ಕೇವಲ ಕೇಳುವಿಕೆ ಅಥವಾ ವೀಕ್ಷಣೆಯಿಂದ ಕಲಿಯುವುದಕ್ಕಿಂತ ಸ್ವತಃ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಅನುಭವದ ಮೂಲಕ ಕಲಿಯುವುದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಕ್ರಿಯೆಯ ಮೂಲಕ ಕಲಿಯುವುದು, ಇತರರನ್ನು ಗಮನಿಸಿ ಕಲಿಯುವುದು ಹಾಗೂ ಗುಂಪಿನಲ್ಲಿ ಪರಸ್ಪರ ಸಹಭಾಗಿತ್ವದೊಂದಿಗೆ ಕಾರ್ಯನಿರ್ವಹಿಸುವುದು ಉತ್ತಮ ಕಲಿಕಾ ವಿಧಾನಗಳಾಗಿವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜೀವನದಲ್ಲಿ ಲಭ್ಯವಾಗುವ ಸಮಯವನ್ನು ಸದುಪಯೋಗಪಡಿಸಿಕೊಂಡು ನಿರಂತರ ಅಭ್ಯಾಸ ಹಾಗೂ ಪ್ರಾಯೋಗಿಕ ಅನುಭವದ ಮೂಲಕ ತಮ್ಮ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಾಂತ ಹೇಳಿದರು.

ನಗರದ ಸಂತ ಜೋಸೆಫರ ಶಾಲೆಯ ಸಭಾಂಗಣದಲ್ಲಿ ಆಯೋಜಿಸಿದ್ದ ವಸ್ತುಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಕಲಿತ ವಿಷಯಗಳನ್ನು ಕೇವಲ ಪಠ್ಯಕ್ಕೆ ಸೀಮಿತಗೊಳಿಸದೆ, ಅವುಗಳನ್ನು ಪ್ರಾಯೋಗಿಕವಾಗಿ ಅನ್ವಯಿಸುವ ಮೂಲಕ ಹೊಸ ವಿಷಯಗಳನ್ನು ಅರಿತುಕೊಳ್ಳಬೇಕು. ಪ್ರಾಯೋಗಿಕ ಕಲಿಕೆಯು ಮಕ್ಕಳಲ್ಲಿ ಸೃಜನಶೀಲತೆ, ಆತ್ಮವಿಶ್ವಾಸ ಹಾಗೂ ಕಾರ್ಯನಿರ್ವಹಣಾ ಕೌಶಲ್ಯಗಳನ್ನು ಬೆಳೆಸುತ್ತದೆ ಎಂದರು.

ಕೇವಲ ಕೇಳುವಿಕೆ ಅಥವಾ ವೀಕ್ಷಣೆಯಿಂದ ಕಲಿಯುವುದಕ್ಕಿಂತ ಸ್ವತಃ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಅನುಭವದ ಮೂಲಕ ಕಲಿಯುವುದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಕ್ರಿಯೆಯ ಮೂಲಕ ಕಲಿಯುವುದು, ಇತರರನ್ನು ಗಮನಿಸಿ ಕಲಿಯುವುದು ಹಾಗೂ ಗುಂಪಿನಲ್ಲಿ ಪರಸ್ಪರ ಸಹಭಾಗಿತ್ವದೊಂದಿಗೆ ಕಾರ್ಯನಿರ್ವಹಿಸುವುದು ಉತ್ತಮ ಕಲಿಕಾ ವಿಧಾನಗಳಾಗಿವೆ ಎಂದರು.

ಸಹಭಾಗಿತ್ವವೆಂದರೆ ಕೇವಲ ಒಟ್ಟಿಗೆ ಇರುವುದಲ್ಲ, ಗುಂಪಿನ ಪ್ರತಿಯೊಬ್ಬರೂ ಸಮಾನವಾಗಿ ಪಾಲ್ಗೊಂಡು ತಮ್ಮ ಆಲೋಚನೆ, ಜ್ಞಾನ ಹಾಗೂ ಅನುಭವಗಳನ್ನು ಪರಸ್ಪರ ಹಂಚಿಕೊಳ್ಳುವ ಮೂಲಕ ಕಾರ್ಯಗಳನ್ನು ಯಶಸ್ವಿಗೊಳಿಸುವುದು. ಕ್ರೀಡೆ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ತಂಡದ ಮನೋಭಾವ, ಪರಸ್ಪರ ಸಹಕಾರ ಹಾಗೂ ಸಮನ್ವಯಕ್ಕೆ ಆದ್ಯತೆ ನೀಡಬೇಕು. ಇಂತಹ ಚಟುವಟಿಕೆಗಳು ಮಕ್ಕಳಲ್ಲಿ ಸಹಕಾರ ಮನೋಭಾವ ಮತ್ತು ಸಾಮಾಜಿಕ ಕೌಶಲ್ಯಗಳನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಡಿಎಡ್ ಕಾಲೇಜಿನ ಪ್ರಾಂಶುಪಾಲರು ಹಾಗೂ ಸಂತ ಜೋಸೆಫರ ಶಾಲೆಯ ವ್ಯವಸ್ಥಾಪಕಿ ಸಿಸ್ಟರ್ ವೀಣಾ ಮಾತನಾಡಿ, ವಿದ್ಯಾರ್ಥಿಗಳ ಸೃಜನಶೀಲತೆ, ಆತ್ಮವಿಶ್ವಾಸ ಹಾಗೂ ಸಾಮರ್ಥ್ಯವನ್ನು ವಸ್ತು ಪ್ರದರ್ಶನದಂತಹ ಚಟುವಟಿಕೆಗಳು ಪ್ರತಿಬಿಂಬಿಸುತ್ತವೆ. ಶಿಕ್ಷಣವೆಂದರೆ ಕೇವಲ ಓದು-ಬರಹಕ್ಕೆ ಸೀಮಿತವಾಗಿರದೆ, ಹೊಸ ವಿಷಯಗಳನ್ನು ತಿಳಿದುಕೊಳ್ಳುವುದು ಹಾಗೂ ಕಲಿತ ಜ್ಞಾನವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದಾಗಿದೆ. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಗುರುತಿಸಿ, ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವುದು ಶಿಕ್ಷಕರ ಪ್ರಮುಖ ಜವಾಬ್ದಾರಿಯಾಗಿದೆ ಎಂದರು.

ಸಮಾಜ ವಿಜ್ಞಾನ ಪರಿವೀಕ್ಷಕರಾದ ನಾಗರಾಜ್, ಸಂತ ಜೋಸೆಫರ ಶಾಲೆಯ ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕಿ ಸುನಿತಾ ಸೆರಾವೋ, ಕನ್ನಡ ವಿಭಾಗದ ಮುಖ್ಯಶಿಕ್ಷಕಿ ಸಿಸ್ಟರ್ ಫ್ರೋರಾ, ವಿದ್ಯಾಸಂಸ್ಥೆಯ ಆಪ್ತ ಸಮಾಲೋಚಕರಾದ ಸಿಸ್ಟರ್ ಸುನೀತಾ, ಅನಿತಾ, ಇತರರಿದ್ದರು.ಸೇರಿದಂತೆ ಇತರರು ಉಪಸ್ಥಿತರಿದ್ದರು.