ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ಸರ್ವೋದಯ ಪಕ್ಷದಿಂದ ಸ್ಪರ್ಧೆ ಮಾಡುವ ಬಗ್ಗೆ ಶೀಘ್ರದಲ್ಲೇ ಅಂತಿಮ ತೀರ್ಮಾನ ಪ್ರಕಟಿಸುತ್ತೇವೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ಸರ್ವೋದಯ ಪಕ್ಷದಿಂದ ಸ್ಪರ್ಧೆ ಮಾಡುವ ಬಗ್ಗೆ ಶೀಘ್ರದಲ್ಲೇ ಅಂತಿಮ ತೀರ್ಮಾನ ಪ್ರಕಟಿಸುತ್ತೇವೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.

ತಾಲೂಕಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಗ್ಗೆ ಈಗಾಗಲೇ ಸ್ಪರ್ಧೆ ಬಗ್ಗೆ ನಿರ್ಧಾರ ಮಾಡಿದ್ದೇವೆ. ಸರ್ವೋದಯ ಪಕ್ಷ ಇದೆ, ಅದರಲ್ಲಿ ನಾವು ಜಿಲ್ಲೆಗೆ ಒಂದಾದರೂ ಜಿಪಂ ಕ್ಷೇತ್ರದಲ್ಲಿ ಗೆಲ್ಲಬೇಕು ಎಂದು ಆಲೋಚನೆ ಮಾಡಿದ್ದೇವೆ ಎಂದರು.

ಜಿಪಂ ವ್ಯಾಪ್ತಿಯ ತಾಪಂನಲ್ಲೂ ಸ್ಪರ್ಧೆ ಮಾಡಲಾಗುತ್ತದೆ. ಕನಿಷ್ಠ ಒಂದು ಜಿಪಂ, ತಾಪಂ ಚುನಾವಣೆಯಲ್ಲಿ ಗೆಲ್ಲಲು ರೈತಸಂಘ ನಿರ್ಧಾರ ಮಾಡಿದೆ. ಜಿಪಂ, ತಾಪಂ ಚುನಾವಣೆ ಸಂಬಂಧ ಸದ್ಯದಲ್ಲೇ ಅಂತಿಮ ತೀರ್ಮಾನ ಆಗುತ್ತದೆ ಎಂದರು.

ರೈತರ ಹೋರಾಟಕ್ಕೆ ೮೦ ದಿನ:

ಕೆರೆಗಳಿಗೆ ನೀರು,ಸಾಗುವಳಿ ಸಮಸ್ಯೆಗಳ ಬಗ್ಗೆ ಕಳೆದ ೮೦ ದಿನಗಳಿಂದ ರೈತರು ಚಳವಳಿ ನಡೆಯುತ್ತಿದ್ದರೂ ಸಮಸ್ಯೆಗಳ ಬಗೆಹರಿಸದ ಕಾರಣ ರಾಜ್ಯ ಸರ್ಕಾರ ನಿಷ್ಕ್ರಿಯವಾಗಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆರೋಪಿಸಿದರು.

ಸ್ಥಳೀಯ ಶಾಸಕರು ಸಮಸ್ಯೆ ಬಗೆಹರಿಸಲು ಆಗುತ್ತಿಲ್ಲ, ರೈತರು ೮೦ ದಿನಗಳ ಕಾಲ ತಾಲೂಕು ಆಡಳಿತದ ಮುಂದೆ ಧರಣಿ ಮಾಡುತ್ತಿರುವುದು ಸರ್ಕಾರಕ್ಕೆ ನಾಚಿಕೆ ತರುವ ವಿಚಾರ.ಶಾಸಕರು, ಸಚಿವರು,ಜಿಲ್ಲಾಧಿಕಾರಿ,ವಿರೋಧ ಪಕ್ಷದವರು ಧರಣಿ ಸ್ಥಳಕ್ಕೆ ಬಂದು ಭೇಟಿ ಮಾಡಿ ಹೋಗಿದ್ದಾರೆ. ಆದರೆ ಸಮಸ್ಯೆ ಪರಿಹರಿಸುವ ಹಂತಕ್ಕೆ ಹೋಗಿಲ್ಲ ಎಂದರು.

ಶಾಸಕರ ಕಚೇರಿಗೂ ಮುತ್ತಿಗೆ, ಅಹೋರಾತ್ರಿ ಧರಣಿ ನಡೆಸಲಾಗಿದೆ. ಆದರೆ ಸ್ಥಳೀಯ ಶಾಸಕರಿಗೆ ರೈತರ ಎರಡು ಸಮಸ್ಯೆಯನ್ನು ಬಗೆಹರಿಸಲು ಆಗುತ್ತಿಲ್ಲ ಎಂದು ಕಿಡಿಕಾರಿದರು.

ಕೆರೆ ನೀರು ವಿಚಾರ; ಲಿಖಿತವಾಗಿ ಹೇಳಲಿ:

ಗುಂಡ್ಲುಪೇಟೆ ತಾಲೂಕಿನ ಕೆರೆಗಳಿಗೆ ಇಂಥ ದಿನ, ತಿಂಗಳು ನೀರು ತುಂಬಿಸುವುದಾಗಿ ಸ್ಥಳೀಯ ಶಾಸಕರು ಲಿಖಿತವಾಗಿ ಹೇಳಲಿ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯಿಸಿದರು.

ಕಳೆದ ವರ್ಷದಿಂದಲೂ ಒಂದಲ್ಲ ಒಂದು ಹೋರಾಟ ಕೆರೆಗಳಿಗೆ ನೀರಿನ ವಿಚಾರದಲ್ಲಿ ನಡೆಯುತ್ತಿವೆ. ಕಳೆದ ೨೦೨೫ ರ ವರ್ಷದ ಡಿಸೆಂಬರೊಳಗೆ ಕೆರೆ ತುಂಬಿಸುತ್ತೇವೆ ಅಂತ ಹೇಳಿದ್ದರು. ೨೦೨೬ ರ ನವೆಂಬರ್ ಹತ್ತಾಗುತ್ತಿದೆ. ಶಾಸಕರು ಶನಿವಾರ ನಡೆದ ಸಭೆಯಲ್ಲಿ ಹೇಳಿದಾಗೆ ಕೆರೆಗೆ ಯಾವ ವರ್ಷದ ಡಿಸೆಂಬರ್‌ ಎಂದು ಲಿಖಿತವಾಗಿ ಹೇಳಬೇಕು ಆಗ್ರಹಿಸಿದರು.

ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಎ.ಎಂ.ಮಹೇಶ್, ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ, ರಾಜ್ಯ ವಿಭಾಗೀಯ ಸಮಿತಿಯ ಸಿದ್ದರಾಜು, ಭಾಸ್ಕರ್,ಕುಮಾರ್, ಮಂಜುನಾಥ್, ರಾಜಶೇಖರ್, ಸೋಮಶೇಖರ್, ನಂಜನಗೂಡು ತಾಲೂಕು ಅಧ್ಯಕ್ಷ ಕುಮಾರ್, ನಗರ ತಾಲೂಕು ಅಧ್ಯಕ್ಷ ಮಲ್ಲಣ್ಣ, ಜಿಲ್ಲಾ ಮಹಿಳಾ ಉಪಾಧ್ಯಕ್ಷೆ ನೀಲಮ್ಮ, ತಾಲೂಕು ಅಧ್ಯಕ್ಷ ಶಿವಣ್ಣ, ಪ್ರಧಾನ ಕಾರ್ಯದರ್ಶಿ ಪ್ರಸಾದ್, ಗ್ರಾಮಗಳ ಅಧ್ಯಕ್ಷರು, ಜಿಲ್ಲಾ ಪದಾಧಿಕಾರಿಗಳು ಇದ್ದರು.

ಕಬ್ಬು ಬೆಳೆಗಾರರಿಗೆ ಒಂದೇ ನೀತಿ ಪ್ರಕಟಿಸಿ

ರಾಜ್ಯ ಸರ್ಕಾರ ಮದ್ಯ ಪ್ರವೇಶಿಸಿ ಕಬ್ಬು ಬೆಳೆಗಾರರಿಗೆ ಇಡೀ ರಾಜ್ಯಕ್ಕೆ ಒಂದೇ ನೀತಿ ಜಾರಿ ಮಾಡಬೇಕು ಎಂದು ನ.೨೦ ಕ್ಕೆ ಗಡುವು ನೀಡಿದ್ದೇವೆ ಗಡುವಿನೊಳಗೆ ಜಾರಿ ಮಾಡದೆ ಇದ್ದರೆ ನ.೨೦ ರ ಬಳಿಕ ಮತ್ತೆ ಹೋರಾಟ ಶುರು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಕೆ ನೀಡಿದರು.

ಕಳೆದ ನ.೬ರಂದು ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಸಕ್ಕರೆ ಸಚಿವರಿಗೆ ಪ್ರತಿಭಟನಾಕಾರರು ಒತ್ತಾಯ ಪತ್ರ ಸಲ್ಲಿಸಿದ್ದೇವೆ.ಬರುವ ನ.೨೦ ಗಡುವು ಕೊಟ್ಟಿದ್ದೇವೆ.ನ.೨೦ ರೊಳಗೆ ತೀರ್ಮಾನ ಆಗದಿದ್ದರೆ,ನ.೨೦ ರ ಬಳಿಕ ಚಳವಳಿ ಶುರು ಆಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದರು.

ಬೆಳಗಾವಿಗೆ ಒಂದು ನೀತಿ, ಇಲ್ಲಿಗೆ ಇನ್ನೊಂದು ನೀತಿ ಬೇಡ.ಇಡೀ ರಾಜ್ಯದ ಎಲ್ಲ ಕಾರ್ಖಾನೆಗಳು,ಎಲ್ಲ ರೈತರಿಗೆ ಒಂದೇ ರೀತಿಯ ನೀತಿ ರೂಪಿಸಬೇಕು. ರಾಜ್ಯ ಸರ್ಕಾರವೇ ಕೇಂದ್ರ ಸರ್ಕಾರವನ್ನು ಒತ್ತಾಯ ಮಾಡಿ, ಏಕ ನೀತಿ ತರಬೇಕು ಎಂದರು.

ಹಾಲಿನ ಬೆಲೆ ಏರಿಕೆ ಸಾಲುವುದಿಲ್ಲ

ಹಾಲಿನ ಬೆಲೆ ಏರಿಕೆ ಸ್ವಾಗತಿಸುತ್ತೇವೆ, ಆದರೆ ಅದು ಸಾಕಾಗುವುದಿಲ್ಲ,ಉತ್ಪಾದನಾ ವೆಚ್ಚವೇ ಲೀಟರ್‌ಗೆ ೪೦ ರು.ಅಗುತ್ತಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.

ಹಾಲಿನ ಬೆಲೆ ಏರಿಕೆ ವಿರೋಧಿಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ಹಾಲಿಗೆ ೮ ರು.ಏರಿಕೆ ಆಗಿದೆ. ೭ ರುಪಾಯಿ ಡಿಬಿಟಿ ಬರುತ್ತಿದೆ. ಇದರ ವಿರುದ್ಧ ಗ್ರಾಹಕರಿಗೆ ಹೊಡೆತ ಬೀಳುತ್ತದೆ ಎಂದು ಬಿಜೆಪಿಯವರು ಬೊಬ್ಬೆ ಇಡುತ್ತಿದ್ದಾರೆ ಎಂದರು.

ರೈತರು ಗ್ರಾಹಕರಲ್ಲವಾ? ರೈತರು ಕೂಡ ಹಾಲು ಕುಡಿಯುತ್ತಾರೆ, ಹಾಲು ಉತ್ಪಾದನೆ ಮಾಡುವ ರೈತನ ಕಷ್ಟ ಗೊತ್ತಿಲ್ಲದವರು ಹೋರಾಟ ಮಾಡುತ್ತಿದ್ದಾರೆ ಎಂದರು.