ್ಲಿ ಕಂಬನಿ ಸುರಿಸುತ್ತಾರೆ. ವಾರ್ಡ್‌ 24ರ ಸದಸ್ಯೆ ಸಯೀದಾ ನೂರ್‌ ಫಾತೀಮಾಗೂ ಖಮೇನಿಗೂ ಅದೇನ್ ಸಂಬಂಧ? ಇವರೊಂದಿಗೆ ಬಿಜೆಪಿಯವರೂ ಕೂಡಾ ಸೇರಿಕೊಂಡು ಕಂಬನಿ ಮಿಡಿದು ಸಂತಾಪ ಸೂಚಿಸಿರೋದು ನೋಡಿದರೆ, ಪಾಲಿಕೆಯಲ್ಲಿ ವಿರೋಧ ಪಕ್ಷ ಅದೆಷ್ಟು ದುರ್ಬಲವಾಗಿದೆ ಅನ್ನೋದು ಗೊತ್ತಾಗುತ್ತದೆ. ಸರ್ಕಾರಿ ಕಚೇರಿಯಲ್ಲಿ ಖಮೇನಿಗೆ ಕಂಬನಿ ಮಿಡಿದವರ ವಿರುದ್ಧ ಕಾನೂನು ಕ್ರಮವಾಗಬೇಕು ಎಂದು ಕಿಡಿ ಕಾರಿದ್ದಾರೆ.

ಖಮೇನಿ ಸಾವಿಗೆ ಸದನದಲ್ಲಿ, ಸಂಸತ್‌ನಲ್ಲಿ ಸಂತಾಪ ಸೂಚಿಸಲಿಲ್ಲ. ಅಲ್ಲೆಲ್ಲಾ ಇಲ್ಲದ ಕಂಬನಿ ಮಿಡಿತ ಪಾಲಿಕೆಯಲ್ಯಾಕೆ? ಪಾಲಿಕೆ ಮೇಯರ್‌ ಪತಿ ರಾಜೀವ್‌ ಜಾನೆ ಇವರು ಕಾನೂನು ಉಲ್ಲಂಘಿಸಿ ಸಭೆಗಳಲ್ಲಿ ಕಾಣಿಸುತ್ತಿದ್ದಾರೆ. ಇವೆಲ್ಲ ನೋಡಿದರೆ ಜಿಲ್ಲಾ ಉಸ್ತುವಾರಿ ಸಚಿವರ ಕೃಪಾಕಟಾಕ್ಷದಿಂದಲೇ ಘಜನಿ ಘೋರಿ ಸಂತತಿ ಪಾಲಿಕೆಯಲ್ಲಿ ಪಳಿಯುಳಿಕೆ ರೂಪದಲ್ಲಿನ್ನೂ ಉಳಿದಂತಿದೆ ಎಂದು ಸಿದ್ದಲಿಂಗ ಸ್ವಾಮೀಜಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಖರ್ಗೆಯವರು ಮುಸ್ಲಿಂ ದೇಶಗಳಿಂದ ಭಾರತಕ್ಕೆ ಬರುವ ಪರಿಕರಗಳ ಬಗ್ಗೆ ಮಾತನಾಡುತ್ತ, ತೊಡುವ ಕೇಸರಿ ವಿದೇಶಗಳಿಂದ ಬುರುತ್ತದೆಂದು ಹೇಳಿದ್ದರು, ಇದು ಶುದ್ಧ ಸುಳ್ಳು. ನಮ್ಮ ಬಟ್ಟೆಗಳೇ ವಿದೇಶಗಳಿಗೆ ರಫ್ತಾಗೋದು ಅನ್ನೋದು ವಿಶ್ವದ 9ನೇ ನಾಯಕ ಅರಿಯಲಿ ಎಂದು ಟಾಂಗ್‌ ನೀಡಿದರು. ಕೇಸರಿಗೆ ಅಪಮಾನ ಮಾಡುತ್ತ ಹಿಂದುಗಳನ್ನು ಅಪಮಾನಿಸುತ್ತಿದ್ದಾರೆ, ಇದು ನಿಲ್ಲಬೇಕು, ಇವರು ಬೇಕಾದರೆ ಹೋಗಿ ಪಾಕಿಸ್ತಾನದಲ್ಲಿ ಬಾಷಣ ಮಾಡಲಿ, ನಮ್ಮದೇನು ಅಭ್ಯಂತರವಿಲ್ಲವೆಂದರು.