ಸಾರಾಂಶ
ಮಾಗಡಿ: ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಗುರುವಾರ ತಾಲೂಕಿನ ಗುಮ್ಮಸಂದ್ರದ ಶ್ರೀ ರುದ್ರಮುನೇಶ್ವರ ಮಠದ ಕಿರಿಯ ಶ್ರೀಗಳಿಗೆ ಓಂಕಾರ ಸ್ವಾಮೀಜಿ (ಸಂದೀಪ್ ಕುಮಾರ್) ಎಂದು ಮರು ನಾಮಕರಣ ಮಾಡಿ, ಪಟ್ಟಾಭಿಷೇಕ ನೆರವೇರಿಸಿ ಡಾ. ಶ್ರೀ ಶಿವಕುಮಾರ ಮಹಾಶಿವಯೋಗಿಗಳ ಭವನವನ್ನು ಉದ್ಘಾಟನೆ ಮಾಡಲಾಯಿತು. ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಶ್ರೀಗಳು, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಶ್ರೀಗಳು, ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಶ್ರೀಗಳು, ನೊಣವಿನಕೆರೆ ಶ್ರೀ ಶಿವಯೋಗಿಶ್ವರ ಶ್ರೀಗಳು, ಕೆಂಗೇರಿ ಏಕದಳ ಬಿಲ್ವ ಬಂಡೇಮಠಾಧ್ಯಕ್ಷ ಸಚ್ಚಿದಾನಂದ ಶ್ರೀಗಳು, ಮೌನತಪಸ್ವಿ ಶ್ರೀ ಜಡೇಶಾಂತಲಿಂಗೇಶ್ವರ ಶ್ರೀಗಳು, ಜಡೆದೇವರ ಮಠ, ಬೆಟ್ಟಹಳ್ಳಿ ಮಠ, ಬಂಡೇಮಠ, ಜಂಗಮ ಮಠ ಸೇರಿ 30ಕ್ಕೂ ಹೆಚ್ಚು ಮಠಗಳ ಹರಗುರು ಚರಮೂರ್ತಿಗಳು, ವಿವಿಧ ಪಕ್ಷದ ರಾಜಕಾರಣಿಗಳು, ಮಠದ ಸಮಸ್ತ ಭಕ್ತರು ಈ ಕ್ಷಣಕ್ಕೆ ಸಾಕ್ಷಿಯಾದರು. ಕಿರಿಯ ಶ್ರೀಗಳ ತಾಯಿ ರೇಣುಕಮ್ಮ ಹಾಗೂ ತಂದೆ ಸಿದ್ದಲಿಂಗ ಮೂರ್ತಿ ಅವರನ್ನು ಹರಗುರು ಚರಮೂರ್ತಿಗಳು ಆಶೀರ್ವದಿಸಿದರು. ಸಮಾರಂಭದಲ್ಲಿ ಭಾಗಿಯಾದ ಸಮಸ್ತ ಭಕ್ತರಿಗೆ ಅನ್ನ ದಾಸೋಹವನ್ನು ಏರ್ಪಡಿಸಲಾಗಿತ್ತು. ಕನ್ನಡ ವಿಚಾರ ವೇದಿಕೆಯ ಅಧ್ಯಕ್ಷ ಪಾಲನೇತ್ರ, ಸುವರ್ಣ ಕರ್ನಾಟಕ ಲಿಂಗಾಯತ ವೇದಿಕೆಯ ಮೋಹನ್, ಅಕ್ಕಮಹಾದೇವಿ ಬಳಗದ ಮಹಿಳಾ ಪದಾಧಿಕಾರಿಗಳು, ವೀರಶೈವ ಕೊ.ಆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು, ಅಖಿಲ ಭಾರತ ವೀರಶೈವ ಮಹಾಸಭೆಯ ಪದಾಧಿಕಾರಿಗಳು, ಮಠದ ಭಕ್ತಾದಿಗಳು ಉಪಸ್ಥಿತರಿದ್ದರು.