ಗೆಲ್ಲಲೆಂದೇ ವಿಪ ಚುನಾವಣೆಗೆ ಸ್ಪರ್ಧೆ: ರಘುಪತಿ ಭಟ್

| Published : May 29 2024, 01:01 AM IST

ಸಾರಾಂಶ

ಭಾರತೀಯ ಜನತಾ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಸತತ 3 ಬಾರಿ ಶಾಸಕನಾಗಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಾತಿ ಕಾರಣಕ್ಕಾಗಿ ನನಗೆ ಬಿಜೆಪಿ ಟಿಕೆಟ್ ನೀಡಲಿಲ್ಲ. ನೈರುತ್ಯ ಪದವೀಧರರ ಕ್ಷೇತ್ರ ಟಿಕೆಟ್ ನೀಡುವುದಾಗಿ ಹೇಳಿ, ಟಿಕೆಟ್ ನೀಡಿಲ್ಲ. ಆದ್ದರಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ನೈರುತ್ಯ ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಟಿ.ರಘುಪತಿ ಭಟ್ ಹೇಳಿದ್ದಾರೆ.

- ನೈರುತ್ಯ ಪದವೀಧರರ ಕ್ಷೇತ್ರ ಟಿಕೆಟ್‌ ನೀಡದಿದ್ದರಿಂದ ಪಕ್ಷೇತರನಾಗಿ ಸ್ಪರ್ಧೆ

- ಉಡುಪಿ ಕ್ಷೇತ್ರದಲ್ಲಿ ಸತತ 3 ಬಾರಿ ಶಾಸಕನಾಗಿ ಕ್ಷೇತ್ರ ಅಭಿವೃದ್ಧಿಗೆ ಶ್ರಮ - - - ಕನ್ನಡಪ್ರಭ ವಾರ್ತೆ, ಚನ್ನಗಿರಿ

ಭಾರತೀಯ ಜನತಾ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಸತತ 3 ಬಾರಿ ಶಾಸಕನಾಗಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಾತಿ ಕಾರಣಕ್ಕಾಗಿ ನನಗೆ ಬಿಜೆಪಿ ಟಿಕೆಟ್ ನೀಡಲಿಲ್ಲ. ನೈರುತ್ಯ ಪದವೀಧರರ ಕ್ಷೇತ್ರ ಟಿಕೆಟ್ ನೀಡುವುದಾಗಿ ಹೇಳಿ, ಟಿಕೆಟ್ ನೀಡಿಲ್ಲ. ಆದ್ದರಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ನೈರುತ್ಯ ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಟಿ.ರಘುಪತಿ ಭಟ್ ಹೇಳಿದರು.

ಮಂಗಳವಾರ ಪಟ್ಟಣದ ಆರ್.ಎಚ್.ಎಂ. ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಈ ಕ್ಷೇತ್ರದಿಂದ ಆಯನೂರು ಮಂಜುನಾಥ್ ಅವರನ್ನು ವಿ.ಪ. ಸದಸ್ಯರನ್ನಾಗಿ ಮಾಡಿದ್ದೆವು. ಅನಂತರ ಕೆಲ ರಾಜಕೀಯ ಕಾರಣಗಳಿಂದ ಅವರು ರಾಜಿನಾಮೆ ನೀಡಿದರು. ಆಮೇಲೆ ಈ ನೈರುತ್ಯ ಪದವೀಧರ ಕ್ಷೇತ್ರದಿಂದ ನನಗೆ ಟಿಕೆಟ್ ನೀಡುವ ಭರವಸೆ ಬಿಜೆಪಿಯ ವರಿಷ್ಠರು ನೀಡಿದ್ದರು. ಅದರಂತೆ ಈ ಕ್ಷೇತ್ರದಲ್ಲಿ ಓಡಾಟ ನಡೆಸಿದ್ದೆ. ಆದರೆ ನನಗೆ ಟಿಕೆಟ್ ನೀಡದಿದ್ದರೂ ಬೇಡ, ಪಕ್ಷದ ಹಿರಿಯ ಕಾರ್ಯಕರ್ತರಿಗೆ ಟಿಕೆಟ್ ನೀಡಿದ್ದರೆ ಸುಮ್ಮನಿರುತ್ತಿದ್ದೆ. ಕಳೆದ ಒಂದೂವರೆ ವರ್ಷದಿಂದ ಬಿಜೆಪಿಗೆ ಬಂದಿರುವ ಡಾ.ಧನಂಜಯ ಸರ್ಜಿ ಅವರಿಗೆ ಪಕ್ಷ ಟಿಕೆಟ್ ನೀಡಿದೆ. ಇದರಿಂದಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧಿಸಿದ್ದೇನೆ. ಯಾರನ್ನೋ ಸೋಲಿಸಲು ಅಥವಾ ಗೆಲ್ಲಿಸುವುದಕ್ಕಾಗಿ ಚುನಾವಣೆಗೆ ಸ್ಪರ್ಧಿಸಿಲ್ಲ. ಸ್ವತಃ ನಾನೇ ಗೆಲ್ಲುವುದಕ್ಕಾಗಿ ಸ್ಪರ್ಧಿಸಿದ್ದೇನೆ ಎಂದರು.

ಪಕ್ಷೇತರ ಅಭ್ಯರ್ಥಿಯಾದ ನನ್ನ ಕ್ರಮ ಸಂಖ್ಯೆ 7 ಆಗಿದೆ. ಈ ಭಾಗದ ಪದವೀಧರ ಮತದಾರರು ನನಗೆ ಮತ ನೀಡಿ ವಿಧಾನ ಪರಿಷತ್ತು ಸದಸ್ಯನನ್ನಾಗಿ ಆಯ್ಕೆ ಮಾಡಬೇಕು. ಗೆದ್ದರೆ ವಿ.ಪ.ನಲ್ಲಿ ಪದವೀಧರರ ಧ್ವನಿಯಾಗಿ ಕೆಲಸ ಮಾಡುತ್ತೇನೆ. ಒಂದು ಬಾರಿ ಅವಕಾಶ ನೀಡಿ. ನೈರುತ್ಯ ಪದವೀಧರರ ಕ್ಷೇತ್ರದಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳಲ್ಲಿ ಉತ್ತಮ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಸುರೇಶಾಚಾರ್, ನಾರಾಯಣ್, ನಾಗರಾಜ್, ಕೃಷ್ಣಪ್ಪ, ಶ್ರೀಕಾಂತ್ ಹಾಜರಿದ್ದರು.

- - - ಬಾಕ್ಸ್ ಐಟಂರಾಜಕೀಯಕ್ಕಾಗಿ ಅಧಿಕಾರಿಗಳ ಅಮಾನತು ಸಲ್ಲದು ಲಾಕಪ್ ಡೆತ್ ಆಗಿದೆ ಎಂದು ಕಳೆದ ಶುಕ್ರವಾರ ಚನ್ನಗಿರಿ ಪೊಲೀಸ್ ಠಾಣೆ, ಸಿಬ್ಬಂದಿ ಮೇಲೆ ಮುಸ್ಲಿಂಮರು ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸರ ವಾಹನಗಳನ್ನು ಜಖಂಗೊಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದ ಡಿವೈಎಸ್‌ಪಿ ಮತ್ತು ಸಿಪಿಐ ಅವರನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿದೆ. ಇದು ಸರಿಯಾದ ಕ್ರಮವಲ್ಲ ಎಂದು ನೈರುತ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿ ಟಿ.ರಘುಪತಿ ಭಟ್ ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಒಂದು ಸಮುದಾಯದ ಓಲೈಕೆ ಮಾಡಲು ಪ್ರಯತ್ನಿಸುತ್ತಿದೆ. ಪ್ರಕರಣ ಸಂಬಂಧ ಯಾವುದೇ ತನಿಖೆಗಳನ್ನು ನಡೆಸದೇ, ವರದಿಗಳನ್ನು ಪರಿಶೀಲಿಸದೇ ಏಕಾಏಕಿಯಾಗಿ ಇಬ್ಬರು ದಕ್ಷ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ. ರಾಜಕಾರಣಕ್ಕಾಗಿ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳದೇ ಸತ್ಯಾಸತ್ಯತೆಗಳ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

- - - -28ಕೆಸಿಎನ್‌ಜಿ1:

ಚನ್ನಗಿರಿಯಲ್ಲಿ ಉಡುಪಿ ಕ್ಷೇತ್ರದ ಮಾಜಿ ಶಾಸಕ, ನೈರುತ್ಯ ಪದವೀಧರ ಕ್ಷೇತ್ರ ಪಕ್ಷೇತರ ಅಭ್ಯರ್ಥಿ ಟಿ.ರಘುಪತಿ ಭಟ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.