ರೈತರಿಂದ ಎಥೆನಾಲ್ ಖರೀದಿಸುವಂತೆ ಸರ್ಕಾರ ಆದೇಶಿಸಿದ್ದರೂ ಅದರ ಲಾಭ ರೈತರಿಗೆ ದೊರಕದಂತಾಗಿದೆ. ಈ ವರ್ಷ ಮೆಕ್ಕೆಜೋಳ ಬೆಳೆದ ರೈತರದ್ದು ನಾಯಿಪಾಡು ಎನ್ನುವಂತಾಗಿದೆ. ಲಕ್ಷ್ಮೇಶ್ವರ ತಾಲೂಕಿನ ಸಮಗ್ರ ರೈತ ಹೋರಾಟ ಸಮಿತಿ ಕಳೆದ ತಿಂಗಳು 18 ದಿನಗಳ ಕಾಲ ಅಹೋರಾತ್ರಿ ಧರಣಿ, ಉಪವಾಸ ಸತ್ಯಾಗ್ರಹ ನಡೆಸುವ ಮೂಲಕ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಸುವಲ್ಲಿ ಯಶಸ್ವಿಯಾಗಿತ್ತು.
ಲಕ್ಷ್ಮೇಶ್ವರ: ರೈತರಿಂದ ಎಥೆನಾಲ್ ಖರೀದಿಸುವಂತೆ ಸರ್ಕಾರ ಆದೇಶಿಸಿದ್ದರೂ ಅದರ ಲಾಭ ರೈತರಿಗೆ ದೊರಕದಂತಾಗಿದೆ.
ಈ ವರ್ಷ ಮೆಕ್ಕೆಜೋಳ ಬೆಳೆದ ರೈತರದ್ದು ನಾಯಿಪಾಡು ಎನ್ನುವಂತಾಗಿದೆ. ಲಕ್ಷ್ಮೇಶ್ವರ ತಾಲೂಕಿನ ಸಮಗ್ರ ರೈತ ಹೋರಾಟ ಸಮಿತಿ ಕಳೆದ ತಿಂಗಳು 18 ದಿನಗಳ ಕಾಲ ಅಹೋರಾತ್ರಿ ಧರಣಿ, ಉಪವಾಸ ಸತ್ಯಾಗ್ರಹ ನಡೆಸುವ ಮೂಲಕ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಸುವಲ್ಲಿ ಯಶಸ್ವಿಯಾಗಿತ್ತು.ಎಥೆನಾಲ್ ಕಂಪನಿಗಳು, ಕೆಎಂಎಫ್ ಹಾಗೂ ಕುಕ್ಕಟ, ಪಶು ಆಹಾರ ತಯಾರಕರು ರೈತರಿಂದ ಮೆಕ್ಕೆಜೋಳವನ್ನು ಬೆಂಬಲ ಬೆಲೆ ಅಡಿಯಲ್ಲಿ ಖರೀದಿಸಿ, ರೈತರ ನೆರವಿಗೆ ಧಾವಿಸಬೇಕು ಎಂದು ಸರ್ಕಾರ ಆದೇಶ ಮಾಡಿತ್ತು. ಆರಂಭದಲ್ಲಿ ಎಲ್ಲವೂ ಸರಿಯಾಗಿಯೇ ನಡೆದಿತ್ತು. ಆದರೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಎಥೆನಾಲ್ ಕಂಪನಿ ಸುಮಾರು 275 ರೈತರಿಂದ ಮೆಕ್ಕೆಜೋಳ ಖರೀದಿ ಮಾಡುವುದಾಗಿ ಹೆಸರು ನೋಂದಾಯಿಸಿಕೊಂಡಿತು. ಅದರಲ್ಲಿ 25 ರೈತರಿಂದ ಮಾತ್ರ ಮೆಕ್ಕೆಜೋಳ ಖರೀದಿಸಿದೆ. ಇನ್ನುಳಿದ ರೈತರಿಂದ ಮೆಕ್ಕೆಜೋಳ ಖರೀದಿಸಲು ಆಗುವುದಿಲ್ಲವೆಂದು ಹೇಳುತ್ತಿದೆ ಎಂದು ಟಿಎಪಿಎಂಎಸ್ ಅಧ್ಯಕ್ಷ ಸೋಮಣ್ಣ ಉಪನಾಳ ಹೇಳುತ್ತಾರೆ.
ಒಂದು ವಾರದಿಂದ ಮೆಕ್ಕೆಜೋಳವನ್ನು ಟ್ರ್ಯಾಕ್ಟರ್‌ನಲ್ಲಿ ಹೇರಿಕೊಂಡು ಸರತಿ ಸಾಲಿನಲ್ಲಿ ಹಚ್ಚಿದ್ದೇವೆ. ಈಗ ಎಥೆನಾಲ್ ಕಂಪನಿ ಖರೀದಿ ಬಂದ್ ಮಾಡಿದ್ದಾಗಿ ಹೇಳುತ್ತಿದೆ. ಹೆಸರು ನೋಂದಾಯಿಸಿಕೊಳ್ಳುವ ವೇಳೆ ರೈತರಿಗೆ ಯಾವುದೇ ಮಾಹಿತಿ ನೀಡದೆ ಹೀಗೆ ಏಕಾಏಕಿ ಖರೀದಿ ನಿಲ್ಲಿಸಿದ್ದರಿಂದ ರೈತರಿಗೆ ಏನು ಮಾಡಬೇಕು ಎಂದು ತೋಚದಂತಾಗಿದೆ. ಒಂದು ವಾರದಿಂದ ಮನೆ, ಮಕ್ಕಳನ್ನು ಬಿಟ್ಟು ಕೊರೆಯುವ ಚಳಿಯಲ್ಲಿ ಹಗಲು, ರಾತ್ರಿ ಎನ್ನದೆ ಮೆಕ್ಕೆಜೋಳ ಕಾಯುತ್ತ ಕುಳಿತಿದ್ದೇವೆ. ರೈತರ ಗೋಳನ್ನು ಯಾರೂ ಕೇಳುತ್ತಿಲ್ಲ ಎನ್ನುತ್ತಾರೆ ರಾಜು ಸಾಲಮನಿ, ಬಸವರಾಜ ಕೊರಕನವರ, ಬಸವರಾಜ ಕರೆಣ್ಣವರ, ರವಿ ಬೋರ್ಜಿ, ಶಿವಾನಂದ ಕರೆಣ್ಣವರ, ಲೊಕೇಶ ಕುರಿ.ರೈತರಿಗೆ ಅನ್ಯಾಯ: ರೈತಪರ ಹೋರಾಟ ವೇದಿಕೆಯ ಮುಂದಾಳತ್ವ ವಹಿಸಿದ್ದ ಮಂಜುನಾಥ ಮಾಗಡಿ ಹಾಗೂ ಚೆನ್ನಪ್ಪ ಷಣ್ಮುಖಿ ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ, ಮೆಕ್ಕೆಜೋಳ ಖರೀದಿಯಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯದ ಕುರಿತು ಕಿಡಿ ಕಾರಿದರು.
ಮಂಜುನಾಥ ಮಾಗಡಿ ಮಾತನಾಡಿ, ರಾಜ್ಯ ಸರ್ಕಾರ ಮೆಕ್ಕೆಜೋಳ ಖರೀದಿ ಮಾಡುವ ವಿಷಯದಲ್ಲಿ ಸಾಕಷ್ಟು ಹೋರಾಟ ಮಾಡಿದ್ದೇವೆ. ಈಗ ಸರ್ಕಾರದ ನಿರ್ದೇಶನದಂತೆ ಮೆಕ್ಕೆಜೋಳ ಖರೀದಿ ಮಾಡದೆ ಇಲ್ಲಸಲ್ಲದ ನೆಪ ಹೇಳುವ ಕಂಪನಿಗಳಿಗೆ ರೈತರು ತಮ್ಮ ಹೋರಾಟದ ಮೂಲಕ ಬಿಸಿ ಮುಟ್ಟಿಸುವ ಕಾರ್ಯ ಮಾಡಬೇಕಾಗುತ್ತದೆ. ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರರು ಮೆಕ್ಕೆಜೋಳ ಖರೀದಿ ಕೇಂದ್ರಗಳಿಗೆ ಭೇಟಿ ನೀಡಿ, ಅಲ್ಲಿನ ಅವ್ಯವಸ್ಥೆ ಸರಿಪಡಿಸಬೇಕು. ಎಥೆನಾಲ್ ಕಂಪನಿ ಖರೀದಿ ಮುಂದುವರಿಸುವಂತೆ ಸೂಚನೆ ನೀಡಬೇಕು. ಇಲ್ಲದೆ ಹೋದಲ್ಲಿ ರೈತರು ಮತ್ತೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.