ಸಾರಾಂಶ
ಬಳ್ಳಾರಿ: ಸರ್ಕಾರವು ಮೃತ ಬಾಣಂತಿಯರಿಗೆ ಘೋಷಿಸಿದ ಪರಿಹಾರದಲ್ಲಿ ₹2 ಲಕ್ಷದಿಂದ ₹5 ಲಕ್ಷದವರೆಗೆ ಹೆಚ್ಚಿಸಲಾಗಿದೆ. ಸರ್ಕಾರ ನೀಡಿರುವ ಪರಿಹಾರ ಸಾಕಾಗುವುದಿಲ್ಲ. ಪರಿಹಾರ ಹೆಚ್ಚಿಸಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಆಗ್ರಹಿಸಿದರು.
ಬಾಣಂತಿಯರ ಸಾವು ಪ್ರಕರಣ ಹಿನ್ನೆಲೆಯಲ್ಲಿ ನಗರದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು. ಮಕ್ಕಳ ಬೆಳವಣಿಗೆಗೆ ಹಾಗೂ ಅವರ ವಿದ್ಯಾಭ್ಯಾಸ ಸೇರಿದಂತೆ ಸಂಪೂರ್ಣ ಜವಾಬ್ದಾರಿ ಸರ್ಕಾರ ವಹಿಸಬೇಕು. ಈ ಕುರಿತು ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು ಎಂದರು.ಈ ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ಈ ತರಹದ ಘಟನೆ ಸಂಭವಿಸಿರಲಿಲ್ಲ. ಬಾಣಂತಿಯರ ಸಾವಿಗೆ ಐವಿ ರಿಂಗರ್ ದ್ರಾವಣ ಕೂಡ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಆಗ ಸರಬರಾಜು ಆದ ಎಲ್ಲ ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣ ಬ್ಯಾಚ್‌ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಬಳಿಕ ಪಾಸಿಟಿವ್ ವರದಿ ಬಂದಿದೆ. ಈಗಾಗಲೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಐವಿ ದ್ರಾವಣ ಔಷಧ ಸರಬರಾಜು ಸ್ಥಗಿತಗೊಳಿಸಿದ್ದಾರೆ ಎಂದು ತಿಳಿಸಿದರು.
ಜನಸಾಮಾನ್ಯರ ಆರೋಗ್ಯದ ಕಾಳಜಿಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು. ಗುಣಮಟ್ಟದ ಔಷಧಿ ಸರಬರಾಜು ಮಾಡಬೇಕು. ಈ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.ಜಿಲ್ಲಾಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಶಸ್ತ್ರಚಿಕಿತ್ಸಾ ಕೇಂದ್ರಗಳಲ್ಲಿ ಶುಚಿತ್ವ ಕಾಯ್ದುಕೊಳ್ಳಬೇಕು ಎಂದು ವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾಸ್ಪತ್ರೆಯ ಹೆರಿಗೆ ವಿಭಾಗ, ಹೆರಿಗೆ ಕೋಣೆಗಳ ಸಮುಚ್ಚಯ, ಶಸ್ತ್ರಚಿಕಿತ್ಸೆ ಕೊಠಡಿ, ಬಾಣಂತಿಯರಿಗೆ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ಬಿಸಿ ನೀರಿನ ವ್ಯವಸ್ಥೆ ಮತ್ತು ಆರೈಕೆ ಕ್ರಮಗಳ ಕುರಿತು ಚರ್ಚೆ ನಡೆಸಿ, ಮಾಹಿತಿ ಪಡೆದುಕೊಂಡರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ., ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು, ಬಿಮ್ಸ್ ನಿರ್ದೇಶಕ ಡಾ.ಗಂಗಾಧರ ಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಾಲಪ್ಪ, ಬಳ್ಳಾರಿ ತಾಲೂಕು ತಹಶೀಲ್ದಾರ ಗುರುರಾಜ ಸೇರಿದಂತೆ ಜಿಲ್ಲಾಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))