ವಿಮಾನ ನಿಲ್ದಾಣಕ್ಕೆ ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡಿ

| Published : Feb 02 2025, 01:01 AM IST

ವಿಮಾನ ನಿಲ್ದಾಣಕ್ಕೆ ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡಿ
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನ ನಗರದ ಹೊರವಲಯದ ಬೂವನಹಳ್ಳಿ ವಿಮಾನ ನಿಲ್ದಾಣಕ್ಕೆ ಭೂಮಿ ಕಳೆದುಕೊಂಡ ಸುತ್ತಮುತ್ತಲಿನ ಗ್ರಾಮಗಳಿಗೆ ಸಂಪರ್ಕ ರಸ್ತೆ ಮತ್ತು ಭೂಮಿ ಕಳೆದುಕೊಂಡ ಪ್ರತಿ ಕುಟುಂಬಕ್ಕೆ ಒಂದು ಉದ್ಯೋಗ ಹಾಗೂ ಭೂಮಿ ದುರಸ್ತಿ, ಉಳಿಕೆ ಭೂಮಿಗೆ ಸೂಕ್ತ ಪರಿಹಾರ ನೀಡಲು ಒತ್ತಾಯಿಸಿ ಬೂವನಹಳ್ಳಿ ಗ್ರಾಮಸ್ಥರು ಶನಿವಾರ ಡೀಸಿ ಕಚೇರಿ ಆವರಣದಲ್ಲಿ ವಿಮಾನ ನಿಲ್ದಾಣ ಭೂಸಂತ್ರಸ್ತರ ಹೋರಾಟ ಸಮಿತಿ ಮತ್ತು ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಹೊರವಲಯದ ಬೂವನಹಳ್ಳಿ ವಿಮಾನ ನಿಲ್ದಾಣಕ್ಕೆ ಭೂಮಿ ಕಳೆದುಕೊಂಡ ಸುತ್ತಮುತ್ತಲಿನ ಗ್ರಾಮಗಳಿಗೆ ಸಂಪರ್ಕ ರಸ್ತೆ ಮತ್ತು ಭೂಮಿ ಕಳೆದುಕೊಂಡ ಪ್ರತಿ ಕುಟುಂಬಕ್ಕೆ ಒಂದು ಉದ್ಯೋಗ ಹಾಗೂ ಭೂಮಿ ದುರಸ್ತಿ, ಉಳಿಕೆ ಭೂಮಿಗೆ ಸೂಕ್ತ ಪರಿಹಾರ ನೀಡಲು ಒತ್ತಾಯಿಸಿ ಬೂವನಹಳ್ಳಿ ಗ್ರಾಮಸ್ಥರು ಶನಿವಾರ ಡೀಸಿ ಕಚೇರಿ ಆವರಣದಲ್ಲಿ ವಿಮಾನ ನಿಲ್ದಾಣ ಭೂಸಂತ್ರಸ್ತರ ಹೋರಾಟ ಸಮಿತಿ ಮತ್ತು ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.ಕೆ.ಪಿ.ಆರ್.ಎಸ್. ಜಿಲ್ಲಾಧ್ಯಕ್ಷ ಎಚ್.ಆರ್. ನವೀನ್ ಕುಮಾರ್ ಮತ್ತು ಗ್ರಾಮಸ್ಥ ಬೊಮ್ಮೇಗೌಡ ಮಾತನಾಡಿ, ಹಾಸನದ ಬೂವನಹಳ್ಳಿ ಪಕ್ಕದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಬೂವನಹಳ್ಳಿ, ಲಕ್ಷ್ಮೀಸಾಗರ, ದ್ಯಾವಲಾಪುರ, ತೆಂಡಿಹಳ್ಳಿ ಮತ್ತು ಜಿ.ಮೈಲನಹಳ್ಳಿ ಗ್ರಾಮದ ರೈತರ, ನೂರಾರು ಎಕರೆ ಕೃಷಿಗೆ ಯೋಗ್ಯವಾಗಿರುವ ಭೂಮಿಯನ್ನು ಕೆಐಡಿಬಿ ಭೂಸ್ವಾಧೀನ ಮಾಡಿಕೊಂಡಿದೆ. ಈ ಹಿಂದೆ ಹಲವರಿಗೆ ಪರಿಹಾರ ನೀಡಲಾಗಿದೆ. ಲಕ್ಷ್ಮೀಸಾಗರ ಸೇರಿದಂತೆ ಇನ್ನೂ ಹಲವು ಗ್ರಾಮದ ರೈತರ ಭೂಮಿಗೆ ಪರಿಹಾರವನ್ನು ನೀಡದೇ ಭೂಮಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವುದರಿಂದ ರೈತರು ಮತ್ತು ಅಧಿಕಾರಿಗಳ ನಡುವೆ ಸಂಘರ್ಷ ಏರ್ಪಟ್ಟಿದೆ ಎಂದರು.

೧೯೯೭ರಲ್ಲಿ ಮೊದಲ ಹಂತದ ಭೂಸ್ವಾಧೀನ ಪ್ರಕ್ರಿಯೆ ನಡೆದಾಗಲೇ ವಿಮಾನ ನಿಲ್ದಾಣದ ಸುತ್ತಲೂ ಬರುವ ಗ್ರಾಮಗಳಿಗೆ ಮತ್ತು ಕೃಷಿ ಭೂಮಿಗೆ ಅನುಕೂಲವಾಗುವಂತೆ ರಸ್ತೆ ನಿರ್ಮಾಣ ಮಾಡಿಕೊಡುವುದಾಗಿ ಜಿಲ್ಲಾಡಳಿತವು ಭರವಸೆ ನೀಡಿತ್ತು. ಆದರೆ ಈಗ ರೈತರಿಗೆ ಅನುಕೂಲವಾಗುವಂತೆ ರಸ್ತೆ ನಿರ್ಮಿಸದೆಯೇ ಸುತ್ತಲೂ ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತಿದೆ. ಒಮ್ಮೆ ಕಾಂಪೌಂಡ್ ನಿರ್ಮಾಣ ಕಾರ್ಯ ಪೂರ್ಣಗೊಂಡರೆ ಸುತ್ತಮುತ್ತಲಿನ ಗ್ರಾಮಗಳಿಗೆ ರಸ್ತೆ ಸಂಪರ್ಕ ಪೂರ್ಣವಾಗಿ ಕಡಿತಗೊಳ್ಳುತ್ತದೆ. ಯಾವುದೇ ರಸ್ತೆಯಿಲ್ಲದೆ ಓಡಾಡಲು ವಿಪರೀತ ಸಮಸ್ಯೆ ಅನುಭವಿಸಬೇಕಾಗುತ್ತದೆ. ಬೂವನಹಳ್ಳಿ, ಲಕ್ಷ್ಮೀಸಾಗರ, ದ್ಯಾವಲಾಪುರ, ತೆಂಡಿಹಳ್ಳಿ, ಜಿ.ಮೈಲನಹಳ್ಳಿ, ಸಂಕೇನಹಳ್ಳಿ, ಚಿಕ್ಕಬೂವನಹಳ್ಳಿ, ಕೊಮ್ಮೇನಹಳ್ಳಿ, ಚಟ್ಟನಹಳ್ಳಿ, ಹಲಸಿನಹಳ್ಳಿ, ಗಾಡೇನಹಳ್ಳಿ, ಸಮುದ್ರವಳ್ಳಿ, ಗೇಕರವಳ್ಳಿ, ಯೋಗಿಹಳ್ಳಿ, ಹಂಡ್ರಂಗಿ, ಕುಂದೂರು ಮಠ ರಸ್ತೆ ಸೇರಿದಂತೆ ಇನ್ನೂ ಹಲವು ಗ್ರಾಮಗಳಿಗೆ ವಿಮಾನ ನಿಲ್ದಾಣ ಪ್ರಾರಂಭವಾದ ನಂತರ ರಸ್ತೆ ಸಂಪರ್ಕ ಇಲ್ಲದಾಗುತ್ತದೆ. ಇವರೆಲ್ಲರೂ ಹತ್ತಾರು ಕಿ.ಮೀ. ಸುತ್ತಿ ಬಳಸಿ ತಮ್ಮ ಕೆಲಸಗಳಿಗೆ ಹಾಸನಕ್ಕೆ ಬರಬೇಕಾಗುತ್ತದೆ ಎಂದು ಹೇಳಿದರು. ಕೆಐಡಿಬಿಯಿಂದ ವಿಮಾನ ನಿಲ್ದಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ನಡೆಯುವಾಗ ಭೂಮಿ ಕಳೆದುಕೊಂಡ ಪ್ರತಿ ಕುಟುಂಬಕ್ಕೂ ಒಂದೊಂದು ಉದ್ಯೋಗ ನೀಡುತ್ತೇವೆಂಬ ಭರವಸೆ ನೀಡಲಾಗಿತ್ತು. ಆದರೆ ಇದೂವರೆಗೂ ಈ ಕುರಿತು ಜಿಲ್ಲಾಡಳಿತ ಅಧಿಕೃತವಾಗಿ ರೈತರಿಗೆ ಏನನ್ನೂ ಹೇಳಲು ತಯಾರಿಲ್ಲ. ಒಂದೆಡೆ ಕೃಷಿಯೋಗ್ಯ ಭೂಮಿಯನ್ನು ಕಳೆದುಕೊಂಡು ಬರಿಗೈಯಲ್ಲಿರುವ ರೈತರ ಕುಟುಂಬಗಳಿಗೆ ಒಂದು ಉದ್ಯೋಗವು ಸಣ್ಣ ಆಸರೆಯಾಗುತ್ತದೆ. ವಿಮಾನ ನಿಲ್ದಾಣಕ್ಕಾಗಿ ಭೂಮಿ ಕಳೆದುಕೊಂಡ ಸಂತ್ರಸ್ತ ರೈತರ ಬೇಡಿಕೆಗಳ ಈಡೇರಿಕೆಗೆ ಜಿಲ್ಲಾಡಳಿತ ಸ್ಪಂದಿಸಿ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದರು.ಪ್ರತಿಬಟನೆಯಲ್ಲಿ ಮೂರ್ತಿ, ಜಯಲಕ್ಷ್ಮಿ, ತುಳಿಸಿರಾಮ್, ಮಲ್ಲೇಶ್, ಸಂತೋಷ್, ನಾಗರಾಜು, ಸುರೇಶ್, ರಘು, ಹೊನ್ನೇಗೌಡ, ಸತ್ಯನಾರಾಯಣ, ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ಕೆ.ಪಿ.ಆರ್.ಎಸ್. ಜಿಲ್ಲಾ ಮುಖಂಡ ಹೆಚ್.ಎಸ್. ಮಂಜುನಾಥ್, ಡಿ.ವೈ.ಎಫ್.ಐ. ಜಿಲ್ಲಾ ಕಾರ್ಯದರ್ಶಿ ಎಂ.ಜಿ. ಪೃಥ್ವಿ, ಇತರರು ಪಾಲ್ಗೊಂಡಿದ್ದರು.