ಗುಂಡ್ಲುಪೇಟೆ ಪುರಸಭೆ ಅಧಿಕಾರಕ್ಕಾಗಿ ಕೈ, ಕಮಲ ಹಗ್ಗಜಗ್ಗಾಟ!

| Published : Aug 31 2024, 01:33 AM IST

ಗುಂಡ್ಲುಪೇಟೆ ಪುರಸಭೆ ಅಧಿಕಾರಕ್ಕಾಗಿ ಕೈ, ಕಮಲ ಹಗ್ಗಜಗ್ಗಾಟ!
Share this Article
  • FB
  • TW
  • Linkdin
  • Email

ಸಾರಾಂಶ

ಗುಂಡ್ಲುಪೇಟೆ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಿಗದಿಗೊಂಡಿದ್ದು, ಪುರಸಭೆಯ ಅಧಿಕಾರಕ್ಕಾಗಿ ಕಾಂಗ್ರೆಸ್‌, ಬಿಜೆಪಿ ಹಗ್ಗಜಗ್ಗಾಟಕ್ಕೆ ಚುನಾವಣೆಯು ವೇದಿಕೆ ಒದಗಿಸಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಇಲ್ಲಿನ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಿಗದಿಗೊಂಡಿದ್ದು, ಪುರಸಭೆಯ ಅಧಿಕಾರಕ್ಕಾಗಿ ಕಾಂಗ್ರೆಸ್‌, ಬಿಜೆಪಿ ಹಗ್ಗಜಗ್ಗಾಟಕ್ಕೆ ಚುನಾವಣೆಯು ವೇದಿಕೆ ಒದಗಿಸಿದೆ.

ಪುರಸಭೆ ಕಳೆದ ಅವಧಿಯಲ್ಲಿ ಬಿಜೆಪಿ ಅಧಿಕಾರ ನಡೆಸಿತ್ತು. ಮತ್ತೆ ಈ ಅವಧಿಯಲ್ಲಿ ಪುರಸಭೆಯಲ್ಲಿ ಕಮಲ ಅರಳಿಸಲು ಬಿಜೆಪಿ ಮುಂದಾಗಿದ್ದರೆ, ಕಾಂಗ್ರೆಸ್‌ ಕೂಡ ಪುರಸಭೆಯಲ್ಲಿ ಕಳೆದ ಅವಧಿಯ ಕಳೆದುಕೊಂಡ ಅಧಿಕಾರ ಮತ್ತೆ ಹಿಡಿಯಲು ಯತ್ನಿಸಿದೆ.

ಕಳೆದ ೨೦೧೯ರ ಚುನಾವಣೆ ನಡೆದಾಗ ಬಿಜೆಪಿ ೧೩ ಮಂದಿ, ಕಾಂಗ್ರೆಸ್‌ ೮ ಮಂದಿ, ತಲಾ ಎಸ್‌ಡಿಪಿಐ ಹಾಗೂ ಪಕ್ಷೇತರ ಒಬ್ಬರು ಆಯ್ಕೆಯಾಗಿದ್ದರು. ಆದರೀಗ ಬಿಜೆಪಿಯಲ್ಲಿ ಸ್ವಲ್ಪ ಒಡಕಾಗಿದೆ. ಬಿಜೆಪಿ ಸದಸ್ಯ ರಮೇಶ್‌ ಪುರಸಭೆ ಅಧ್ಯಕ್ಷ ಸ್ಥಾನ ಬಿಟ್ಟು ಕೊಡುವ ವಿಚಾರದಲ್ಲಿ ಬಿಜೆಪಿ ಸ್ಥಳೀಯ ಮುಖಂಡರು ಮಾತಿಗೆ ತಪ್ಪಿದರು ಎಂದು ಆಕ್ರೋಶಗೊಂಡು ಬಿಜೆಪಿಯಿಂದ ದೂರ ಉಳಿದಿದ್ದಾರೆ.

ಬಿಜೆಪಿ ಸದಸ್ಯೆ ರಾಣಿ ಲಕ್ಷ್ಮೀದೇವಿ ಹಾಗೂ ಅವರ ಪತಿ ಪುರಸಭೆ ಮಾಜಿ ಸದಸ್ಯ ಬಸವರಾಜು ಬಿಜೆಪಿಯೊಂದಿಗೆ ಮುನಿಸಿಕೊಂಡಿದ್ದಾರೆ. ಸ್ಥಳೀಯ ಬಿಜೆಪಿ ಮುಖಂಡರು ಅವರ ಮನವೊಲಿಸಿದ್ದರೂ ಬಿಜೆಪಿಯಲ್ಲಿ ಆತಂಕ ಮನೆ ಮಾಡಿದೆ.

ಬಲಾಬಲ:

ಪುರಸಭೆಯಲ್ಲಿ ಸದ್ಯಕ್ಕೀಗ ೧೧ ಮಂದಿ ಬಿಜೆಪಿ ಸದಸ್ಯರು ಇದ್ದು, ಕಾಂಗ್ರೆಸ್‌ನಲ್ಲಿ ೮ ಮಂದಿ ಸದಸ್ಯರ ಜೊತೆಗೆ ಶಾಸಕ, ಸಂಸದ ಮತ ಸೇರಿದರೆ ೧೦ ಮತ ಹಾಗೂ ಎಸ್‌ಡಿಪಿಐ ಸದಸ್ಯ ರಾಜಗೋಪಾಲ್‌ ಕಾಂಗ್ರೆಸ್‌ ಬೆಂಬಲ ಎಂದಿರುವ ಕಾರಣ ಕಾಂಗ್ರೆಸ್‌ ಬಲ ಹನ್ನೊಂದಾಗಲಿದೆ.

ಇಬ್ರಿಗೂ ಇಬ್ರು ಬೇಕು?:

ಕಾಂಗ್ರೆಸ್‌ ಅಥವಾ ಬಿಜೆಪಿ ಪುರಸಭೆಯ ಅಧಿಕಾರ ಹಿಡಿಯಲು ಬಿಜೆಪಿ, ಕಾಂಗ್ರೆಸ್‌ ತಲಾ ೧೧ ಮತಗಳ ಜೊತೆಗೆ ಇಬ್ಬರು ಸದಸ್ಯರ ಮತಗಳು ಬೇಕು. ಪಕ್ಷೇತರ ಸದಸ್ಯರ ಬೆಂಬಲ ಬಿಜೆಪಿ ಪಡೆದುಕೊಂಡಿದೆ. ಆದರೂ ಕಾಂಗ್ರೆಸ್‌ ಬಿಜೆಪಿಯ ಇಬ್ಬರು ಸದಸ್ಯರನ್ನು ಆಪರೇಷನ್‌ ಕಮಲ ಮಾಡುತ್ತಾರೆಂಬ ವದಂತಿ ಬಿಜೆಪಿ ಪಾಳೆಯದಲ್ಲಿ ಹರಿದಾಡುತ್ತಿದ್ದರೂ ತನ್ನ ೧೨ ಮಂದಿ ಸದಸ್ಯರು ಒಟ್ಟಿಗೆ ಇದ್ದಾರೆ ಎಂದು ಬಿಜೆಪಿ ಹೇಳುತ್ತಿದೆ.

ಪಕ್ಷೇತರ ಕಮಲಕ್ಕೆ

ಪುರಸಭೆಯ ಅಧಿಕಾರಕ್ಕೇರಲು ಕಾಂಗ್ರೆಸ್‌, ಬಿಜೆಪಿ ಪಕ್ಷೇತರ ಸದಸ್ಯರ ಮತ ಪಡೆಯಲು ಸರ್ಕಸ್‌ ನಡೆದಿದ್ದು, ಬಿಜೆಪಿ ಪಕ್ಷೇತರ ಸದಸ್ಯರ ಬೆಂಬಲ ಪಡೆಯುವಲ್ಲಿ ಯಶ ಕಂಡಿದೆ. ಆದರೆ ಬಿಜೆಪಿ ಇಬ್ಬರು ಸದಸ್ಯರು ಪಕ್ಷಾಂತರ ಮಾಡಲಿದ್ದಾರೆ ಎಂಬ ಕನಸಿನೊಂದಿಗೆ ಕಾಂಗ್ರೆಸ್‌ ಪುರಸಭೆ ಚುನಾವಣೆ ಎದುರಿಸಲು ಸಜ್ಜಾಗಿದೆ.

ಬಿಜೆಪಿ-ಕಾಂಗ್ರೆಸ್‌ಗೆ ಪ್ರತಿಷ್ಠೆ ಕಣ!

ಪುರಸಭೆ ಅಧಿಕಾರ ಹಿಡಿಯಲು ಕಾಂಗ್ರೆಸ್‌ ಹಾಗೂ ಬಿಜೆಪಿ ಪೈಪೋಟಿ ನಡೆಸುತ್ತಿದೆ. ಆದರೆ ಪುರಸಭೆ ಅಧಿಕಾರ ಕಾಂಗ್ರೆಸ್‌, ಬಿಜೆಪಿಗೆ ಪ್ರತಿಷ್ಠೆ ಕಣವಾಗಿದೆ. ಮೊದಲ ಬಾರಿಗೆ ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌ಗೆ ಪುರಸಭೆ ಅಧಿಕಾರ ಪ್ರತಿಷ್ಠೆಯಾದರೆ, ಇಲ್ಲಿನ ಬಿಜೆಪಿಗರಿಗೂ ಪ್ರತಿಷ್ಠೆಯ ಕಣವಾಗಿ ಹೋಗಿದೆ.

ಕಳೆದ ಅವಧಿಯಲ್ಲಿ ಬಿಜೆಪಿ ಅಧಿಕಾರ ನಡೆಸಿ ಅಧಿಕಾರದ ಸವಿದಿತ್ತು. ಈಗ ಕಾಂಗ್ರೆಸ್‌ಗೆ ಪುರಸಭೆಯಲ್ಲಿ ಅಧಿಕಾರ ಹಿಡಿದರೆ ಕಾಂಗ್ರೆಸ್‌ ಮತ್ತಷ್ಟು ಬಲಗೊಳ್ಳಲಿದೆ ಎಂದು ಪುರಸಭೆ ಅಧಿಕಾರ ಹಿಡಿಯಲು ಜಿದ್ದಿಗೆ ಬಿದ್ದಿದೆ.