ಏಳು ತಿಂಗಳ ಆಡಳಿತ ತುಲನೆ ಮಾಡಿ ನೋಡಿ: ಸಚಿವ ಖರ್ಗೆ ಸವಾಲು

| Published : Feb 11 2024, 01:51 AM IST

ಏಳು ತಿಂಗಳ ಆಡಳಿತ ತುಲನೆ ಮಾಡಿ ನೋಡಿ: ಸಚಿವ ಖರ್ಗೆ ಸವಾಲು
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದಿನ ಬಿಜೆಪಿ ಸರಕಾರದ ಸಾಧನೆ ಹಾಗೂ ಕಳೆದ ಏಳು ತಿಂಗಳಲ್ಲಿ ಕಾಂಗ್ರೆಸ್ ಸರಕಾರ ಮಾಡಿರುವ ಸಾಧನೆಗೂ ಎಷ್ಟು ವ್ಯತ್ಯಾಸವಿದೆ ಎಂಬುದನ್ನು ಮಾನದಂಡ ಇಟ್ಟುಕೊಂಡು ತುಲನೆ ಮಾಡಿ ನೋಡಬೇಕು: ಬಿಜೆಪಿಗೆ ಸಚಿವ ಪ್ರಿಯಾಂಕ್ ಖರ್ಗೆ ಸವಾಲು

ಕನ್ನಡಪ್ರಭ ವಾರ್ತೆ ಕಲಬುರಗಿ

ಈ ಹಿಂದಿನ ಬಿಜೆಪಿ ಸರಕಾರದ ಸಾಧನೆ ಹಾಗೂ ಕಳೆದ ಏಳು ತಿಂಗಳಲ್ಲಿ ಕಾಂಗ್ರೆಸ್ ಸರಕಾರ ಮಾಡಿರುವ ಸಾಧನೆಗೂ ಎಷ್ಟು ವ್ಯತ್ಯಾಸವಿದೆ ಎಂಬುದನ್ನು ಮಾನದಂಡ ಇಟ್ಟುಕೊಂಡು ತುಲನೆ ಮಾಡಿ ನೋಡಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ-ಬಿಟಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಕರ್ನಾಟಕ ದರ್ಶನ ಕಾರ್ಯಕ್ರಮದ ಅಡಿಯಲ್ಲಿ ಎಂಟನೇ ತರಗತಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿರುವ ಪ್ರವಾಸಕ್ಕೆ ಹಸಿರು ನಿಶಾನೆ ತೋರಿಸಿದ ಬಳಿಕ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಈಗಾಗಲೇ ಮುಖ್ಯಮಂತ್ರಿಗಳು ಎರಡು ಬಾರಿ ಜನಸ್ಪಂದನ ಕಾರ್ಯಕ್ರಮ ನಡೆಸಿದ್ದಾಗಿದೆ. ಆದರೆ, ಕಲಬುರಗಿ ಜಿಲ್ಲೆಯಲ್ಲಿ ಈಗಾಗಲೇ ಮೂರು ಬಾರಿ ಜನಸ್ಪಂದನ ಸಭೆ ಮುಂದೂಡಿರುವ ಕುರಿತು ಸುದ್ದಿಗಾರರು ಗಮನ ಸೆಳೆದಾಗ ಈ ಕುರಿತು ಪ್ರತಿಕ್ರಿಯಿಸಿದ ಅವರು, ಎರಡನೇ ಜಿಲ್ಲಾ ಮಟ್ಟದ ಜನಸ್ಪಂದನ ಕಾರ್ಯಕ್ರಮ ಆಳಂದ ಪಟ್ಟಣದಲ್ಲಿ ನಡೆಯಬೇಕಿತ್ತು.

ಸ್ಥಳೀಯ ಸಂದಲ್ ಮತ್ತು ಜಾತ್ರೆಯ ಕಾರಣಕ್ಕೆ ಮುಂದೂಡಲಾಯಿತು. ಬಳಿಕ ಕಲಬುರಗಿ ಉತ್ತರ ಕ್ಷೇತ್ರ ವ್ಯಾಪ್ತಿಯಲ್ಲಿ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗ ತುರ್ತಾಗಿ ಮುಖ್ಯಮಂತ್ರಿಗಳು ವಕ್ಫ್ ಮಂಡಳಿ ಸಭೆ ಕರೆದಿದ್ದರಿಂದ ಆ ಕ್ಷೇತ್ರದ ಶಾಸಕರು ಸಭೆಯಲ್ಲಿ ಪಾಲ್ಗೊಳ್ಳುವ ಅನಿವಾರ್ಯದಿಂದಾಗಿ ಮುಂದೂಡಬೇಕಾಯಿತು. ಪ್ರಧಾನ ಮಂತ್ರಿಗಳ ಕಾರ್ಯಕ್ರಮದ ಪ್ರಯುಕ್ತ ಮೂರನೇ ಬಾರಿ ಜನಸ್ಪಂದನ ಕಾರ್ಯಕ್ರಮ ಮುಂದೂಡಲಾಗಿದೆಯೇ ಹೊರತು; ಇದಕ್ಕೆ ಬೇರೆ ಯಾವುದೇ ಅರ್ಥ ಕಲ್ಪಿಸಬೇಕಿಲ್ಲ ಎಂದರು.

ಈಗಾಗಲೇ ಕಲಬುರಗಿ ಜಿಲ್ಲೆಯ ಜನರ ಸಮಸ್ಯೆಗಳಿಗೆ ಸ್ಪಂದಿಸಲು ‘ಕಲಬುರಗಿ ಕನೆಕ್ಟ್’ ಆ್ಯಪ್ ಆಧರಿತ ವೇದಿಕೆ ಕಾರ್ಯನಿರ್ವಹಿಸುತ್ತಿದೆ. ಜೊತೆಗೆ, ಶಾಸಕರು ಹಾಗೂ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತಿದ್ದಾರೆ. ಈ ಹಿಂದೆ ಅಧಿಕಾರಿಗಳ ಸಭೆಗಳೇ ನಡೆಯುತ್ತಿರಲಿಲ್ಲ. ಈಗ ಮೇಲಿಂದ ಮೇಲೆ ಅಧಿಕಾರಿಗಳ ಸಭೆ ನಡೆಸಲಾಗುತ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕಂದಾಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಗಳ ಸಭೆಗಳನ್ನು ಮೇಲಿಂದ ಮೇಲೆ ನಡೆಸಲಾಗುತ್ತಿದೆ. ಜೊತೆಗೆ, ಖುದ್ದು ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತಿ ಸಿಇಒಗಳ ಮುಖಾಮುಖಿ ಸಭೆ ನಡೆಸುತ್ತಿದ್ದಾರೆ. ಕೆಲಸಗಳ ವೇಗದ ವಿಷಯಕ್ಕೆ ಬಂದಾಗ ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳು ಈಗ ಟಾಪ್-10 ಸ್ಥಾನಗಳ ಪೈಕಿ ಮೇಲಿನ ಸ್ಥಾನದಲ್ಲಿವೆ ಎಂದು ವಿವರಿಸಿದರು.

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಭಾರಿ ಪ್ರಮಾಣದ ಗಾಂಜಾ ವಶಪಡಿಸಿಕೊಂಡ ಪ್ರಕರಣದ ಕುರಿತು ಪ್ರಸ್ತಾಪಿಸಿದ ಅವರು, ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಗಾಂಜಾ, ಮಟ್ಕಾ, ಡ್ರಗ್ಸ್ ಮತ್ತು ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲಾಗಿದೆ. ಈ ನಿಟ್ಟಿನಲ್ಲಿ ನಿರ್ದಾಕ್ಷಿಣ್ಯ ಕ್ರಮಕ್ಕೆ ಅಗತ್ಯ ನಿರ್ದೇಶನ ನೀಡಲಾಗಿದೆ.

ಆಳಂದ ಪಟ್ಟಣದ ಮಸೀದಿಯೊಂದರಲ್ಲಿ ಶಿವಲಿಂಗ ಇದೆ ಎನ್ನುವ ವದಂತಿ ಆಧರಿಸಿ ಕೂಡಲೇ ಉತ್ಖನನ ನಡೆಸಬೇಕೆಂದು ಒತ್ತಾಯಿಸಿ ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಆಳಂದ ಪುರಸಭೆಗೆ ಪ್ರಸ್ತಾವನೆ ಸಲ್ಲಿಸಿರುವ ಕುರಿತು ಗಮನ ಸೆಳೆದಾಗ, ಕಾನೂನಾತ್ಮಕವಾಗಿ ಪ್ರಸ್ತಾವನೆ ಸಲ್ಲಿಸಿದ್ದರೆ ಕಾನೂನು ತನ್ನ ಕೆಲಸ ಮಾಡುತ್ತದೆ.

ಸಂವಿಧಾನಾತ್ಮಕವಾಗಿ ಏನು ಮಾಡಬೇಕೋ ಅದನ್ನು ಮಾಡಲಾಗುತ್ತದೆಯೇ ಹೊರತು; ಇವರು ಹೇಳಿದ ಹಾಗೆ ಅಲ್ಲಿ ಕೆದರಬೇಕು, ಇಲ್ಲಿ ಕೆದರಬೇಕು ಎಂದರೆ ಆಗೋದಿಲ್ಲ. ಈಗ ರಾಜ್ಯದಲ್ಲಿ ಸಂವಿಧಾನಬದ್ಧ ಸರಕಾರ ಆಡಳಿತ ನಡೆಸುತ್ತಿದೆ. ಮನಸ್ಸಿಗೆ ಬಂದಂತೆ ಮಾಡೋದು ಆಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

ಯೋಗ್ಯರಿಗೆ ಭಾರತರತ್ನ: ಮಾಜಿ ಪ್ರಧಾನಿಗಳಾದ ಪಿ.ವಿ. ನರಸಿಂಹರಾವ್, ಚೌಧರಿ ಚರಣಸಿಂಗ್ ಹಾಗೂ ಹಸಿರುಕ್ರಾಂತಿಯ ಹರಿಕಾರ ಎಂ.ಎಸ್. ಸ್ವಾಮಿನಾಥನ್ ಅವರಿಗೆ ಕೇಂದ್ರ ಸರಕಾರ ಭಾರತರತ್ನ ಘೋಷಿಸಿರುವುದನ್ನು ಪ್ರಿಯಾಂಕ್ ಖರ್ಗೆ ಸ್ವಾಗತಿಸಿದರು.

ಈ ಹಿಂದೆ ಜವಾಹರಲಾಲ್ ನೆಹರೂ ಪ್ರಧಾನಿ ಆಗಿದ್ದಾಗ ಅವರಿಗೇ ಭಾರತರತ್ನ ಘೋಷಿಸಲಾಗಿತ್ತು ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ತಮಗೆ ಭಾರತರತ್ನ ಘೋಷಿಸಲಾಗುತ್ತಿದೆ ಎಂಬುದು ಖುದ್ದು ನೆಹರೂ ಅವರಿಗೂ ಗೊತ್ತಿರಲಿಲ್ಲ. ಅಷ್ಟರಮಟ್ಟಿಗೆ ಭಾರತರತ್ನ ಯಾರಿಗೆ ನೀಡಬೇಕು ಎಂಬುದು ಕೇಂದ್ರ ಸರಕಾರದ ವಿವೇಚನಾಶಕ್ತಿಗೆ ಸಂಬಂಧಿಸಿದ್ದಾಗಿರುತ್ತದೆ. ಈ ಬಾರಿ ಪಿ.ವಿ. ನರಸಿಂಹರಾವ್, ಚೌಧರಿ ಚರಣಸಿಂಗ್ ಹಾಗೂ ಎಂ.ಎಸ್. ಸ್ವಾಮಿನಾಥನ್ ಅವರಿಗೆ ಭಾರತರತ್ನ ನೀಡಲಾಗಿದೆ. ಮೂವರೂ ಈ ಪ್ರಶಸ್ತಿಗೆ ಯೋಗ್ಯರಿದ್ದಾರೆ ಎಂದರು.