ಶ್ರೀತಪಸ್ವಿರಾಯಸ್ವಾಮಿ ದೇಗುಲದಲ್ಲಿ ‘ಮನೆ ಕೆಲಸದ ಮಹಿಳೆ’ಯಿಂದ ಪೂಜೆ..!

| Published : Aug 23 2024, 01:05 AM IST

ಶ್ರೀತಪಸ್ವಿರಾಯಸ್ವಾಮಿ ದೇಗುಲದಲ್ಲಿ ‘ಮನೆ ಕೆಲಸದ ಮಹಿಳೆ’ಯಿಂದ ಪೂಜೆ..!
Share this Article
  • FB
  • TW
  • Linkdin
  • Email

ಸಾರಾಂಶ

ನಾಗಮಂಗಲ ತಾಲೂಕು ದೇವರಹಳ್ಳಿ ಗ್ರಾಮದಲ್ಲಿರುವ ಶ್ರೀತಪಸ್ವಿರಾಯಸ್ವಾಮಿ ದೇವಾಲಯದಲ್ಲಿ ಪುರುಷ ಅರ್ಚಕರ ಗೈರಿನಲ್ಲಿ ಅವರ ಮನೆಕೆಲಸ ಮಾಡುವ ಮಹಿಳೆಯಿಂದ ದೇವರಿಗೆ ಪೂಜೆ ಸಲ್ಲಿಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಾಗಮಂಗಲ ತಾಲೂಕು ದೇವರಹಳ್ಳಿ ಗ್ರಾಮದಲ್ಲಿರುವ ಶ್ರೀತಪಸ್ವಿರಾಯಸ್ವಾಮಿ ದೇವಾಲಯದಲ್ಲಿ ಪುರುಷ ಅರ್ಚಕರ ಗೈರಿನಲ್ಲಿ ಅವರ ಮನೆಗೆಲಸ ಮಾಡುವ ಮಹಿಳೆಯಿಂದ ದೇವರಿಗೆ ಪೂಜೆ ಸಲ್ಲಿಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.

ಶ್ರಾವಣ ಶನಿವಾರದ ದಿನದಂದು ಮನೆಗೆಲಸ ಮಾಡುವ ಮಹಿಳೆ ಗರ್ಭಗುಡಿ ಪ್ರವೇಶಿಸಿ ಪೂಜೆ ಮಾಡಿರುವ ವೀಡಿಯೋವೊಂದನ್ನು ಭಕ್ತರು ಸಾಮಾಜಿಕ ಜಾಲ ತಾಣದಲ್ಲಿ ಹರಿಯಬಿಟ್ಟಿದ್ದಾರೆ. ಇದು ಸಾಕಷ್ಟು ವೈರಲ್ ಆಗಿದೆ. ಅಲ್ಲದೇ, ದೇವಸ್ಥಾನದ ಪೂಜಾ ವಿಧಿ-ವಿಧಾನಗಳನ್ನು ಸಮರ್ಪಕವಾಗಿ ನಡೆಸದಿರುವುದು, ದೇವಾಲಯದ ಹೆಸರಿನಲ್ಲಿದ್ದ ಜಮೀನನ್ನು ತಮ್ಮ ಹೆಸರಿಗೆ ಪರಭಾರೆ ಮಾಡಿಕೊಂಡಿರುವ ಕುರಿತು ತನಿಖೆ ನಡೆಸುವಂತೆ ಅನೇಕ ಭಕ್ತರು ದೇವಾಲಯದ ಅರ್ಚಕರ ವಿರುದ್ಧ ಪಾಂಡವಪುರ ಉಪವಿಭಾಗಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ಸುಮಾರು ೧೨೦೦ ವರ್ಷ ಇತಿಹಾಸ ಪ್ರಸಿದ್ಧ ದೇವಾಲಯವು ಮುಜರಾಯಿ ಇಲಾಖೆ ಅಧೀನದಲ್ಲಿದ್ದು ಮೈಸೂರು, ಬೆಂಗಳೂರು, ಮಂಡ್ಯ, ಶ್ರೀರಂಗಪಟ್ಟಣ, ರಾಮನಗರ, ಹಾಸನ, ತುಮಕೂರು ಸೇರಿದಂತೆ ಇತರೆಡೆಗಳಲ್ಲಿ ಅಪಾರ ಭಕ್ತ ಸಮೂಹವನ್ನು ಹೊಂದಿದೆ.

ಅರ್ಚಕರು ಬೆಳಗ್ಗೆ ಒಮ್ಮೆ ಪೂಜೆ ಮಾಡಿ ಬಾಗಿಲು ಹಾಕಿದರೆ ಮತ್ತೆ ದಿನಪೂರ್ತಿ ಬಾಗಿಲು ತೆರೆಯುವುದಿಲ್ಲ. ದೇಗುಲದ ಅರ್ಚಕ ಶ್ರೀನಿವಾಸಮೂರ್ತಿ ಅವರಿಗೆ ಶ್ರೀತಪಸ್ವಿರಾಯಸ್ವಾಮಿ ದೇವಾಲಯ ಮಾತ್ರವಲ್ಲದೇ ಸುತ್ತಮುತ್ತಲಿನ ಏಳೆಂಟು ದೇವಾಲಯಗಳ ಪೂಜಾ ಹೊಣೆಗಾರಿಕೆಯನ್ನು ನೀಡಲಾಗಿದೆಯಂತೆ. ಅವರಿಲ್ಲದಿದ್ದ ಸಮಯದಲ್ಲಿ ಮನೆಗೆಲಸ ಮಾಡುವ ಮಹಿಳೆಯಿಂದ ಗರ್ಭಗುಡಿಯಲ್ಲಿರುವ ದೇವರಿಗೆ ಪೂಜೆ ಮಾಡಿಸುತ್ತಾರೆ ಎಂಬ ಗ್ರಾಮಸ್ಥರು ದೂರಿದ್ದಾರೆ.

ಒಮ್ಮೊಮ್ಮೆ ದೂರದಿಂದ ಬಂದ ಭಕ್ತರು ದೇವಾಲಯದ ಬಾಗಿಲು ಹಾಕಿರುವುದನ್ನು ಕಂಡು ತಾವು ತಂದ ಹಣ್ಣು-ಕಾಯಿಯನನ್ನು ಬಾಗಿಲಲ್ಲೇ ಇಟ್ಟು ತಾವೇ ಪೂಜೆ ಮಾಡಿಕೊಂಡು ದೇವರ ದರ್ಶನವಿಲ್ಲದೆ ನಿರಾಸೆಯಿಂದ ತೆರಳುತ್ತಾರೆ. ದೇಗುಲದ ಬಾಗಿಲು ಹಾಕಿರುವುದನ್ನು ಕಂಡು ಪಕ್ಕದಲ್ಲೇ ಇರುವ ಅರ್ಚಕರ ಮನೆಗೆ ಹೋಗಿ ಕರೆದರೆ ಗಂಟೆಗಟ್ಟಲೆ ಕಾಯಿಸುತ್ತಾರೆ. ಒಮ್ಮೊಮ್ಮೆ ಅರ್ಚಕರು ಮನೆಯಲ್ಲೇ ಇದ್ದರೂ ಮನೆಗೆಲಸದ ಮಹಿಳೆಯನ್ನು ಪೂಜೆ ಮಾಡಿಕೊಡಲು ಕಳುಹಿಸುತ್ತಾರೆ ಎಂದು ಆರೋಪಿಸಿದ್ದಾರೆ.

ಅರ್ಚಕ ಶ್ರೀನಿವಾಸ ಮೂತಿ ಅವರಿಗೆ ವೇದ-ಆಗಮ, ಸಂಸ್ಕೃತಿ ಶ್ಲೋಕಗಳು, ಅಷ್ಟೋತ್ತರಗಳು ಬರುವುದಿಲ್ಲ. ಅವರ ಮಗನಿಗೂ ಅದರ ಅರಿವಿಲ್ಲ. ಶಾಸ್ತ್ರೀಯವಾಗಿ ಪೂಜೆ ಮಾಡುವ ವಿಧಿ-ವಿಧಾನವೇ ಗೊತ್ತಿಲ್ಲ. ಅಲ್ಲದೇ, ಈ ದೇವಾಲಯದ ಹೆಸರಿನಲ್ಲಿ ಅಪಾರವಾದ ಕೊಡುಗೆ ಜಮೀನು ಇತ್ತು. ಅದನ್ನು ಅರ್ಚಕರು ತಮ್ಮ ಹೆಸರಿಗೆ ಪರಭಾರೆ ಮಾಡಿಸಿಕೊಂಡು ಮಾರಾಟ ಮಾಡಿಕೊಂಡಿರುವ ಶಂಕೆ ಇದೆ. ಈ ಕುರಿತು ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.

ದೇವಾಲಯದ ಅಭಿವೃದ್ಧಿ ದೃಷ್ಟಿಯಿಂದ ಅರ್ಚಕ ಶ್ರೀನಿವಾಸಮೂರ್ತಿ ಅವರನ್ನು ವೃತ್ತಿಯಿಂದ ವಜಾಗೊಳಿಸಿ ಸೂಕ್ತ ಅರ್ಹತೆಯುಳ್ಳ ಬೇರೊಬ್ಬರನ್ನು ಶೀಘ್ರ ನೇಮಿಸುವಂತೆ ಕೋರಿದ್ದಾರೆ.