ಕೆರೆ ಕೋಡಿ ಬಿದ್ದು ಕಚವಿ ಗ್ರಾಮಕ್ಕೆ ನುಗ್ಗಿದ ನೀರು

| Published : Aug 23 2024, 01:05 AM IST

ಕೆರೆ ಕೋಡಿ ಬಿದ್ದು ಕಚವಿ ಗ್ರಾಮಕ್ಕೆ ನುಗ್ಗಿದ ನೀರು
Share this Article
  • FB
  • TW
  • Linkdin
  • Email

ಸಾರಾಂಶ

ನಿರಂತರ ಮಳೆಯಿಂದಾಗಿ ತಾಲೂಕಿನ ಕಚವಿ ಗ್ರಾಮದ ಕೊಪ್ಪದ ಕೆರೆ ಕೋಡಿ ಬಿದ್ದು ಗ್ರಾಮಕ್ಕೆ ನೀರು ನುಗ್ಗಿದ ಪರಿಣಾಮ ಸಂಪೂರ್ಣ ಗ್ರಾಮವೇ ಜಲಾವೃತಗೊಂಡಿದ್ದು, ಗ್ರಾಮಸ್ಥರು ಭಯದಲ್ಲಿಯೇ ನಿತ್ಯ ಜೀವನ ನಡೆಸುವಂತಾಗಿದೆ.

ಹಿರೇಕೆರೂರು: ನಿರಂತರ ಮಳೆಯಿಂದಾಗಿ ತಾಲೂಕಿನ ಕಚವಿ ಗ್ರಾಮದ ಕೊಪ್ಪದ ಕೆರೆ ಕೋಡಿ ಬಿದ್ದು ಗ್ರಾಮಕ್ಕೆ ನೀರು ನುಗ್ಗಿದ ಪರಿಣಾಮ ಸಂಪೂರ್ಣ ಗ್ರಾಮವೇ ಜಲಾವೃತಗೊಂಡಿದ್ದು, ಗ್ರಾಮಸ್ಥರು ಭಯದಲ್ಲಿಯೇ ನಿತ್ಯ ಜೀವನ ನಡೆಸುವಂತಾಗಿದೆ.

ಗ್ರಾಮದ ಸಮೀಪ ಕೊಪ್ಪದ ಕೆರೆ ಇದ್ದು, ನಿರಂತರ ಮಳೆಗೆ ಸಂಪೂರ್ಣವಾಗಿ ತುಂಬಿ ಕೆರೆ ಕೋಡಿ ಬಿದ್ದು ನೀರು ಗ್ರಾಮಕ್ಕೆ ನುಗ್ಗಿದೆ. ಗ್ರಾಮದ ಜನರು ನಿದ್ದೆಗೆಟ್ಟು ಮನೆಯಿಂದ ನೀರು ಹೊರ ಹಾಕುತ್ತಿದ್ದಾರೆ. ಗ್ರಾಮದ ಪ್ರಮುಖ ರಸ್ತೆಗಳ ಮೇಲೆ ಕೆರೆಯ ನೀರು ಹಳ್ಳದಂತೆ ಹರಿಯುತ್ತಿದ್ದು, ಸುಮಾರು ೩೦ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿವೆ. ಕೆರೆ ನೀರು ನಮ್ಮ ಮನೆಗಳಿಗೆ ನುಗ್ಗುತ್ತಿದ್ದು, ಹಗಲು-ರಾತ್ರಿ ಎನ್ನದೇ ನೀರು ಹೊರಹಾಕುತಿದ್ದೇವೆ. ಮನೆಯಲ್ಲಿನ ದವಸ-ಧಾನ್ಯದ ಚೀಲಗಳು ನೀರಲ್ಲಿ ದಿನವೂ ನೆನೆಯುತ್ತಿವೆ. ಅಡುಗೆ ಮಾಡಿಕೊಂಡು ಊಟ ಮಾಡುವುದೂ ಕಷ್ಟವಾಗಿದೆ. ಮನೆಯಲ್ಲಿ ವಯಸ್ಸಾದವರು ಇದ್ದಾರೆ. ಮನೆಯ ಗೋಡೆಗಳು ಕುಸಿಯುವ ಭೀತಿ ಎದುರಾಗಿದ್ದು, ಯಾವಾಗ ಏನು ಆಘಾತ ಕಾದಿದೆಯೋ ಏನೋ ಎಂದು ತಲೆ ಮೇಲೆ ಕೈಹೊತ್ತು ಕೂರುವುದಾಗಿದೆ ಎಂದು ಗ್ರಾಮದ ಫಕ್ಕೀರಪ್ಪ ಗೊಂದಿ ಅಳಲು ತೋಡಿಕೊಂಡರು. ಈ ಕೆರೆಗೆ ಮಡ್ಲೂರ ಏತ ನೀರಾವರಿಯಿಂದ ಒಂದು ತಿಂಗಳ ಮೊದಲೇ ನೀರು ತುಂಬಿಸಲಾಗಿತ್ತು. ಆಮೇಲೆ ಮಳೆಯೂ ಹೆಚ್ಚಾಗಿದ್ದರಿಂದ ಕೆರೆಯ ಕೋಡಿ ನೀರು ನಿರಂತರವಾಗಿ ಹರಿದು ಗ್ರಾಮದೊಳಗೆ ನುಗ್ಗಿದೆ. ಈಗ ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ನೀರಿನ ಹರಿವನ್ನು ತಗ್ಗಿಸಲು ಸಾಧ್ಯವಾಗುತ್ತಿಲ್ಲ. ನಿರಾಶ್ರಿತರಿಗೆ ತೊಂದರೆಯಾಗಬಾರದೆಂದು ಮುಂಜಾಗ್ರತೆಯಾಗಿ ಶಾಲೆಯಲ್ಲಿ ಕೊಠಡಿಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಮೇಲಧಿಕಾರಿಗಳ ಸೂಚನೆ ಮೇರೆಗೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಪಿಡಿಒ ಪರಮೇಶಪ್ಪ ಗಿರಿಯಣ್ಣನವರ ತಿಳಿಸಿದರು.ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ: ನಮ್ಮೂರಿನ ಕೆರೆಯ ನೀರು ರಸ್ತೆಯುದ್ದಕ್ಕೂ ಮೊಣಕಾಲು ದಪ್ಪ ಹರಿಯುವುದರಿಂದ ಶಾಲೆಗೆ ಹೋಗುವ ಮಕ್ಕಳಿಗೆ ತುಂಬಾ ತೊಂದರೆಯಾಗಿದೆ. ಹೀಗಾಗಿ ಮಕ್ಕಳನ್ನು ಟ್ರ್ಯಾಕ್ಟರ್‌ಗಳಲ್ಲಿ ಶಾಲೆಗೆ ಕಳುಹಿಸಲಾಗುತ್ತಿದೆ. ಮನೆಗೆ ನೀರು ನುಗ್ಗದಂತೆ ಎಲ್ಲರೂ ತಮ್ಮ ಮನೆಗಳ ಮುಂಭಾಗ ಒಡ್ಡುಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಆದರೂ ನೀರಿನ ಹರಿವು ಹೆಚ್ಚಾಗಿ ಮನೆಗಳಿಗೆ ನುಗ್ಗುತ್ತಿದೆ. ಯಾವ ಅಧಿಕಾರಿಗಳೂ ಇತ್ತ ಗಮನ ಹರಿಸುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಮಂಜೂ ಮೂಡಿ ಆಕ್ರೋಶ ವ್ಯಕ್ತಪಡಿಸಿದರು. ಈ ಕೆರೆಯ ಕೋಡಿ ನೀರು ಹರಿಯಲು ಸಣ್ಣ ನೀರಾವರಿ ಯೋಜನೆಯಿಂದ ಗ್ರಾಮದೊಳಗೆ ರಾಜಕಾಲುವೆ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಈ ಸಮಸ್ಯೆ ಎದುರಾಗಿದೆ. ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಹಾಗೂ ಪಿಡಿಒಗೆ ಇದಕ್ಕೆ ಪರಿಹಾರ ಕಂಡುಕೊಳ್ಳಲು ಸೂಚಿಸಲಾಗಿದೆ ತಹಸೀಲ್ದಾರ್‌ ಎಚ್‌. ಪ್ರಭಾಕರಗೌಡ ಹೇಳಿದರು.