ಬೆಳೆ ಹಾನಿ ಪರಿಹಾರ, ತಾರತಮ್ಯ ಸರಿಪಡಿಸದಿದ್ದರೆ ಅಹೋರಾತ್ರಿ ಧರಣಿ

| Published : May 17 2024, 12:30 AM IST

ಬೆಳೆ ಹಾನಿ ಪರಿಹಾರ, ತಾರತಮ್ಯ ಸರಿಪಡಿಸದಿದ್ದರೆ ಅಹೋರಾತ್ರಿ ಧರಣಿ
Share this Article
  • FB
  • TW
  • Linkdin
  • Email

ಸಾರಾಂಶ

ಒಂದು ವಾರದಲ್ಲಿ ಸರ್ಕಾರ ಬೆಳೆ ಹಾನಿ ವಿತರಣೆಯ ತಾರತಮ್ಯ ಸರಿಪಡಿಸಬೇಕು. ಇಲ್ಲದಿದ್ದರೆ ಮೇ 23ರಂದು ಪಟ್ಟಣದ ತಹಸೀಲ್ದಾರ್‌ ಕಾರ್ಯಾಲಯದ ಮುಂದೆ ತಾಲೂಕಿನ ರೈತರು ಅಹೋರಾತ್ರಿ ಧರಣಿ

ನರಗುಂದ:

ಸರ್ಕಾರ ಬೆಳೆ ಹಾನಿ ಪರಿಹಾರದಲ್ಲಿ ಆಗಿರುವ ತಾರತಮ್ಯ ಸರಿಪಡಿಸದಿದ್ದರೆ ತಹಸೀಲ್ದಾರ್ ಕಾರ್ಯಾಲಯದ ಮುಂದೆ ರೈತರು ಅಹೋರಾತ್ರಿ ಧರಣಿ ಪ್ರಾರಂಭ ಮಾಡುತ್ತೇವೆ ಎಂದು ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಬಸವರಾಜ ಸಾಬಳೆ ಎಚ್ಚರಿಕೆ ನೀಡಿದ್ದಾರೆ.

ಅವರು ಗುರುವಾರ ಪಟ್ಟಣದ ಮಿನಿ ವಿಧಾನ ಸೌಧದಲ್ಲಿ ಬರಗಾಲ ಬೆಳೆ ಹಾನಿ ಪರಿಹಾರ ತಾರತಮ್ಯ ಸರಿಪಡಿಸಬೇಕು ಎಂದು ತಹಸೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ನೀಡಿ ಆನಂತರ ಮಾತನಾಡಿದರು. 2023-24ನೇ ಸಾಲಿನಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ರೈತರಿಗೆ ಹಾನಿಯಾಗಿದೆ. ಬೆಳೆಹಾನಿ ಪರಿಹಾರವನ್ನು ಸರ್ಕಾರ 10 ತಿಂಗಳ ಆನಂತರ ಬಿಡುಗಡೆ ಮಾಡಿದೆ. ಆದರೆ ಈ ಹಣ ಎಲ್ಲ ರೈತರಿಗೆ ಬಂದಿಲ್ಲ. ಪರಿಹಾರ ವಿತರಣೆಯಲ್ಲಿ ತಾರತಮ್ಯವಾಗಿದೆ. ಈಗಾಗಲೇ ತಾಲೂಕಿನ ರೈತರು ತಹಸೀಲ್ದಾರ್‌ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಮಾಡಿದ್ದಾರೆ. ಆದರೆ ಪ್ರಯೋಜನವಾಗಿಲ್ಲ ಎಂದರು.

ಒಂದು ವಾರದಲ್ಲಿ ಸರ್ಕಾರ ಬೆಳೆ ಹಾನಿ ವಿತರಣೆಯ ತಾರತಮ್ಯ ಸರಿಪಡಿಸಬೇಕು. ಇಲ್ಲದಿದ್ದರೆ ಮೇ 23ರಂದು ಪಟ್ಟಣದ ತಹಸೀಲ್ದಾರ್‌ ಕಾರ್ಯಾಲಯದ ಮುಂದೆ ತಾಲೂಕಿನ ರೈತರು ಅಹೋರಾತ್ರಿ ಧರಣಿ ಆರಂಭಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಕನ್ನಡಪರ ಒಕ್ಕೂಟಗಳ ಮುಖಂಡ ಚನ್ನು ನಂದಿ ಮಾತನಾಡಿ, ಈ ಹಿಂದೆ ಸರ್ಕಾರ ಪ್ರತಿ ವರ್ಷ ಈ ಭಾಗದ ರೈತರಿಗೆ ಸರಿಯಾದ ರೀತಿಯಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿ ಪರಿಹಾರ ವಿತರಿಸುತ್ತಿತ್ತು. ಆದರೆ ಈ ವರ್ಷ ಬೆಳೆ ಹಾನಿ ಪರಿಹಾರವನ್ನು ಎಲ್ಲ ರೈತರಿಗೆ ವಿತರಣೆ ಮಾಡದೆ ರೈತ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪ ಮಾಡಿದರು.

ಶಿರಸ್ತೇದಾರ್ ಪರಶುರಾಮ ಕಲಾಲ ಅವರು ರೈತರ ಮನವಿ ಸ್ವೀಕರಿಸಿದರು. ವೆಂಕರಡ್ಡಿ ಹೆಬ್ಬಾಳ, ಕೆ.ಆರ್. ರಾಯನಗೌಡ್ರ, ಮುತ್ತಪ್ಪ ಹುಲಜೋಗಿ, ತುಳಸಪ್ಪ ಸಕ್ರಪ್ಪನವರ, ವೆಂಕನಗೌಡ ಕಗದಾಳ, ದುರರ್ಗಪ್ಪ ಇದ್ದರು.