ಮುಖಂಡರು ಪಡೆದಿದ್ದ ಕಾಲಾವಕಾಶ ಮುಗಿದ ಹಿನ್ನೆಲೆ ಆ. ೨೭ರಂದು ಪ್ರತಿಭಟನೆ ಜತೆಗೆ ಶಾಸಕರ ಮನೆಗೆ ಮುತ್ತಿಗೆ ಹಾಕಲು ಸಂತ್ರಸ್ತ ಕುಟುಂಬಸ್ಥರು ಹಾಗೂ ಸಂಘಟನೆ ಮುಖಂಡರು ನಿರ್ಧರಿಸಿದ್ದರು.

ಗಜೇಂದ್ರಗಡ: ತಾಲೂಕಿನ ಜಿಗಳೂರು ಗ್ರಾಮದ ಬಳಿ ಕಡಲೆ ಕೀಳಲು ತೆರಳಿದ್ದ ಪಟ್ಟಣದ ಮೂವರು ಕಾರ್ಮಿಕರು ಅಪಘಾತದಲ್ಲಿ ಮೃತಪಟ್ಟ ಹಾಗೂ ೧೬ ಗಾಯಾಳುಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿ ಬಿಡುಗಡೆಯಾಗಿದ್ದು, ಜಿಲ್ಲಾಧಿಕಾರಿಗಳ ಖಾತೆಗೆ ಮಂಜೂರಾಗಿದೆ.

ಕೂಲಿ ಮಾಡಿದರೆ ಹೊಟ್ಟೆಗೆ ಹಿಟ್ಟು ಸಿಗುತ್ತದೆ ಎಂದು ₹೨೦೦ ಕೂಲಿಗಾಗಿ ತೆರಳಿದ್ದ ಮೂವರು ಕಾರ್ಮಿಕರು ೨೦೨೬ರ ಫೆ. ೫ರಂದು ಅಪಘಾತದಲ್ಲಿ ಮೃತಪಟ್ಟಿದ್ದರು. ಘಟನೆ ಕುರಿತಂತೆ ನಿಕಟಪೂರ್ವ ಶಾಸಕ ಜಿ.ಎಸ್. ಪಾಟೀಲ ಅವರು ಮೃತ ಹಾಗೂ ಗಾಯಾಳುಗಳಿಗೆ ಪರಿಹಾರ ನೀಡುವಂತೆ ಮುಖ್ಯಮಂತ್ರಿಗಳಿಗೆ ಘಟನೆಯ ದಿನವೇ ಪತ್ರ ಬರೆದಿದ್ದರು.

ಆದರೆ ಪರಿಹಾರ ಸಿಕ್ಕಿಲ್ಲವೆಂದು ಸಂತ್ರಸ್ತ ಕುಟುಂಬಸ್ಥರು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆ ನೇತೃತ್ವದಲ್ಲಿ ಮನವಿ ಸಲ್ಲಿಸಿದ್ದರು. ಅಲ್ಲದೇ ಪ್ರತಿಭಟನೆಯನ್ನೂ ಮಾಡಿದ್ದರು. ಮುಖ್ಯಮಂತ್ರಿಗಳ ಪರಿಹಾರ ನಿಧಿ ಕುರಿತ ಪತ್ರದಲ್ಲಿ ೩ ಮೃತ ಕಾರ್ಮಿಕರಿಗೆ ₹೨ ಲಕ್ಷ ಹಾಗೂ ೧೬ ಗಾಯಾಳುಗಳಿಗೆ ₹೫೦ ಸಾವಿರದಂತೆ ಪರಿಹಾರ ಬಿಡುಗಡೆಯಾಗಿದೆ.

ಪರಿಹಾರ ನೀಡಲು ವಿಳಂಬ ನೀತಿ ಖಂಡಿಸಿ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಸಂಘಟನೆ ಕಾರ್ಯಕರ್ತರು ಹಾಗೂ ಅಪಘಾತದಲ್ಲಿ ಮೃತಪಟ್ಟ ಮತ್ತು ಗಾಯಾಳುಗಳ ಕುಟುಂಬಸ್ಥರು ಪ್ರತಿಭಟನೆ ನಡೆಸಿ ಶಾಸಕರ ಮನೆಗೆ ಮುತ್ತಿಗೆ ಹಾಕಲು ಮುಂದಾಗಿದ್ದರು. ಮಧ್ಯಪ್ರವೇಶಿದ್ದ ಕಾಂಗ್ರೆಸ್ ಕಾರ್ಯಕರ್ತರು ೨೦ ದಿನದೊಳಗೆ ಪರಿಹಾರ ಕೊಡಿಸುವ ಕೆಲಸ ಮಾಡುತ್ತೇವೆ ಎಂದಿದ್ದರಿಂದ ಪ್ರತಿಭಟನೆ ಮೊಟಕುಗೊಳಿಸಲಾಗಿತ್ತು. ಆದರೆ ಮುಖಂಡರು ಪಡೆದಿದ್ದ ಕಾಲಾವಕಾಶ ಮುಗಿದ ಹಿನ್ನೆಲೆ ಆ. ೨೭ರಂದು ಪ್ರತಿಭಟನೆ ಜತೆಗೆ ಶಾಸಕರ ಮನೆಗೆ ಮುತ್ತಿಗೆ ಹಾಕಲು ಸಂತ್ರಸ್ತ ಕುಟುಂಬಸ್ಥರು ಹಾಗೂ ಸಂಘಟನೆ ಮುಖಂಡರು ನಿರ್ಧರಿಸಿದ್ದರು.

ಗಮನ ಸೆಳೆದಿದ್ದ ಕನ್ನಡಪ್ರಭ

ರೋಣ ಸಮೀಪದ ಅಪಘಾತದಲ್ಲಿ ಮೃತಪಟ್ಟ ಪಟ್ಟಣದ ಶಿವಾಜಿಪೇಟೆ ಹಾಗೂ ವಾಜಪೇಯಿ ಬಡಾವಣೆಯ ಅನ್ನಪೂರ್ಣಾ ಚಂಗಳಿ, ಮರಿಯುಂಬಿ ಹುನಗುಂದ, ಸುಜಾತಾ ಹೊಸಮನಿ ಈ ಕೂಲಿ ಕಾರ್ಮಿಕರ ಕುಟುಂಬ ಅನುಭವಿಸುತ್ತಿದ್ದ ಸಂಕಷ್ಟವನ್ನು ಕನ್ನಡಪ್ರಭ ಪತ್ರಿಕೆಯು ವಿಶೇಷ ವರದಿ ಪ್ರಕಟಿಸಿ ಆಡಳಿತದ ಗಮನ ಸೆಳೆದಿತ್ತು.

ಶೀಘ್ರದಲ್ಲೇ ಪರಿಹಾರ: ರೋಣ ಸಮೀಪ ಜಿಗಳೂರು ಬಳಿ ಅಪಘಾತದಲ್ಲಿ ಮೃತಪಟ್ಟಿದ್ದ ಪಟ್ಟಣದ ೩ ಕೂಲಿ ಕಾರ್ಮಿಕರು ಹಾಗೂ ೧೬ ಗಾಯಾಳುಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿ ಮಂಜೂರು ಆಗಿದ್ದು, ಕಾನೂನಿನಂತೆ ಶೀಘ್ರದಲ್ಲೇ ಸಂತ್ರಸ್ತರಿಗೆ ಪರಿಹಾರ ತಲುಪಿಸಲಾಗುವುದು. ಮಾತಿಗೆ ತಪ್ಪದಂತೆ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಮಂಜೂರು ಮಾಡಿಸಲಾಗಿದೆ ಎಂದು ಪುರಸಭೆ ಮಾಜಿ ಸದಸ್ಯ ಶಿವರಾಜ ಘೋರ್ಪಡೆ ತಿಳಿಸಿದರು.ಖಾತೆಗೆ ಜಮೆಯಾಗಲಿ: ರೋಣ ಸಮೀಪ ಜಿಗಳೂರು ಬಳಿ ಅಪಘಾತದಲ್ಲಿ ಮೃತಪಟ್ಟಿದ್ದ ಪಟ್ಟಣದ ೩ ಕೂಲಿ ಕಾರ್ಮಿಕರು ಹಾಗೂ ೧೬ ಗಾಯಾಳುಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿ ಮಂಜೂರು ಮಾಡಿದ ಸರ್ಕಾರ ಹಾಗೂ ಸ್ಥಳೀಯ ಶಾಸಕರನ್ನು ಅಭಿನಂದಿಸುತ್ತೇವೆ. ಪರಿಹಾರ ಹಣ ತ್ವರಿತಗತಿಯಲ್ಲಿ ಸಂಕಷ್ಟದಲ್ಲಿರುವ ಕುಟುಂಬಗಳ ಖಾತೆಗೆ ಜಮೆ ಮಾಡಬೇಕು ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಮುಖಂಡರಾದ ಎಂ.ಎಸ್. ಹಡಪದ, ದಾವಲ ತಾಳಿಕೋಟಿ ತಿಳಿಸಿದರು.