ವೀರಶೈವ ಮಹಾಸಭೆ ತಾಲೂಕು ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ

| Published : Jun 29 2024, 12:40 AM IST

ಸಾರಾಂಶ

ಕೊಳ್ಳೇಗಾಲ ತಾಲೂಕು ವೀರಶೈವ ಮಹಾಸಭೆಗೆ ಅಧ್ಯಕ್ಷರು ಹಾಗೂ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಪ್ರಕ್ರಿಯೆ ಜೂ.27 ರಿಂದ ಆರಂಭವಾಗಿರುವ ಹಿನ್ನೆಲೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಪೈಪೋಟಿ ಜೋರಾಗಿರುವ ಬೆನ್ನಲ್ಲೆ ಜೂ.29ರ ಶನಿವಾರ ಮಧ್ಯಾಹ್ನ ಸದಸ್ಯರ ಸಭೆ ಕರೆಯಲಾಗಿದೆ.

ಎನ್. ನಾಗೇಂದ್ರಸ್ವಾಮಿ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಕೊಳ್ಳೇಗಾಲ ತಾಲೂಕು ವೀರಶೈವ ಮಹಾಸಭೆಗೆ ಅಧ್ಯಕ್ಷರು ಹಾಗೂ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಪ್ರಕ್ರಿಯೆ ಜೂ.27 ರಿಂದ ಆರಂಭವಾಗಿರುವ ಹಿನ್ನೆಲೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಪೈಪೋಟಿ ಜೋರಾಗಿರುವ ಬೆನ್ನಲ್ಲೆ ಜೂ.29ರ ಶನಿವಾರ ಮಧ್ಯಾಹ್ನ ಸದಸ್ಯರ ಸಭೆ ಕರೆಯಲಾಗಿದೆ.29 ರಂದು ಮಧ್ಯಾಹ್ನ 3ಕ್ಕೆ ವೀರಶೈವ ಮಹಾಸಭೆ ತಾಲೂಕು ಘಟಕದ ಸಭೆಯೂ ಕೊಂಗವೀರೆಗೌಡರ ವಿದ್ಯಾರ್ಥಿನಿಲಯದಲ್ಲಿ ಜರುಗಲಿದೆ. ಮಹಾಸಭೆಗೆ ತಾಲೂಕು ಮಟ್ಟದ ಪದಾಧಿಕಾರಿಗಳನ್ನು ಒಮ್ಮತದಿಂದ ಅವಿರೋಧವಾಗಿ ಆಯ್ಕೆ ಮಾಡಲು ಕರೆದಿರುವ ಈ ಸಭೆ ಮಹತ್ವದ್ದಾಗಿದೆ. ಈ ಹಿನ್ನೆಲೆ ಈಗಾಗಲೇ ಪ್ರಭಲ ಆಕಾಂಕ್ಷಿಯಾಗಿರುವ ವಿಜಯೇಂದ್ರ ಅಭಿಮಾನಿ ಬಳಗ ಜಿಲ್ಲಾಧ್ಯಕ್ಷ ಬೃಂಗೇಶ್ ಕಟ್ಟೆ, ದೊಡ್ಡಿಂದುವಾಡಿ ವೀರಭದ್ರಸ್ವಾಮಿ, ಮಾಜಿ ಅಧ್ಯಕ್ಷ ಬಸಪ್ಪನದೊಡ್ಡಿ ಬಸವರಾಜು, ತಿಮ್ಮರಾಜಿಪುರ ರಾಜು ಸೇರಿದಂತೆ ಅನೇಕ ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಿದೆ. ಈಗಾಗಲೇ ಹಾಲಿ ಅಧ್ಯಕ್ಷ ಮಹದೇವಪ್ರಸಾದ್ ಅವರ ಅವಧಿ ಪೂರ್ಣಗೊಂಡಿದ್ದು ಮತ್ತೊಮ್ಮೆ ಸ್ಪರ್ಧಿಸಲ್ಲ ಎಂದು ಘೋಷಿಸಿದ್ದಾರೆ.

ಈ ಹಿನ್ನೆಲೆ ಜಿಲ್ಲಾ ನಿರ್ದೇಶಕ ವೀರಭದ್ರಸ್ವಾಮಿ ಅಧ್ಯಕ್ಷ ಸ್ಥಾನ ಗಿಟ್ಟಿಸಲು ತೆರೆಮರೆಯಲ್ಲಿ ಕಸರತ್ತು ಪ್ರಾರಂಭಿಸಿದ್ದಾರೆ. ಅದೇ ರೀತಿಯಲ್ಲಿ ಬೃಂಗೇಶ್ ಅವರು ಸಹಾ ಪ್ರಬಲ ಆಕಾಂಕ್ಷಿ. ಇನ್ನು ಹನೂರು ಒಳಗೊಂಡಂತೆ ಕೊಳ್ಳೇಗಾಲ ಘಟಕಕ್ಕೆ ಈ ಹಿಂದೆ ಅಧ್ಯಕ್ಷರಾಗಿದ್ದ ಬಸಪ್ಪನದೊಡ್ಡಿ ಬಸವರಾಜು ಅವರು ಹಾಗೂ ತಿಮ್ಮರಾಜಿಪುರ ರಾಜು ಸಹಾ ಅಧ್ಯಕ್ಷ ಸ್ಥಾನಕ್ಕೆ ಇಂಗಿತ ವ್ಯಕ್ತಪಡಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದಲ್ಲದೆ ಇನ್ನು ಹಲವು ಮಂದಿ ಆಕಾಂಕ್ಷಿಗಳಾಗಿದ್ದು ತಮಗೆ ಅಧ್ಯಕ್ಷ ಸ್ಥಾನ ಬೇಕು ಎನ್ನುವ ಸಾಧ್ಯತೆ ಅಲ್ಲಗೆಳೆಯುವಂತಿಲ್ಲ. ಒಮ್ಮತ ಮೂಡದಿದ್ದಲ್ಲಿ ಚುನಾವಣೆ ಸಾಧ್ಯತೆ?:29 ರ ಶನಿವಾರ ನಡೆಯುವ ಸಭೆಯಲ್ಲಿ ಅಧ್ಯಕ್ಷ ಹಾಗೂ ನಿರ್ದೇಶಕರ ಆಯ್ಕೆಗಾಗಿ ಒಮ್ಮತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಇದ್ದು ಸಭೆಯಲ್ಲಿ ಒಮ್ಮತ ಮೂಡದ ಪಕ್ಷದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈಗಾಗಲೇ ವೀರಭದ್ರಸ್ವಾಮಿ ಅವರು ನಾನು ಸಮಾಜದ ಆಗು, ಹೋಗುಗಳಿಗೆ ಸ್ಪಂದಿಸಿ ಕೆಲಸ ಮಾಡಿದ್ದೇನೆ. ಅದನ್ನು ಗುರುತಿಸಿ ಮಹಾಸಭೆ ಮತದಾರರು ನನ್ನ ಬೆಂಬಲಿಸುವ ವಿಶ್ವಾಸವಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದು, ನನ್ನ ಆಯ್ಕೆಗೆ ಸಭೆಯಲ್ಲಿ ಬೆಂಬಲ ವ್ಯಕ್ತವಾಗದಿದ್ದಲ್ಲಿ ಮತದಾರರ ಬಳಿ ತೆರಳಿ ಮುಂದಿನ ನಿರ್ಣಯ ಕೈಗೊಳ್ಳುವೆ ಎಂಬ ಮಾತುಗಳನ್ನಾಡಿದ್ದಾರೆ ಎನ್ನಲಾಗಿದೆ. ಅದೇ ರೀತಿಯಲ್ಲಿ ಬಸಪ್ಪನದೊಡ್ಡಿ ಬಸವರಾಜು ಅವರು ಧರ್ಮಸ್ಥಳಕ್ಕೆ ತೆರಳಿದ್ದು ನಾಳಿನ ಸಭೆಯಲ್ಲಿ ಪಾಲ್ಗೊಳ್ಳಲ್ಲ, ಆದರೆ ನಾನೊಬ್ಬ ಪ್ರಬಲ ಆಕಾಂಕ್ಷಿಯಾಗಿದ್ದು ಈಗಾಗಲೇ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಫಾರ್ಮ್ ಪಡೆದಿದ್ದೇನೆ, ಮಹಾಸಭೆಯ ಹಿರಿಯರ ನಿರ್ಧಾರಕ್ಕೆ ತಲೆಬಾಗುವೆ, ನನ್ನ ಆಯ್ಕೆಗೆ ಒಮ್ಮತ ಮೂಡದ ಹಿನ್ನೆಲೆ ಸೋಮವಾರ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ತಯಾರಿದ್ದಾರೆ ಎಂದು ಹೇಳಲಾಗಿದೆ. ಅದೇ ರೀತಿಯಲ್ಲಿ ಕಳೆದ ಬಾರಿ ನಾಮಪತ್ರ ವಾಪಸ್ಸು ಪಡೆದಿದ್ದ ರಾಜು ಸಹ ಪ್ರಬಲ ಆಕಾಂಕ್ಷಿಯಾಗಿದ್ದು ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಡಲಿದ್ದು ನಾಳಿನ ಸಭೆಯಲ್ಲಿ ನನ್ನ ಪರ ಒಲವು ಮೂಡದಿದ್ದರೆ ನಾಮಪತ್ರ ಸಲ್ಲಿಸುವೆ, ಮತದಾರರ ಬಳಿ ಹೋಗುವೆ ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದು, ಒಟ್ಟಾರೆ ನಾಳಿನ ಸಭೆಯಲ್ಲಿ ಒಮ್ಮತ ಮೂಡುವುದು ಕಷ್ಟ ಎಂಬ ಮಾತುಗಳು ಕೇಳಿ ಬಂದಿದ್ದು ಮುಂದಾಗುವ ಬೆಳವಣಿಗೆ ಕಾದು ನೋಡಬೇಕಿದೆ.940ಕ್ಕೂ ಅಧಿಕ ಮಂದಿ ಮತದಾರರು: ತಾಲೂಕು ವೀರಶೈವ ಮಹಾಸಭೆಗೆ ಒಟ್ಟಾರೆ 1645ಮಂದಿ ಮತದಾರರಿದ್ದು ಹನೂರು ತಾಲೂಕಾಗಿ ವಿಭಜನೆಗೊಂಡ ಹಿನ್ನೆಲೆ ಐನೂರಕ್ಕೂ ಅಧಿಕ ಮತ ಹನೂರು ತಾಲೂಕಿಗೆ ವರ್ಗವಾಗಿದ್ದು ಕೊಳ್ಳೇಗಾಲ ತಾಲೂಕು ವ್ಯಾಪ್ತಿಗೆ 940ಕ್ಕೂ ಅಧಿಕ ಮತದಾರರ ಪಟ್ಟಿ ತಯಾರಿದ್ದು ಚುನಾವಣಾಧಿಕಾರಿಯಾಗಿ ನಿವೃತ್ತ ಗ್ರಾಮ ಲೆಕ್ಕಿಗ ಶಿವಮಲ್ಲಪ್ಪ ಕಾರ್ಯನಿರ್ವಹಿಸಲಿದ್ದಾರೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಜೂ.27ರಿಂದ ಪ್ರಾರಂಭವಾಗಿದ್ದು ಜುಲೈ 4ರಂದು ನಾಮಪತ್ರ ಸ್ಲಲಿಕೆಗೆ ಕೊನೆದಿನ. ಜು.5ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು ವಾಪಸು ಪಡೆಯಲು ಜು.8 ಕೊನೆ ದಿನವಾಗಿದೆ. 21ರಂದು 13 ಸಾಮಾನ್ಯ ಸ್ಥಾನ, 7 ಮಹಿಳಾ ಸ್ಥಾನ, 1 ಅಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆ ನಡೆಯಲಿದ್ದು 21 ಸ್ಥಾನದ ಹಿನ್ನೆಲೆ ಒಬ್ಬ ಸದಸ್ಯರು 21 ಮತ ಚಲಾಯಿಸಬೇಕಿದೆ. ಜಿಲ್ಲಾ ಘಟಕಕ್ಕೂ ಜಂಟಿಯಾಗಿಯೇ 21ರಂದೇ ಚುನಾವಣೆ ನಡೆಯುವ ಹಿನ್ನೆಲೆ ಒಬ್ಬ ಮತದಾರರು 52 ಮತ ಚಲಾಯಿಸಬೇಕಿದೆ. ಈ ಚುನಾವಣೆಯಲ್ಲಿ ನಾನು ಆಕಾಂಕ್ಷಿಯಲ್ಲ, ಸಮಾಜದ ಕೆಲಸಕ್ಕೆ ಸ್ಪಂದಿಸುವವರಿಗೆ ನಾನು ಬೆಂಬಲ ನೀಡುವೆ. ಎಲ್ಲವೂ ಸಭೆಯಲ್ಲಿ ತೀರ್ಮಾನವಾಗಲಿದೆ ಎಂದು ಹಾಲಿ ಅಧ್ಯಕ್ಷ ಮಹದೇವಪ್ರಸಾದ್ ಕನ್ನಡಪ್ರಭಕ್ಕೆ ತಿಳಿಸಿದರು.ನಾನು ಆಕಾಂಕ್ಷಿಯಾಗಿದ್ದೆನೆ, ಸಮಾಜದ ಪರ ಹಲವಾರು ವಿಚಾರಗಳಲ್ಲಿ ಕೆಲಸ ಮಾಡಿದ್ದೇನೆ. ಹಿರಿಯನಾದ ನನಗೆ ಮತದಾರರು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡುತ್ತೇನೆ. ನನಗಿಂತ ಹೆಚ್ಚಿನ ರೀತಿ ಸಮಾಜದ ಸೇವೆಯಲ್ಲಿ ಗುರುತಿಸಿಕೊಂಡಿರುವವರು ಆಕಾಂಕ್ಷಿಗಳಾದರೆ ಸಭೆ ಕೈಗೊಳ್ಳುವ ನಿರ್ಣಯಕ್ಕೂ ತಲೆಬಾಗುವೆ. - ವೀರಭದ್ರಸ್ವಾಮಿ, ವೀರಶೈವ ಮಹಾಸಭೆ ತಾಲೂಕು ಅಧ್ಯಕ್ಷ ಸ್ಥಾನದ ಆಕಾಂಕ್ಷಿಕಳೆದ ಬಾರಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದೆ, ಎಲ್ಲ ಹಿರಿಯರ ಮಾತಿಗೆ ಮನ್ನಣೆ ನೀಡಿ ವಾಪಸ್ಸು ಸಹಾ ಪಡೆದಿದ್ದೆ. ಈ ಬಾರಿಯೂ ಅಧ್ಯಕ್ಷ ಆಕಾಂಕ್ಷಿಯಾಗಿದ್ದೇನೆ. ಸಭೆಯಲ್ಲಿ ಅವಕಾಶ ಕೇಳುವೆ. ಸಿಗದಿದ್ದಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವೆ.

- ತಿಮ್ಮರಾಜಿಪುರ ರಾಜು, ವೀರಶೈವ ಮಹಾಸಭೆ ತಾಲೂಕು ಅಧ್ಯಕ್ಷ ಸ್ಥಾನದ ಆಕಾಂಕ್ಷಿ