ಸಂಡೂರು ಉಪ ಚುನಾವಣೆಯ ಟಿಕೆಟ್‌ಗೆ ಬಿಜೆಪಿಯಲ್ಲಿ ಶುರುವಾಗಿದೆ ಪೈಪೋಟಿ

| Published : Aug 23 2024, 01:05 AM IST

ಸಂಡೂರು ಉಪ ಚುನಾವಣೆಯ ಟಿಕೆಟ್‌ಗೆ ಬಿಜೆಪಿಯಲ್ಲಿ ಶುರುವಾಗಿದೆ ಪೈಪೋಟಿ
Share this Article
  • FB
  • TW
  • Linkdin
  • Email

ಸಾರಾಂಶ

ಆಡಳಿತಾರೂಢ ಕಾಂಗ್ರೆಸ್ಸಿಗಿಂತಲೂ ಬಿಜೆಪಿಯಲ್ಲಿನ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ.

ಮಂಜುನಾಥ ಕೆ.ಎಂ.

ಬಳ್ಳಾರಿ: ಈ ಹಿಂದೆ ಶಾಸಕರಾಗಿದ್ದ ಈ.ತುಕಾರಾಂ ಲೋಕಸಭಾ ಪ್ರವೇಶಿಸಿದ ಬಳಿಕ ತೆರವಾದ ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕಮಲ ಪಾಳಯದ ಆಕಾಂಕ್ಷಿಗಳು ತೆರೆಮರೆಯ ಸಿದ್ಧತೆ ಆರಂಭಿಸಿದ್ದಾರೆ. ಆಡಳಿತಾರೂಢ ಕಾಂಗ್ರೆಸ್ಸಿಗಿಂತಲೂ ಬಿಜೆಪಿಯಲ್ಲಿನ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಯುವ ಸಾಧ್ಯತೆ ನಿಚ್ಚಳವಾಗಿದೆ. ಪಕ್ಷದ ಜಿಲ್ಲಾಧ್ಯಕ್ಷರೇ ಅಧಿಕೃತವಾಗಿ ನೀಡಿರುವ ಮಾಹಿತಿ ಪ್ರಕಾರ 15ಕ್ಕೂ ಹೆಚ್ಚು ಜನರು ಸಂಡೂರು ಉಪ ಚುನಾವಣೆಯ ಅಖಾಡಕ್ಕಿಳಿಯಲು ಅವಕಾಶ ನೀಡುವಂತೆ ಕೋರಿಕೆ ಇಟ್ಟಿದ್ದಾರೆ.

ಈ ಪೈಕಿ ಮಾಜಿ ಸಂಸದ ವೈ.ದೇವೇಂದ್ರಪ್ಪ, ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಜಿತಗೊಂಡಿರುವ ಕೆ.ಎಸ್. ದಿವಾಕರ, ಶಿಲ್ಪಾ ರಾಘವೇಂದ್ರ ಸೇರಿದಂತೆ ಸ್ಥಳೀಯ ಪಕ್ಷದ ನಾಯಕರು ಟಿಕೆಟ್ ಕೋರಿ ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಕಮಲ ಪಕ್ಷದಲ್ಲಿ ಟಿಕೆಟ್‌ಗಾಗಿ ಜಿದ್ದಾಜಿದ್ದು ಇದೆ.

ಈಗಾಗಲೇ ಅರ್ಜಿ ಸಲ್ಲಿಸಿದವರು ಪಕ್ಷದ ವರಿಷ್ಠರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಂಸದ ವೈ.ದೇವೇಂದ್ರಪ್ಪ ಸಂಡೂರು ಉಪ ಚುನಾವಣೆಗೆ ಪಕ್ಷ ತನ್ನನ್ನು ಪರಿಗಣಿಸುತ್ತದೆ ಎಂಬ ನಂಬಿಕೆಯಲ್ಲಿದ್ದರೆ, ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಕೃಪೆಯಿಂದ ಟಿಕೆಟ್ ದಕ್ಕುತ್ತದೆ; ಜನಾರ್ಶೀವಾದವೂ ಸಿಗುತ್ತದೆ ಎಂಬ ವಿಶ್ವಾಸ ಕೆ.ಎಸ್.ದಿವಾಕರದ್ದು. ಉಳಿದ ಆಕಾಂಕ್ಷಿಗಳು ತಮ್ಮದೇ ಆದ ಪಕ್ಷದ ಸಂಪರ್ಕಗಳನ್ನು ಬಳಸಿಕೊಂಡು ಟಿಕೆಟ್ ದಕ್ಕಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಸಂಡೂರು ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಸಹ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಪಕ್ಷ ಕೊನೆ ಗಳಿಗೆಯಲ್ಲಿ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮವಾಗುತ್ತದೆ. ಈಗಾಗಲೇ ಕಳೆದ ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಸೋಲುಂಡಿರುವ ಶ್ರೀರಾಮುಲು ಅವರನ್ನು ಕಣಕ್ಕಿಳಿಸಿದರೂ ಅಚ್ಚರಿಯಿಲ್ಲ ಎನ್ನುತ್ತವೆ ಪಕ್ಷದ ಉನ್ನತ ಮೂಲಗಳು.

ಕಾಂಗ್ರೆಸ್ಸಿನ ಭದ್ರಕೋಟೆ ಎಂದೇ ಪರಿಗಣಿಸಲಾಗಿರುವ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಈವರೆಗೆ ಗೆಲುವಿನ ರುಚಿ ನೋಡಿಲ್ಲ. ಈ ಹಿಂದಿನಿಂದಲೂ ಕಾಂಗ್ರೆಸ್‌ ಅಭ್ಯರ್ಥಿಗಳನ್ನೇ ಇಲ್ಲಿನ ಮತದಾರರು ಹೆಚ್ಚು ಬಾರಿ ಚುನಾಯಿಸಿಕೊಂಡು ಬಂದಿದ್ದಾರೆ. ಕ್ಷೇತ್ರ ವಿಂಗಡಣೆ ಬಳಿಕ ಈ.ತುಕಾರಾಂ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಗೊಂಡು ಗಮನ ಸೆಳೆದಿದ್ದಾರೆ. ಇದೀಗ ಸಂಸದರಾಗಿ ಲೋಕಸಭೆ ಪ್ರವೇಶಿಸಿದ್ದರೂ ಸಚಿವ ಸಂತೋಷ್‌ ಲಾಡ್, ಸಂಸದ ತುಕಾರಾಂ ಅವರ ಹಿಡಿತದಲ್ಲಿರುವ ಕ್ಷೇತ್ರದಲ್ಲಿ ಕೈ ಅಭ್ಯರ್ಥಿಗೆ ಗೆಲುವಿನ ಅವಕಾಶ ಹೆಚ್ಚು ಎಂಬ ವಿಶ್ವಾಸ ಪಕ್ಷದ ನಾಯಕರದ್ದು.

ಹೀಗಾಗಿಯೇ ಸಂಸದ ತುಕಾರಾಂ ಪುತ್ರಿ ಚೈತನ್ಯಾ ಅವರನ್ನು ಅಖಾಡಕ್ಕಿಳಿಸಲು ಸಜ್ಜಾಗಿದ್ದಾರೆ. ಆದರೆ, ಪಕ್ಷದಲ್ಲಿ ಕೆಲವರದ್ದು ಇದಕ್ಕೆ ವಿರೋಧವಿದ್ದು, ಹೊಸಬರಿಗೆ ಅವಕಾಶ ನೀಡಬೇಕು ಎಂಬ ಒತ್ತಾಯಗಳು ಕೇಳಿ ಬಂದಿವೆ. ಏತನ್ಮಧ್ಯೆ, ಕೈ ಟಿಕೆಟ್ ಯಾರಿಗೆ ದಕ್ಕುತ್ತದೆ ಎಂಬ ಕುತೂಹಲವೂ ಇದೆ.

ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ನಾನು ಪ್ರಬಲ ಆಕಾಂಕ್ಷಿ. ಈಗಾಗಲೇ ಅರ್ಜಿ ಸಲ್ಲಿಸಿರುವೆ. ನನ್ನದೇ ಆದ ಪ್ರಯತ್ನ ಮಾಡುತ್ತಿದ್ದೇನೆ. ಪಕ್ಷ ನನ್ನನ್ನು ಪರಿಗಣಿಸುತ್ತದೆ ಎಂಬ ಪೂರ್ಣ ವಿಶ್ವಾಸವಿದೆ ಎನ್ನುತ್ತಾರೆ ಮಾಜಿ ಸಂಸದ ವೈ.ದೇವೇಂದ್ರಪ್ಪ.

ಸಂಡೂರು ಉಪ ಚುನಾವಣೆಗೆ ಟಿಕೆಟ್ ಕೋರಿ ವೈ.ದೇವೇಂದ್ರಪ್ಪ, ಕೆ.ಎಸ್. ದಿವಾಕರ ಸೇರಿದಂತೆ 15ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಪಕ್ಷದ ವರಿಷ್ಠರಿಗೆ ಕಳಿಸಿಕೊಡಲಾಗಿದೆ. ಮುಂದಿನ ತೀರ್ಮಾನ ಪಕ್ಷ ತೆಗೆದುಕೊಳ್ಳುತ್ತದೆ ಎನ್ನುತ್ತಾರೆ ಬಳ್ಳಾರಿ ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕಾ.