ಸಾರಾಂಶ
ರೈತರ ಜಮೀನು ಒತ್ತುವರಿ ಮಾಡಿಕೊಂಡ ನಂತರ ಪರಿಹಾರ ನೀಡಲು ವಿಳಂಬ ಮಾಡಿದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ರೈತರು ಬೆಳಗಾವಿ ಉಪವಿಭಾಗಾಧಿಕಾರಿ ಕಚೇರಿ ಪೀಠೋಪಕರಣ ಜಪ್ತಿ ಮಾಡಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ರೈತರ ಜಮೀನು ಒತ್ತುವರಿ ಮಾಡಿಕೊಂಡ ನಂತರ ಪರಿಹಾರ ನೀಡಲು ವಿಳಂಬ ಮಾಡಿದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ರೈತರು ಬೆಳಗಾವಿ ಉಪವಿಭಾಗಾಧಿಕಾರಿ ಕಚೇರಿ ಪೀಠೋಪಕರಣ ಜಪ್ತಿ ಮಾಡಿದರು.ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ವಿಸ್ತರಣೆಗೆ 2008ರಲ್ಲಿ ರೈತರ 270 ಎಕರೆ ಜಮೀನನ್ನು ಜಿಲ್ಲಾಡಳಿತ ವಶಕ್ಕೆ ಪಡೆದುಕೊಂಡಿತ್ತು. ನಂತರ ವಿಮಾನ ನಿಲ್ದಾಣದ ವಿಸ್ತರಣೆ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳು ನಡೆದು ವರ್ಷಗಳೇ ಕಳೆದರೂ ಈವರೆಗೂ ರೈತರಿಗೆ ಪರಿಹಾರ ನೀಡಿಲ್ಲ. ರೈತರಿಂದ ವಶಕ್ಕೆ ಪಡೆದಿದ್ದ ಜಮೀನಿಗೆ ಎಕರೆಗೆ ₹ 2 ಲಕ್ಷ ಪರಿಹಾರ ನಿಗದಿ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ರೈತರು 2011 ರಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ್ದ ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಲಯ 2018ರಲ್ಲಿ ಒಂದು ಗುಂಟೆ ಜಮೀನಿಗೆ ₹ 40 ಸಾವಿರ ಪರಿಹಾರ ನೀಡುವಂತೆ ಆದೇಶ ಹೊರಡಿಸಿತ್ತು.
ನ್ಯಾಯಾಲಯದ ಆದೇಶ ಇದ್ದರೂ ಸರ್ಕಾರ ಈವರೆಗೂ ರೈತರಿಗೆ ಪರಿಹಾರ ನೀಡದೆ ವಿಳಂಬ ನೀತಿ ಅನುಸರಿಸುತ್ತಿದೆ. ಜೊತೆಗೆ ಕೋರ್ಟ್ ಕೂಡ ಎಸಿ ಕಚೇರಿ ಪೀಠೋಪಕರಣ ಜಪ್ತಿ ಮಾಡುವಂತೆ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ರೈತರು ಬುಧವಾರ ಬೆಳಗಾವಿ ಡಿಸಿ ಕಚೇರಿ ಆವರಣದಲ್ಲಿನ ಉಪವಿಭಾಗಧಿಕಾರಿ ಕಚೇರಿಯ ಕಂಪ್ಯೂಟರ್, ಪ್ರಿಂಟರ್ ಸೇರಿದಂತೆ ಅಗತ್ಯ ವಸ್ತುಗಳನ್ನು ಹೊತ್ತೊಯ್ದು ಅಧಿಕಾರಿಗಳ ನಡೆಗೆ ರೈತರು ಅಸಮಾಧಾನ ಹೊರಹಾಕಿದರು.