ಸಾರಾಂಶ
ಮಯೂರ್ ಹೆಗಡೆ
ಬೆಂಗಳೂರು : ಕಳೆದ ವರ್ಷ ಹಬ್ಬಕ್ಕೆ ಹೋಲಿಸಿದರೆ ಈ ಬಾರಿ ಗೌರಿ-ಗಣೇಶ ಮೂರ್ತಿಗಳ ಬೆಲೆ ಶೇಕಡ 10-15ರಷ್ಟು ಹೆಚ್ಚಳವಾಗಿದೆ. ಕುಸುರಿ ಕಾರ್ಯದ ಪರಿಕರ, ಬಣ್ಣ, ಸಾಗಾಟ ವೆಚ್ಚ ಹೆಚ್ಚಳದಿಂದ ದರ ಏರಿಕೆಯಾಗಿದ್ದರೂ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿದೆ.
ಚತುರ್ಥಿ ಹಬ್ಬಕ್ಕೆ ಆರು ದಿನ ಬಾಕಿ ಇರುವಂತೆ ಮನೆಗಳಲ್ಲಿ ಗಣೇಶನನ್ನು ಪೂಜಿಸುವವರು, ಸಾರ್ವಜನಿಕ ಮಂಡಳಿಗಳು ಗಣಪನ ಮೂರ್ತಿಗಳನ್ನು ಮುಂಗಡವಾಗಿ ಕಾಯ್ದಿರಿಸಿದ್ದಾರೆ. ಸೋಮವಾರ ಅಮವಾಸೆ ಹಿನ್ನೆಲೆಯಲ್ಲಿ ಜನ ಖರೀದಿ ಮಾಡಿಲ್ಲ. ಆದರೆ, ಮುಂದಿನ ಮೂರು ದಿನ ಹೆಚ್ಚಿನವರು ಗಣೇಶನನ್ನು ಕಾಯ್ದಿರಿಸಿ ಹಬ್ಬದ ಹಿಂದಿನ ದಿನ, ಚೌತಿಯ ಬೆಳಗ್ಗೆ ಕೊಂಡೊಯ್ಯಲಿದ್ದಾರೆ.
ನಗರದ ವಿ.ವಿ.ಪುರ, ಮಲ್ಲೇಶ್ವರ, ಜೆ.ಪಿ.ನಗರ, ಯಶವಂತಪುರ, ಚಾಮರಾಜನಗರ, ಜಯನಗರ, ಶ್ರೀನಗರ, ಕೋರಮಂಗಲ, ವೈಟ್‌ಫೀಲ್ಡ್ ಸೇರಿ ಎಲ್ಲೆಡೆ ಮಾರುಕಟ್ಟೆಗಳಲ್ಲಿ ಗಣೇಶ ಮೂರ್ತಿಗಳ ವ್ಯಾಪಾರ ಜೋರಾಗಿದೆ. ಮಣ್ಣಿನ ಗಣಪತಿಗಳ ಜೊತೆಗೆ ನಿರ್ಬಂಧಿತ ಪಿಒಪಿ ಮೂರ್ತಿಗಳೂ ಮಳಿಗೆಗಳಲ್ಲಿವೆ. ಬೆಂಗಳೂರು ಗ್ರಾಮಾಂತರ, ಕೋಲಾರ ಸೇರಿ ಸುತ್ತಮುತ್ತಲ ಜಿಲ್ಲೆಗಳಿಂದ ಬಂದ ಮೂರ್ತಿಗಳು ಮಾರುಕಟ್ಟೆಯಲ್ಲಿವೆ.
ನಗರದಲ್ಲಿನ ಉತ್ತರ ಭಾರತೀಯರು ಹೆಚ್ಚಾಗಿ ಮಹಾರಾಷ್ಟ್ರ ಶೈಲಿಯ ಗಣೇಶನನ್ನು ಹೆಚ್ಚಾಗಿ ಕೊಂಡೊಯ್ಯುತ್ತಾರೆ. ಹೀಗಾಗಿ ಮುಂಬೈ, ಪುಣೆ, ಕೊಲ್ಹಾಪುರದಿಂದ ಮೂರ್ತಿಗಳನ್ನು ತರಿಸಿ ಮಾರಲಾಗುತ್ತಿದೆ. ದಗಡು ಸೇಟ್, ದರ್ಬಾರ್ ಗಣಪ ಮಾದರಿಯ ಗಣೇಶ ಮೂರ್ತಿಗಳಿಗೂ ಹೆಚ್ಚಿನ ಬೇಡಿಕೆಯಿದೆ, ಇವು ಹೆಚ್ಚು ನುಣುಪಾಗಿ ಕಾಣುವುದರಿಂದ ಸ್ಥಳೀಯರೂ ಒಯ್ಯುತ್ತಾರೆ ಎಂದು ವ್ಯಾಪಾರಸ್ಥರು ಹೇಳಿದರು.
ಮಾರುತಿ ಮೇಲೆ ಕುಳಿತಿರುವ ವಿಘ್ನೇಶ್ವರ, ಬೃಂದಾವನ ಗಣಪ, ಶೇಷಶಯನ, ಪಂಚಮುಖಿ, ನಟರಾಜ, ಕಾಳಿಂಗ ಮರ್ಧನ, ಅರ್ಧನಾರೀಶ್ವರ, ಗಜಗಣಪ, ಸಿಂಹಾಸನದ ಮೇಲೆ ಆಸೀನ ಗಣಪ, ಕಮಲದ ಹೂವಿನ ಮೇಲೆ ಕುಳಿತ ಗಣಪ, ನಟರಾಜ ಗಣಪ, ವೀರಾಂಜನೇಯ ಗಣಪ, ಏಕದಂತ ಗಣಪ, ನವಿಲ ಮೇಲೆ ಕುಳಿತಿರುವ ಗಣಪ, ಇಲಿ ಮೇಲೆ ಸವಾರಿ ಹೊರಟ ಡೊಳ್ಳು ಹೊಟ್ಟೆ ಗಣಪ ಹೀಗೆ ವಿಭಿನ್ನ ಶೈಲಿಯ ಗಣೇಶ ಮೂರ್ತಿಗಳ ಮಾರುಕಟ್ಟೆಗೆ ಬಂದಿವೆ.
ಕನಿಷ್ಠ ಹದಿನೈದು ಇಂಚಿನ ಗಣಪತಿಗೆ ₹75 - ₹150 ಇದ್ದರೆ, ಒಂದರಿಂದ ಎರಡು ಅಡಿ ಮೂರ್ತಿಗೆ ₹1200 - 2000 ವರೆಗೆ, 4-5 ಅಡಿ ಗಣಪತಿಗೆ 6ರಿಂದ 8 ಸಾವಿರ ದರವಿದೆ. ಆರೇಳು ಅಡಿ ಎತ್ತರದ ಮೂರ್ತಿಗಳಿಗೆ ₹15 - ₹22 ಸಾವಿರ ದರ ನಿಗದಿಯಾಗಿದೆ. ಇದರಲ್ಲೂ ಕುಸುರಿ ಕೆಲಸ ಹೆಚ್ಚಿರುವ ಅಂದರೆ, ಮುಕುಟ, ಜಾಜುಬಂದಿ ಹಾರಗಳಿಗೆ ಮುತ್ತು ಸೇರಿ ಅಲಂಕಾರಿಕ ವಸ್ತುಗಳನ್ನು ಬಳಸಿದ್ದರೆ ಬೆಲೆ ಅಧಿಕವಾಗಿದೆ. ಇನ್ನು ಗೌರಿ ಮೂರ್ತಿಗೆ ₹500 - ₹3500 ವರೆಗೆ ಬೆಲೆಯಿದೆ.ಕಳೆದ ವರ್ಷಕ್ಕಿಂತ ಹೆಚ್ಚು ದರ
ಕಳೆದ ವರ್ಷ ₹1000 ಇದ್ದ ಗಣಪತಿ ಈ ವರ್ಷ ₹1200 ವರೆಗೆ ಬೆಲೆ ಹೆಚ್ಚಳವಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಸಾಗಾಟ ವೆಚ್ಚ ಅಧಿಕವಾಗಿದೆ. ಕುಸುರಿ ಕೆಲಸಗಾರರು ಕಡಿಮೆಯಾಗಿದ್ದು, ಅವರ ಸಂಬಳ ಹೆಚ್ಚಾಗಿದೆ. ಅಲಂಕಾರಿಕ ವಸ್ತುಗಳು, ಬಣ್ಣಗಳ ದರವೂ ಹೆಚ್ಚಾಗಿದೆ. ಇವೆಲ್ಲ ಕಾರಣದಿಂದ ಮೂರ್ತಿಯ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.10-15ರಷ್ಟು ಏರಿಕೆಯಾಗಿದೆ ಎಂದು ವ್ಯಾಪಾರಿಗಳು ಹೇಳಿದರು.
ಮಲ್ಲೇಶ್ವರದ ಕಮಲ ಐಡಲ್‌ನ ವ್ಯಾಪಾರಸ್ಥರು ಮಾತನಾಡಿ, ತಾತನ ಕಾಲದಿಂದಲೂ ಗಣೇಶ ಮೂರ್ತಿ ಮಾರುತ್ತಿದ್ದೇವೆ. ಮೊದಲು ಬೆಂಗಳೂರಿನ ಟ್ಯಾನರಿ ರಸ್ತೆ, ಪಾಟರಿ ಟೌನ್‌ನಲ್ಲಿ ಹೆಚ್ಚಾಗಿ ಗಣಪತಿ ಮೂರ್ತಿಗಳು ಸಿದ್ಧಗೊಳ್ಳುತ್ತಿದ್ದವು. ಆದರೆ, ಈಗ ಶೆಡ್‌ಗಳ ಬಾಡಿಗೆ ಹೆಚ್ಚಾಗಿದೆ. ಹೀಗಾಗಿ ಹೊರವಲಯದಲ್ಲಿ ಮೂರ್ತಿ ತಯಾರಿಕೆಯಾಗಿ ಬರುತ್ತಿದೆ. ಇದರಿಂದಲೂ ದರ ಏರಿಕೆಯಾಗಿದೆ ಎಂದರು.
ಶೇಷಾದ್ರಿಪುರದ ಗಣಪತಿ ಮೂರ್ತಿ ವರ್ತಕ ವಿ.ಬಿ.ಬಾಬು ಮಾತನಾಡಿ, ಉತ್ತರ ಭಾರತೀಯ ಶೈಲಿಯ ಗಣೇಶ ಮೂರ್ತಿಗಳಿಗೆ ಹಾಗೂ ಮಣ್ಣಿನ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ದರ ಹೆಚ್ಚಳದ ನಡುವೆ ವ್ಯಾಪಾರ ಉತ್ತಮವಾಗಿದೆ ಎಂದು ತಿಳಿಸಿದರು.