ಸಾರಾಂಶ
ಬಸವರಾಜ ಹಿರೇಮಠ
ಧಾರವಾಡ:ಶತಮಾನದ ಇತಿಹಾಸ ಹೊಂದಿರುವ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಆಡಳಿತ ಮಂಡಳಿಯ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಚುನಾವಣಾ ಕಣದಲ್ಲಿ ಮೂರು ಬಣಗಳು ಸ್ಪರ್ಧಿಸಿದ್ದು ಗೆಲುವಿಗಾಗಿ ತೀವ್ರ ಪೈಪೋಟಿ ಶುರುವಾಗಿದೆ.
ಮಹಾಸಭಾ ಚುನಾವಣೆಯಲ್ಲಿ ಒಂದು ಅಧ್ಯಕ್ಷ ಸ್ಥಾನ, 20 ಪುರುಷ ಕಾರ್ಯಕಾರಿ ಹಾಗೂ ಹತ್ತು ಮಹಿಳಾ ಕಾರ್ಯಕಾರಿ ಸ್ಥಾನಗಳು ಸೇರಿ ಒಟ್ಟು 31 ಸ್ಥಾನಗಳಿಗೆ ಬರುವ ಜುಲೈ 21ರಂದು ನಗರದ ಮಹಾಸಭಾದ ಲಿಂಗಾಯತ ಭವನದಲ್ಲಿ ಐದು ವರ್ಷಗಳ ಆಡಳಿತ ಮಂಡಳಿಗೆ ಚುನಾವಣೆ ನಡೆಯಲಿದೆ. ಹಾಲಿ ಅಧ್ಯಕ್ಷ ಗುರುರಾಜ ಹುಣಸೀಮರದ, ಪ್ರದೀಪಗೌಡ ಪಾಟೀಲ ಹಾಗೂ ಸಿದ್ದಣ್ಣ ಕಂಬಾರ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು ತಮ್ಮ ತಮ್ಮ ಬಣಗಳೊಂದಿಗೆ ಮತ ಕೇಳುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 2850 ಮತಗಳಿದ್ದು, ಕಳೆದ ವಾರದಿಂದ ಚುನಾವಣಾ ಪ್ರಚಾರ ಜೋರು ಪಡೆದಿದೆ.ನುಸುಳಿದ ರಾಜಕೀಯ:
ಈ ಮೊದಲಿನ ಚುನಾವಣೆಗಿಂತಲೂ ಈ ಬಾರಿ ಚುನಾವಣೆ ತುರುಸು ಪಡೆದಿದ್ದು, ನಿಧಾನವಾಗಿ ರಾಜಕೀಯದತ್ತ ಹೊರಳುತ್ತಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಆರಂಭದಲ್ಲಿ ಅವಿರೋಧವಾಗಿ ಜಿಲ್ಲಾ ಘಟಕವನ್ನು ರಚಿಸಲು ತೀರ್ಮಾನಿಸಲಾಗಿತ್ತು. ಧಾರವಾಡದ ಮುರುಘಾಮಠ, ಹುಬ್ಬಳ್ಳಿ ಮೂರುಸಾವಿರ ಮಠದ ಸ್ವಾಮೀಜಿಗಳ ನೇತೃತ್ವದಲ್ಲಿ ಸಮಾಜದ ಅಭಿವೃದ್ಧಿ ದೃಷ್ಟಿಯಿಂದ ಸಮರ್ಥ ವ್ಯಕ್ತಿಯನ್ನು ಆಯ್ಕೆಮಾಡಲು ತೀರ್ಮಾನಿಸಲಾಗಿತ್ತು. ನಂತರದಲ್ಲಿ ನಡೆದ ಬೆಳವಣಿಗೆಯ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಚುನಾವಣೆ ಎದುರಿಸಬೇಕಾಯಿತು.ಒಂದಾದ ಶಾಸಕರು:
ಕಳೆದ ಐದು ವರ್ಷಗಳ ಕಾಲ ಆಡಳಿತ ನಡೆಸಿದ ಗುರುರಾಜ ಹುಣಸೀಮರದ ಅವರನ್ನು ಈ ಬಾರಿ ಸೋಲಿಸಲು ಬಿಜೆಪಿ ಹಾಗೂ ಕಾಂಗ್ರೆಸ್ ಒಟ್ಟಾಗಿ ಕೆಲಸ ಮಾಡುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹುಣಸೀಮರದ ವೀರಶೈವ ಮಹಾಸಭಾ ಕಟ್ಟಡದ ಮೇಲೆ ವಿರೋಧದ ಮಧ್ಯೆಯೂ ಅಳವಡಿಸಿದ್ದ ಲೀಲಾವತಿ ಚಂದ್ರಕಾಂತ ಬೆಲ್ಲದ ಹೆಸರಿನ ನಾಮಫಲಕವನ್ನು ಬಹಿರಂಗವಾಗಿ ತೆರವುಗೊಳಿಸಿದ್ದು ಹಾಗೂ ಶಾಸಕ ಬೆಲ್ಲದ ಕುಟುಂಬದ ವಿರುದ್ಧ ಆಗಾಗ ನೀಡುತ್ತಿರುವ ಹೇಳಿಕೆ ಹಿನ್ನೆಲೆಯಲ್ಲಿ ಅವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.ಈ ಚುನಾವಣೆಯಲ್ಲಿ ಶತಾಯ-ಗತಾಯ ಹುಣಸೀಮರದ ಹಾಗೂ ಅವರ ತಂಡವನ್ನು ಸೋಲಿಸಲು ಬೆಲ್ಲದ ಅವರು ಪಣ ತೊಟ್ಟಂತೆ ಕಾಣುತ್ತಿದೆ. ಶಾಸಕ ವಿನಯ ಕುಲಕರ್ಣಿ ಬೆಂಬಲಿಗ ಪ್ರದೀಪಗೌಡ ಅವರಿಗೆ ಮತ ನೀಡುವಂತೆ ಬೆಲ್ಲದ ಮನವಿ ಮಾಡುತ್ತಿದ್ದಾರೆ. ಪ್ರದೀಪಗೌಡ ಅವರನ್ನು ಸಮಾಜದ ಜನತೆ ಬೆಂಬಲಿಸಲು ವಿಡಿಯೋ ಸಹ ಮತದಾರ ಮೊಬೈಲ್ ತಲುಪಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಚುನಾವಣೆಯು ಮತ್ತಷ್ಟು ತುರುಸು ಪಡೆದಿದೆ.
ಯಾರ್‍ಯಾರು ಏನ್ ಮಾಡ್ತಾರೆ:ಅರ್ಧಕ್ಕೆ ನಿಂತಿದ್ದ ಮಹಾಸಭಾ ಕಟ್ಟಡವನ್ನು ಪೂರ್ತಿಗೊಳಿಸಿ ಸಮಾಜದ ಕಾರ್ಯ-ಕಲಾಪಗಳಿಗೆ ಸುಸಜ್ಜಿತ ಕಟ್ಟಡ ನಿರ್ಮಿಸಿದ್ದೇನೆ. ಸಿರಸಂಗಿ ಲಿಂಗರಾಜರ ಹೆಸರಿನಲ್ಲಿ ಮೊದಲ ಮಹಡಿಯಲ್ಲಿ ಸಭಾಭವನ ಸಹ ನಿರ್ಮಿಸಲಾಗಿದೆ. ಮಹಾಸಭಾಕ್ಕೆ ಆದಾಯ ಬರುವಂತೆ ಕಟ್ಟಡವನ್ನು ನಿರ್ಮಿಸಲಾಗಿದ್ದು, ಸಮಾಜದ ವಿದ್ಯಾರ್ಥಿಗಳಿಗೆ ಬರುವ ದಿನಗಳಲ್ಲಿ ವಸತಿ ನಿಲಯ ನಿರ್ಮಾಣದ ಕಾರ್ಯವೂ ಚಾಲ್ತಿಯಲ್ಲಿದೆ. ಸಮಾಜಕ್ಕೆ 2ಎ ಮೀಸಲಾತಿ ಕುರಿತು ಹಲವು ಬಾರಿ ಹೋರಾಟ ನಡೆಸಿದ್ದು, ಪ್ರತಿಭಾ ಪುರಸ್ಕಾರ, ಲಿಂಗದೀಕ್ಷೆ ಸೇರಿದಂತೆ ಸಮಾಜದ ಆಗು ಹೋಗುಗಳಿಗೆ ಸ್ಪಂದಿಸಿದ್ದೇನೆ ಎಂದು ಹಾಲಿ ಅಧ್ಯಕ್ಷ ಗುರುರಾಜ ಹುಣಸೀಮರದ ಹೇಳುತ್ತಾರೆ.
ವ್ಯಕ್ತಪಡಿಸುತ್ತಾರೆ.ಅದೇ ರೀತಿ ಪ್ರದೀಪಗೌಡ ಅವರು ಸಹ ತಾವು ಮುಂದಿನ ಅವಧಿಯಲ್ಲಿ ಮಾಡುವ ಕೆಲಸಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡುತ್ತಿದ್ದಾರೆ. ಇನ್ನೋರ್ವ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಶಿದ್ದಣ್ಣ ಕಂಬಾರ, ಕಳೆದ ಅವಧಿಯಲ್ಲಿ ಕಾರ್ಯದರ್ಶಿಯಾಗಿ ಸಮರ್ಥವಾಗಿ ಕಾರ್ಯ ಮಾಡಿದ್ದು ಸಮಾಜದ ಎಲ್ಲ ಹಂತದಲ್ಲೂ ಶ್ರಮಿಸಿದ್ದೇನೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅವಕಾಶ ಕೊಡಿ ಎಂದು ಮನವಿ ಮಾಡುತ್ತಿದ್ದಾರೆ.ನುಸುಳಿದ ರಾಜಕೀಯ, ಮೂಡಿದ ಒಡಕು
ಪ್ರಸ್ತುತ ವೀರಶೈವ-ಲಿಂಗಾಯತ ಸಮಾಜದಲ್ಲಿ ರಾಜಕೀಯ ನುಸುಳಿ ಒಡಕು ಮೂಡಿದೆ. ಇದರ ಲಾಭ ಪಡೆದ ರಾಜಕೀಯ ಮುಖಂಡರು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆಯೇ ಹೊರತು ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿಲ್ಲ. ಜಾತಿ ಸಮೀಕ್ಷೆಯಲ್ಲಿ ಲಿಂಗಾಯತ ಸಮಾಜದ ಜನಸಂಖ್ಯೆಯನ್ನು ಯಾವ ಸ್ಥಾನದಲ್ಲಿ ಈ ಸರ್ಕಾರ ತಂದಿರುವುದು ಗೊತ್ತಿರುವುದು ಸಂಗತಿ. ಸಮಾಜಕ್ಕೆ 2ಎ ಮೀಸಲಾತಿಯೂ ಬೇಕಾಗಿದೆ. ಈ ನಿಟ್ಟಿನಲ್ಲಿ ವಿರಶೈವ-ಲಿಂಗಾಯತ ಸಮಾಜ ಈಗಲಾದರೂ ಎಚ್ಚೆತ್ತುಕೊಂಡು ಒಳಪಂಗಡಗಳನ್ನು ಒಂದುಗೂಡಿಸಿ ಸಮಾಜಕ್ಕೆ ಕೊಡುಗೆ ನೀಡುವ, ಸಮಾಜದ ಅಭಿವೃದ್ಧಿಗೆ ಹೋರಾಡುವ ವ್ಯಕ್ತಿಯನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಬೇಕು ಎಂಬ ದಿಟ್ಟವಾದ ಮಾತುಗಳು ಕೇಳಿ ಬರುತ್ತಿವೆ.