ಸಾರಾಂಶ
ಚಿಂಚೋಳಿ ತಾಲೂಕು ಮಂಡಲ ಬಿಜೆಪಿ ಅಧ್ಯಕ್ಷ ಸ್ಥಾನ ತೆರವಾಗಿದ್ದು, ಲಿಂಗಾಯತ ಸಮುದಾಯದ, ಡಿಸಿಸಿ ಬ್ಯಾಂಕ್ ನಿರ್ದೇಶಕ ಗೌತಮ ಪಾಟೀಲ, ಚಿತ್ರಶೇಖರ ಪಾಟೀಲ, ಶ್ರೀಹರಿ ಕಾಟಾಪೂರ, ತಾಲೂಕು ಕೋಲಿ ಸಮಾಜದ ಮುಖಂಡ ನಾರಾಯಣ ನಾಟೀಕಾರ, ದಲಿತ ಮುಖಂಡ ಅಮರನಾಥ ಲೊಡನೋರ, ಬಿಜೆಪಿ ಯುವ ಮುಖಂಡ ಗಿರಿರಾಜ ನಾಟೀಕಾರ, ರಮೇಶ ಪಡಶೆಟ್ಟಿ ಅಧ್ಯಕ್ಷ ಗಾದಿಗೇರಲು ಇನ್ನಿಲ್ಲದ ಕಸರತ್ತು ಆರಂಭಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಚಿಂಚೋಳಿ
ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಸ್ಥಳೀಯ ಬಿಜೆಪಿ ಮುಖಂಡರು ಚುರುಕಾಗಿದ್ದು, ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಸ್ಥಾನಕ್ಕಾಗಿ ತೆರೆಮರೆಯಲ್ಲಿ ಭಾರಿ ಪೈಪೋಟಿ ನಡೆಸಿದ್ದಾರೆ.ತಾಲೂಕು ಮಂಡಲ ಬಿಜೆಪಿ ಅಧ್ಯಕ್ಷ ಸ್ಥಾನ ತೆರವಾಗಿದ್ದು, ಲಿಂಗಾಯತ ಸಮುದಾಯದ, ಡಿಸಿಸಿ ಬ್ಯಾಂಕ್ ನಿರ್ದೇಶಕ ಗೌತಮ ಪಾಟೀಲ, ಚಿತ್ರಶೇಖರ ಪಾಟೀಲ, ಶ್ರೀಹರಿ ಕಾಟಾಪೂರ, ತಾಲೂಕು ಕೋಲಿ ಸಮಾಜದ ಮುಖಂಡ ನಾರಾಯಣ ನಾಟೀಕಾರ, ದಲಿತ ಮುಖಂಡ ಅಮರನಾಥ ಲೊಡನೋರ, ಬಿಜೆಪಿ ಯುವ ಮುಖಂಡ ಗಿರಿರಾಜ ನಾಟೀಕಾರ, ರಮೇಶ ಪಡಶೆಟ್ಟಿ ಅಧ್ಯಕ್ಷ ಗಾದಿಗೇರಲು ಇನ್ನಿಲ್ಲದ ಕಸರತ್ತು ಆರಂಭಿಸಿದ್ದಾರೆ.
ಚಿಂಚೋಳಿ ಮೀಸಲು ಮತಕ್ಷೇತ್ರದಲ್ಲಿ ಹಿಂದೆ ಅಧ್ಯಕ್ಷ ಸ್ಥಾನವನ್ನು ಲಿಂಗಾಯತ ಸಮಾಜದ ಶಶಿಧರ ಸೂಗೂರ, ಭೀಮಶೆಟ್ಟಿ ಮುರುಡಾ,.ಸಂತೋಷ ಗಡಂತಿ ಅವರಿಗೆ ನೀಡಲಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಿ,ವೈ. ವಿಜಯೇಂದ್ರ ಆಯ್ಕೆ ನಂತರ ತಾಲೂಕು ಮಂಡಲ ಅಧ್ಯಕ್ಷ ಸ್ಥಾನ ಬದಲಾವಣೆ ಆಗಲಿದೆ ಎಂಬ ವಿಷಯ ಕಾರ್ಯಕರ್ತರಿಗೆ ತಿಳಿಯುತ್ತಿದ್ದಂತೆ ಇದೀಗ ಬಿಜೆಪಿ ಕಾರ್ಯಕರ್ತರು ಅಧ್ಯಕ್ಷ ಸ್ಥಾನಕ್ಕಾಗಿ ತೆರೆಮರೆಯಲ್ಲಿ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಲಿಂಗಾಯತ, ಕೋಲಿ, ದಲಿತ ಸಮುದಾಯದ ಕಾರ್ಯಕರ್ತರಲ್ಲಿ ಯಾರಿಗೆ ಅಧ್ಯಕ್ಷ ಸ್ಥಾನನೀಡಬೇಕೆಂಬ ಚಿಂತನೆ ಪಕ್ಷದ ವರಿಷ್ಠರಿಗೆ ಕಾಡುತ್ತಿದೆ.ಹಿಂದೆ ತಾಲೂಕು ಬಿಜೆಪಿ ಅಧ್ಯಕ್ಷರಾಗಿದ್ದ ಸಂತೋಷ ಗಡಂತಿ ಪಕ್ಷದ ಸಂಘಟನೆ ಮಾಡದ ಕಾರಣ ಚುನಾವಣೆಯಲಿ ಅತಿಕಡಿಮೆ ಮತಗಳ ಅಂತರ ಸಿಕ್ಕಿದೆ ಎಂಬುದು ಕಾರ್ಯಕರ್ತರ ಆರೋಪ. ಶಾಸಕ ಡಾ. ಅವಿನಾಶ ಜಾಧವ್ ಕೇವಲ ೮೫೫ ಮತಗಳಿಂದ ಜಯಗಳಿಸಿರುವುದು ಕೆಲವರಿಗೆ ನಿರಾಸೆ ಮೂಡಿಸಿದೆ. ಹೆಚ್ಚು ಮತಗಳ ಅಂತರದಿಂದ ಆಯ್ಕೆ ಆಗಬೇಕಿದ್ದ ಶಾಸಕರು ಅಲ್ಪಮತಗಳಿಂದ ಗೆಲುವು ಸಾಧಿಸಿದ್ದಾರೆ ಎಂಬುದು ಅವರ ಅಂಬೋಣ. ತೀವ್ರ ಪೈಪೋಟಿ ನಡುವೆ ಅಧ್ಯಕ್ಷಗಾದಿ ಯಾರಿಗೆ ಒಲಿಯಲಿದೆ ಕಾದು ನೋಡಬೇಕಷ್ಟೆ.