ಸಾರಾಂಶ
ಹುಬ್ಬಳ್ಳಿ: ಎಲ್ಲ ಪಕ್ಷದಲ್ಲಿ 3 ಅಥವಾ 5 ವರ್ಷಗಳಿಗೊಮ್ಮೆ ಅಧ್ಯಕ್ಷರ ಬದಲಾವಣೆ ಮಾಡುವ ನಿಯಮವಿದೆ. ಅದರಂತೆ ಸಹಜವಾಗಿಯೇ ನಮ್ಮ ಪಕ್ಷದ ಕೆಪಿಸಿಸಿ ಅಧ್ಯಕ್ಷರ ಹುದ್ದೆಗೆ ಪೈಪೂಟಿ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಒಂದು ಮನೆಯಲ್ಲೇ ಅಣ್ಣ-ತಮ್ಮಂದಿರ ಮಧ್ಯೆ ಪೈಪೋಟಿ ಇರುತ್ತದೆ. ಹೀಗಿರುವಾಗ ರಾಜಕೀಯ ಪಕ್ಷದಲ್ಲಿ ಪೈಪೋಟಿ ಇರುವುದಿಲ್ಲವೇ ಎಂದು ಪ್ರಶ್ನಿಸಿದರು.
ಭಿನ್ನಾಭಿಪ್ರಾಯ ಸಹಜ:
ಸಚಿವ, ಶಾಸಕರಿಗೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವನ್ನು ಪದೇ ಪದೇ ಕೇಳುವ ಮೂಲಕ ಮಾಧ್ಯಮದವರು ದೊಡ್ಡದು ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಗಳು ಇರಬೇಕು. ಕೇವಲ ಒಂದೇ ಅಭಿಪ್ರಾಯ ಇರಕೂಡದು. ಕೇಂದ್ರ ಸರ್ಕಾರದಲ್ಲಿ ಮಾತ್ರ ಒಂದೇ ಅಭಿಪ್ರಾಯವಿದೆ, ಅಲ್ಲಿ ಒಬ್ಬರದ್ದೇ ಪೋಟೋ ಇದೆ. ಇದರಿಂದ ದೇಶಕ್ಕೆ ಒಳ್ಳೆಯದಾಗಲು ಸಾಧ್ಯವೇ?. ಭಿನ್ನಾಭಿಪ್ರಾಯದಲ್ಲಿಯೇ ಪ್ರಜಾಪ್ರಭುತ್ವದ ಸೌಂದರ್ಯ ಅಡಗಿದೆ ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿಗೆ ಟಾಂಗ್ ನೀಡಿದರು.
ಬಿಜೆಪಿ ಸ್ವಾತಂತ್ರ್ಯ ಕಳೆದುಕೊಂಡಿದೆ:
ಯಾವುದೇ ವಿಷಯ ಇರಲಿ ಅಲ್ಲಿನ ಭಿನ್ನಭಿಪ್ರಾಯಗಳನ್ನು ಪರಸ್ಪರ ಗೌರವಿಸಿಕೊಳ್ಳಬೇಕು. ಬಿಜೆಪಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ, ಲಾಲಕೃಷ್ಣ ಅಡ್ವಾಣಿ ಕಾಲದಲ್ಲಿ ಎಲ್ಲ ಮುಖಂಡರಿಗೆ ಮಾತನಾಡಲು ಮುಕ್ತ ವಾತಾವರಣವಿತ್ತು. ಆದರೆ, ಈಗ ಬಿಜೆಪಿ ಸಂಪೂರ್ಣ ಸ್ವಾತಂತ್ರ್ಯ ಕಳೆದುಕೊಂಡಿದೆ ಎಂದು ಕುಟುಕಿದರು.
ದೆಹಲಿ ಭೇಟಿ ವೇಳೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಪರಸ್ಪರ ಭೇಟಿಯಾಗದಿರುವ ವಿಚಾರ ಉತ್ತರಿಸಿದ ಲಾಡ್, ಅವರಿಬ್ಬರು ಬೇರೆ ಕಾರಣಗಳಿಂದ ಭೇಟಿ ಆಗಿರಲಿಕ್ಕಿಲ್ಲ. ನಿತ್ಯವೂ ಜೊತೆಯಾಗಿಯೇ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ ಅದರಲ್ಲೇನೂ ವಿಶೇಷತೆಯಿಲ್ಲ ಎಂದರು.