ಕರ ವಸೂಲಿಗಾರ ಆತ್ಮಹತ್ಯೆಗೆ ಯತ್ನ

| Published : Aug 23 2024, 01:05 AM IST

ಸಾರಾಂಶ

Debt collector attempts suicide

- ದೇವಾಪುರ ಗ್ರಾಮ ಪಂಚಾಯಿತಿ ಕರವಸೂಲಿಗಾರನಿಂದ ವಿಷ ಪ್ರಾಷನ । ಪಿಡಿಒ, ಅಧ್ಯಕ್ಷರ ವಿರುದ್ಧ ಕ್ರಮಕ್ಕೆ ಒತ್ತಾಯ

------

ಕನ್ನಡಪ್ರಭ ವಾರ್ತೆ ಸುರಪುರ

ಸ್ಥಳೀಯ ಪಂಚಾಯಿತಿಯಿಂದ ಸಂಗ್ರಹಿಸಿದ ಕರ ವಸೂಲಿ ಮೊತ್ತವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರ ಮೇರೆಗೆ ಗ್ರಾಮಗಳಲ್ಲಿ ಮಾಡಿದ ಕಾಮಗಾರಿ ಮತ್ತಿತರ ಕೆಲಸಗಳಿಗೆ ವಿನಿಯೋಗಿಸಿದ ಮೊತ್ತವನ್ನು ಹಿಂದಿರುಗಿಸದಿದ್ದರಿಂದ ಮನನೊಂದ ಕರ ವಸೂಲಿಗಾರರೊಬ್ಬರು ಬುಧವಾರ ವಿಷ ಪ್ರಾಷನ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ತಾಲೂಕಿನ ದೇವಾಪುರ ಗ್ರಾಮ ಪಂಚಾಯಿತಿ ಕರ ವಸೂಲಿಗಾರ ಯಲ್ಲಪ್ಪ (45) ಆತ್ಮಹತ್ಯೆಗೆ ಯತ್ನಿಸಿದವರು. ವಿಷ ಕುಡಿದ ಬಳಿಕ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ. ಕೂಡಲೇ ನಾಲ್ಕೈದು ಜನ ಸ್ಥಳಕ್ಕೆ ಹೋಗಿ ಕಾರಿನಲ್ಲಿ ಹಾಕಿಕೊಂಡು ತಾಲೂಕು ಆಸ್ಪತ್ರೆಗೆ ಕರೆದು ತಂದು ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಘಟನೆ ಹಿನ್ನೆಲೆ:

ಯಡ್ಡಿಹಳ್ಳಿ ನಿವಾಸಿ ಯಲ್ಲಪ್ಪ ಅವರು ದೇವಾಪುರ ಗ್ರಾಪಂನಲ್ಲಿ 10 ವರ್ಷಗಳಿಂದ ಕರ ವಸೂಲಿಗಾರನೆಂದು ಕೆಲಸ ಮಾಡುತ್ತಿದ್ದಾರೆ. 2022-23, 2024-25ರ ಸಾಲಿನಲ್ಲಿ ಸಂಗ್ರಹಿಸಿದ ಕರ ವಸೂಲಿ ಹಣವನ್ನು ಗ್ರಾಮ ಪಂಚಾಯಿತಿ ಬ್ಯಾಂಕ್ ಖಾತೆಗೆ ಪಾವತಿಸಬೇಕು.

ಆದರೆ, ಪಿಡಿಒ ಮತ್ತು ಅಧ್ಯಕ್ಷರ ಸೂಚನೆಯಂತೆ ಗ್ರಾಮ ಪಂಚಾಯಿತಿ ಕಾಮಗಾರಿಗಳಾದ ವಿದ್ಯುತ್, ಚರಂಡಿ, ಪೈಪ್‌ಲೈನ್ ದುರಸ್ತಿ, ಗ್ರಾಮ ಪಂಚಾಯಿತಿ ದುರಸ್ತಿ, ಸರ್ಕಾರಿ ಯೋಜನೆ ಕಾರ್ಯಕ್ರಮಗಳ ವೆಚ್ಚ ಸೇರಿದಂತೆ ವಿವಿಧ ಕೆಲಸಗಳಿಗೆ 3,70,495 ರು.ಗಳ ಬಳಸಿದ್ದಾರೆ.

ಕರ ವಸೂಲಿಗಾರ ಹಣವನ್ನು ಮರಳಿ ನೀಡುವಂತೆ ಪರಿಪರಿಯಾಗಿ ಬೇಡಿದರೂ, ಪಿಡಿಒ ಮತ್ತು ಅಧ್ಯಕ್ಷರು, "ನಾವೇನೂ ಎಲ್ಲೂ ಹೋಗಲ್ಲ. ಇಲ್ಲೇ ಇರುತ್ತೇವೆ. ಕೊಡೋಣ ಬಿಡು. " ಎಂಬುದಾಗಿ ಹೇಳುತ್ತಾ ದುರ್ವರ್ತನೆ ಮತ್ತು ದರ್ಪ ಮೆರೆದಿದ್ದಾರೆ. ಕೈಸಾಲ ಮಾಡಿಯೂ ಕೆಲವು ಕಾಮಗಾರಿಗಳಿಗೆ ಹಣ ಹೊಂದಿಸಿದ್ದಾನೆ ಕರವಸೂಲಿಗಾರ. ಪ್ರತಿ ಗ್ರಾಮ ಪಂಚಾಯಿತಿಯ ಖಾತೆಗೆ ಅನುದಾನ ಬಂದಾಗ ಪಿಡಿಒ ಹಾಗೂ ಅಧ್ಯಕ್ಷರು ಕಾಮಗಾರಿ ಮತ್ತು ದುರಸ್ತಿ ವೆಚ್ಚದ ಬಿಲ್ ಹಾಕಿ ಸ್ವಂತಕ್ಕೆ ಬಳಸಿಕೊಂಡಿದ್ದಾರೆ.

ದೇವಾಪುರ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಡಿಒ ವರ್ಗಾವಣೆಯಾಗಿದ್ದಾರೆ. ಹೋಗುವ ಮುನ್ನ ವೆಚ್ಚ ಕೇಳಿದಾಗ ಕರ ವಸೂಲಿಗಾರ ಕೇಳಿಕೊಂಡರೂ ಬರೆದುಕೊಟ್ಟಿಲ್ಲ. "ಹೀಗಾಗಿ, ಕರ ವಸೂಲಿಗಾರ ಇಷ್ಟೊಂದು ಲಕ್ಷದ ಸಾಲವನ್ನು ತೀರಿಸಲು ಸಾಧ್ಯವಿಲ್ಲ. ಸಮಾಜದಲ್ಲಿ ಮರ್ಯಾದೆ ಹೋಗುತ್ತದೆ ಎಂಬುದಾಗಿ ಎದುರಿ ವಿಷ ಪ್ರಾಷಣ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದೇನೆ. ಇದಕ್ಕೆ ಪಿಡಿಒ ಮತ್ತು ಅಧ್ಯಕ್ಷರೇ ಕಾರಣ ಎಂದು ಪೊಲೀಸರ ಮುಂದೆ ಕರ ವಸೂಲಿಗಾರ ಯಲ್ಲಪ್ಪ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

* ಮೊಬೈಲ್‌ನಲ್ಲಿ ಸಂದೇಶ:

ಬಿಲ್‌ ಕಲೆಕ್ಟರ್ ಸಿಬ್ಬಂದಿಗಳಿರುವ ವಾಟ್ಸಾಪ್ ಗ್ರೂಪ್‌ವೊಂದು ರಚಿಸಿಕೊಂಡಿಸಿದ್ದಾರೆ. ಈ ಗ್ರೂಪ್‌ನಲ್ಲಿ ಕರ ವಸೂಲಿಗಾರ ಯಲ್ಲಪ್ಪನವರು ತಮ್ಮ ಮೇಲಾಗುತ್ತಿರುವ ದೌರ್ಜನ್ಯವನ್ನು ಎಳೆಎಳೆಯಾಗಿ ಬರೆದು ಹಾಕಿದ್ದಾರೆ. ಅಲ್ಲದೆ ಯಾರದ್ದಾದರೂ ಜೀವವನ್ನು ಹೊಡೆಯಬೇಡಿ. ನನ್ನ ಜೀವ ಹೋದರೆ ಅದಕ್ಕೆ ಪಿಡಿಒ ಮತ್ತು ಅಧ್ಯಕ್ಷರು ನೇರ ಕಾರಣ ಎಂದು ಎರಡು ಮೆಸೇಜ್‌ ಹಾಕಿದ್ದಾರೆ.

ಖರ್ಚು ಮಾಡಿದ ಲೆಕ್ಕ:

ಅರಳಹಳ್ಳಿ, ದೇವಾಪುರ, ಮುಷ್ಠಳ್ಳಿ, ಶೆಳ್ಳಗಿ ಗ್ರಾಮಗಳಲ್ಲಿ ಮಾಡಿರುವ ಪ್ರತಿಯೊಂದು ಕಾಮಗಾರಿ ಲೆಕ್ಕವನ್ನು ಎರಡು ಪುಟದಲ್ಲಿ ಪಿಡಿಒ ದೇವೇಂದ್ರಪ್ಪ ಹಳ್ಳಿಯವರಿಗೆ 3,70,495 ರು.ಗಳು ಕೊಟ್ಟಿದ್ದಾರೆ. ಅದಕ್ಕೆ ಸ್ಪಂದಿಸಿಲ್ಲ. ಪಿಡಿಒ ಅವರನ್ನು ಅಮಾನತು ಮಾಡಬೇಕು. ಅಧ್ಯಕ್ಷರ ರಾಜೀನಾಮೆ ಪಡೆದು ಅವರ ಸದಸ್ಯತ್ವನ್ನು ರದ್ದು ಪಡಿಸಬೇಕು. ಸ್ವಂತಕ್ಕೆ ಬಳಸಿಕೊಂಡಿರುವ ಹಣವನ್ನು ವಸೂಲಿ ಮಾಡಬೇಕು ಎಂದು ಹಲವಾರು ಗ್ರಾಮ ಪಂಚಾಯಿತಿ ಸದಸ್ಯರು ಒತ್ತಾಯಿಸಿದ್ದಾರೆ.

--ಬಾಕ್ಸ್---

ತಾಪಂ ಅಧಿಕಾರಿ ಭೇಟಿ ನೀಡಿ ಆರೋಗ್ಯ ವಿಚಾರಣೆ

ಕಲಬುರಗಿಯ ಆಸ್ಪತ್ರೆಗೆ ತಾಪಂ ಅಧಿಕಾರಿ ಬಸವರಾಜ ಸಜ್ಜನ್ ಮತ್ತು ಪಿಡಿಒ ಸಂಘದ ತಾಲೂಕು ಅಧ್ಯಕ್ಷ ರಾಜಕುಮಾರ ಭೇಟಿ ನೀಡಿ ಕರ ವಸೂಲಿಗಾರ ಯಲ್ಲಪ್ಪನವರ ಆರೋಗ್ಯ ವಿಚಾರಿಸಿದರು. ಪತ್ರಿಕೆಯೊಂದಿಗೆ ಮಾತನಾಡಿದ ತಾಪಂ ಅಧಿಕಾರಿ ಬಸವರಾಜ ಸಜ್ಜನ್, ದೇವಾಪುರ ಗ್ರಾಪಂ ಪಿಡಿಒ ಮತ್ತು ಅಧ್ಯಕ್ಷರು ಮಾಡಿರುವ ಅಪರಾಧ ಕ್ಷಮಿಸಲಾರದಂತದ್ದು. ಕರ ವಸೂಲಿ ಮಾಡಿದ ಹಣವನ್ನು ಅಂದು ಬ್ಯಾಂಕ್ ಖಾತೆಗೆ ಹಾಕಬೇಕು. ಅಧಿಕಾರ ದುರಪಯೋಗ ಪಡಿಸಿಕೊಂಡು ಕರ ವಸೂಲಿಗಾರನಿಂದ ಹಣವನ್ನು ವಿವಿಧ ಕಾಮಗಾರಿಗಳಿಗೆ ಬಳಿಸಿದ್ದಾರೆ. ಇವರು ಮಾಡಿರುವ ತಪ್ಪಿನ ಕುರಿತು ಜಿಪಂ ಸಿಇಒ ಅವರಿಗೆ ವರದಿ ಸಲ್ಲಿಸಲಾಗಿದೆ. ಸಿಇಒ ಅವರಿಂದ ಬರುವ ಆದೇಶದಂತೆ ಕಾನೂನು ಕ್ರಮ ಕ್ರಮಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

-------

ಕರ ವಸೂಲಿಗಾರನಿಗೆ ಪಾವತಿಸಬೇಕಿರುವ ಮೊತ್ತವನ್ನು ಹಿಂದಿರುಗಿಸಿಕೊಡಿಸಲಾಗುವುದು. ಅಲ್ಲದೆ ಕರವಸೂಲಿಗಾರನ ಆರೋಗ್ಯಕ್ಕೆ ವೆಚ್ಚವಾಗುವ ಆಸ್ಪತ್ರೆಯ ಖರ್ಚನ್ನು ಸಂಪೂರ್ಣ ಭರಿಸಲಾಗುವುದು. ಗ್ರಾಪಂನಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಗೌರವಕ್ಕೆ ಧಕ್ಕೆ ಬರದಂತೆ ಸಂರಕ್ಷಣೆ ಮಾಡಲಾಗುತ್ತದೆ. ಸಿಬ್ಬಂದಿಗೆ ಯಾವುದೇ ತೊಂದರೆಯಾದರೂ ನಮ್ಮನ್ನು ಸಂಪರ್ಕಿಸಿದರೆ ಪರಿಹರಿಸಲು ಸಿದ್ಧನಿರುತ್ತೇನೆ. ಆಗದಿದ್ದರೆ ಮೇಲಧಿಕಾರಿಗಳಿಗೆ ತಿಳಿಸಿ ಸಮಸ್ಯೆ ಹೋಗಲಾಡಿಸುತ್ತೇನೆ ಎಂದು ತಿಳಿಸಿದರು.

.......ಕೋಟ್.....

ನಮಗೆ ಇಬ್ಬರು ಪುತ್ರರು, ಓರ್ವ ಪುತ್ರಿಯಿದ್ದಾಳೆ. ಪತಿಯ ಸಂಬಳದಿಂದಲೇ ಜೀವನ ನಡೆಯುತ್ತಿದೆ. ಕಳೆದ ಎರಡು ವರ್ಷದಿಂದಲೂ ಗ್ರಾಪಂಗಾಗಿ ಮಾಡಿದ ಸಾಲದ ಬಗ್ಗೆ ಚಿಂತಿಸುತ್ತಿದ್ದರು. ಜೀವ ಕಳೆದುಕೊಳ್ಳುವ ಮಟ್ಟಿಗೆ ಹೋಗಿದ್ದಾರೆ ಎಂದರೆ ಪಿಡಿಒ ಮತ್ತು ಅಧ್ಯಕ್ಷರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರ್ಕಾರ ತಮ್ಮ ಪತಿಯನ್ನು ಉಳಿಸಕೊಡಬೇಕು. ಇಲ್ಲದಿದ್ದರೆ ಮಕ್ಕಳ ಜತೆ ನಾವು ಆತ್ಮಹತ್ಯೆಗೆ ಯತ್ನಿಸಬೇಕಾಗುತ್ತದೆ.

-ನಾಗಮ್ಮ, ಕರವಸೂಲಿಗಾರ ಯಲ್ಲಪ್ಪನವರ ಪತ್ನಿ.

-------

....ಕೋಟ್....

ಪೊಲೀಸರನ್ನು ಆಸ್ಪತ್ರೆಗೆ ಕಳುಹಿಸಿ ಎಂಎನ್‌ಸಿ ಮಾಡಲಾಗಿದೆ. ಕರ ವಸೂಲಿಗಾರ ನೀಡಿರುವ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಕುಟುಂಬಸ್ಥರು, ಸಂಬಂಧಿಕರು ಬಂದು ದೂರು ನೀಡಿಲ್ಲ. ದೂರು ನೀಡಿದರೆ ಸ್ವೀಕರಿಸುತ್ತೇವೆ.:- ಆನಂದ ವಾಗ್ಮೋಡೆ, ಪೊಲೀಸ್ ಇನ್ಸ್ ಪೆಕ್ಟರ್, ಸುರಪುರ.

-----

ಫೋಟೊ:22ವೈಡಿಆರ್3: ಸುರಪುರ ನಗರದ ತಾಲೂಕಾಸ್ಪತ್ರೆಯಲ್ಲಿ ವಿಷ ಸೇವಿಸಿದ ಕರವಸೂಲಿಗಾರನಿಗೆ ಚಿಕಿತ್ಸೆ ನೀಡುತ್ತಿರುವುದು.

------

ಫೋಟೊ: 22ವೈಡಿಆರ್4: ಕಲಬುರಗಿಯ ಜಿಲ್ಲಾಸ್ಪತ್ರೆಯಲ್ಲಿ ಕರವಸೂಲಿಗಾರನನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿದ್ದ ಸ್ಥಳಕ್ಕೆ ತಾಪಂ ಅಧಿಕಾರಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.