ಮಕ್ಕಳಲ್ಲಿ ಹೋಲಿಕೆ ಸಲ್ಲದು: ಎಸ್ಪಿ

| Published : Dec 25 2023, 01:31 AM IST / Updated: Dec 25 2023, 01:32 AM IST

ಸಾರಾಂಶ

ತಂದೆ-ತಾಯಿಯನ್ನು, ಗುರು ಹಿರಿಯರನ್ನು ದೇವರಂತೆ ಕಾಣುವ ಶಿಕ್ಷಣ ನೀಡಬೇಕು. ಮಕ್ಕಳಲ್ಲಿ ದೈವ ಭಕ್ತಿ ಮೂಡಿಸುವಂತಹ ಶಿಕ್ಷಣ ಬೇಕಾಗಿದೆ. ಮಕ್ಕಳು ಉತ್ತಮ ಹಾದಿಯಲ್ಲಿ ಬೆಳೆದು ಸಾಮಾಜಿಕ ಕಳಕಳಿ ವ್ಯಕ್ತಪಡಿಸುವಂತಹ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತಾಗಬೇಕು

ಕೊಪ್ಪಳ: ಪ್ರತಿ ಮಗುವು ತನ್ನದೇ ಆದ ಬುದ್ಧಿಮತ್ತೆ ಹೊಂದಿರುತ್ತದೆ. ಹೀಗಾಗಿ ಮಗುವಿನ ಬೆಳವಣಿಗೆಗೆ ಸೂಕ್ತ ವಾತಾವರಣ ಕಲ್ಪಿಸಬೇಕೇ ವಿನಃ ಇತರೆ ಮಕ್ಕಳೊಂದಿಗೆ ಹೋಲಿಕೆ ಮಾಡುವುದು ಸಲ್ಲದು ಎಂದು ಎಸ್ಪಿ ಯಶೋದಾ ವಂಟಿಗೋಡಿ ಹೇಳಿದರು.

ನಗರದ ಎಸ್‌ಎಫ್‌ಎಸ್‌ನ ಐಸಿಎಸ್ಇ ಶಾಲೆಯ 19ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ಮಗುವಿನ ಬೆಳವಣಿಗೆ ಪಾಲಕರು, ಶಿಕ್ಷಕರು ಪ್ರೇರಕರಾಗಿರಬೇಕೇ ಹೊರತು ಮಗುವಿಗೆ ಹೊರೆಯಾಗುವಂತೆ ಆಗಬಾರದು. ಅದರಲ್ಲೂ ಪಾಲಕರು ತಾವೇನು ಆಗಿಲ್ಲವೂ ಅದನ್ನು ಮಕ್ಕಳ ಮೂಲಕ ಮಾಡಿಸುವ ಪ್ರಯತ್ನ ಮಾಡುತ್ತಾರೆ. ಇದು ತಪ್ಪು. ಮಗುವಿನ ಬೆಳವಣಿಗೆ ಮತ್ತು ಸದಾಶಯಕ್ಕೆ ತಕ್ಕಂತೆ ಇರಬೇಕು ಎಂದರು.

ರೆ.ಫಾ. ಆರೋಕ್ಯನಾಥನ್ ಮಾತನಾಡಿ, ಪ್ರಸಕ್ತ ಸಮಾಜದಲ್ಲಿನ ಜನರ ನಡುವೆ ಸಾಮಾಜಿಕ ಕಳಕಳಿ ಕೊರತೆ ಕಾಡುತ್ತಿದೆ. ಶಾಲೆಯಲ್ಲಿ ಮಕ್ಕಳನ್ನು ದೊಡ್ಡ ಮಟ್ಟದ ಜ್ಞಾನವಂತರನ್ನಾಗಿ ಬೆಳೆಸುವುದಷ್ಟೆ ಕೆಲಸವಾಗದೆ, ಅವರನ್ನು ಹೃದಯವಂತರನ್ನಾಗಿ ಬೆಳೆಸುವುದು ಪ್ರಸ್ತುತ ಸನ್ನಿವೇಶದಲ್ಲಿ ಬಹಳ ಮುಖ್ಯವಾಗಿದೆ ಎಂದರು.

ತಂದೆ-ತಾಯಿಯನ್ನು, ಗುರು ಹಿರಿಯರನ್ನು ದೇವರಂತೆ ಕಾಣುವ ಶಿಕ್ಷಣ ನೀಡಬೇಕು. ಮಕ್ಕಳಲ್ಲಿ ದೈವ ಭಕ್ತಿ ಮೂಡಿಸುವಂತಹ ಶಿಕ್ಷಣ ಬೇಕಾಗಿದೆ. ಮಕ್ಕಳು ಉತ್ತಮ ಹಾದಿಯಲ್ಲಿ ಬೆಳೆದು ಸಾಮಾಜಿಕ ಕಳಕಳಿ ವ್ಯಕ್ತಪಡಿಸುವಂತಹ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಆರ್.ಸಂತೋಷಕುಮಾರ, ಶಾಲೆಯ ಕಳೆದ 19 ವರ್ಷಗಳ ಸಾಧನೆಯನ್ನು ಶ್ಲಾಘಿಸಿದರು. ಶಾಲೆಯ ಪ್ರಾಂಶುಪಾಲ ರೆ.ಫಾ. ಜಬಮಲೈ ಮಾತನಾಡಿದರು.

ಮ್ಯಾನೇಜರ್ ಮ್ಯಾಥ್ಯೂ ಮಾಮ್ಲಾ, ಹೈಸ್ಕೂಲ್ ಪ್ರಾಂಶುಪಾಲ ರೆ.ಫಾ. ಜೋಜೋ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಲಾ ಮಕ್ಕಳು ಕ್ರಿಸ್ಮಸ್ ಹಬ್ಬದ ರೂಪಕವನ್ನು, ಕರಾಟೆ, ಸ್ಕೇಟಿಂಗ್, ಭರತನಾಟ್ಯ ಮತ್ತು ಮುಂತಾದ ಮನರಂಜನಾ ವಿವಿಧ ನೃತ್ಯಗಳನ್ನು ಪ್ರಸ್ತುತ ಪಡಿಸಿದರು. ಕಳೆದ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪಾರಿತೋಷಕ ನೀಡಿ ಗೌರವಿಸಲಾಯಿತು.