ಸ್ಪರ್ಧಾತ್ಮಕ ಪರೀಕ್ಷೆಗಳು ಸಮಾಜದ ಉನ್ನತ ಸ್ಥಾನ ತಲುಪಲು ಸಹಕಾರಿ : ಎಚ್‌.ಡಿ. ತಮ್ಮಯ್ಯ

| Published : Oct 31 2024, 12:56 AM IST

ಸ್ಪರ್ಧಾತ್ಮಕ ಪರೀಕ್ಷೆಗಳು ಸಮಾಜದ ಉನ್ನತ ಸ್ಥಾನ ತಲುಪಲು ಸಹಕಾರಿ : ಎಚ್‌.ಡಿ. ತಮ್ಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಸ್ಪರ್ಧಾತ್ಮಕ ಪರೀಕ್ಷೆಗಳು ಸಮಾಜದ ಉನ್ನತ ಸ್ಥಾನ ತಲುಪಲು ಸಹಕಾರಿಯಾಗಿವೆ. ಕಲಿಕೆ ಹಾಗೂ ಸತತ ಪ್ರಯತ್ನಗಳ ಮೂಲಕ ತಮ್ಮ ಗುರಿ ಸಾಧಿಸಬಹುದು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದ್ದಾರೆ.

ಐ.ಎ.ಎಸ್, ಕೆ.ಎ.ಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಗಾರ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಸ್ಪರ್ಧಾತ್ಮಕ ಪರೀಕ್ಷೆಗಳು ಸಮಾಜದ ಉನ್ನತ ಸ್ಥಾನ ತಲುಪಲು ಸಹಕಾರಿಯಾಗಿವೆ. ಕಲಿಕೆ ಹಾಗೂ ಸತತ ಪ್ರಯತ್ನಗಳ ಮೂಲಕ ತಮ್ಮ ಗುರಿ ಸಾಧಿಸಬಹುದು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದ್ದಾರೆ.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಇನ್ಸೈಟ್ ಅಕಾಡೆಮಿ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ನಗರದ ಎಐಟಿ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ನಿಲಯಗಳ ನಿಲಯಾರ್ಥಿಗಳಿಗೆ ಐಎಎಸ್, ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬ ವಿದ್ಯಾರ್ಥಿ ಸಮಾಜದಲ್ಲಿನ ಗೌರವಯುತ ಹುದ್ದೆಗೆ ತಲುಪಿ ಸೇವೆ ಸಲ್ಲಿಸಬೇಕೆಂಬ ಗುರಿ ಹೊಂದಿರುತ್ತಾರೆ. ಬಡತನ ಹಾಗೂ ಉತ್ತಮ ಮಾರ್ಗದರ್ಶಕರ ಕೊರತೆಯಿಂದ ಗುರಿ ತಲುಪುವಲ್ಲಿ ವಿಫಲರಾಗುತ್ತಿದ್ದಾರೆ. ಅಂತಹ ವಿದ್ಯಾರ್ಥಿ ಗಳಿಗೆ ಗುಣಮಟ್ಟದ ತರಬೇತಿ ಜೊತೆಗೆ ಮಾರ್ಗದರ್ಶನ ನೀಡಿ ಅವರನ್ನು ಪ್ರೋತ್ಸಾಹಿಸುವುದು ಅವಶ್ಯಕ ಎಂದರು.ಜಿಲ್ಲೆಯ ವಿವಿಧ ಗ್ರಾಮಗಳಿಂದ ಕನಸುಗಳ ಹೊತ್ತು ವಿದ್ಯಾರ್ಥಿ ನಿಲಯಗಳಲ್ಲಿದ್ದು ಶಿಕ್ಷಣ ಪಡೆಯುತ್ತಿರುವ ಅನೇಕ ಬಡ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ಹಾಗೂ ಗುಣಮಟ್ಟದ ಶಿಕ್ಷಣ ನೀಡುವುದು ಪ್ರತಿಯೊಬ್ಬರ ಕರ್ತವ್ಯ. ಉತ್ತಮ ಶ್ರಮ ಹಾಗೂ ಶ್ರದ್ಧೆಯಿಂದ ಕಲಿಕೆಯಲ್ಲಿ ತೊಡಗಿಕೊಂಡಲ್ಲಿ ಎಂತಹ ಕಠಿಣ ಕಾರ್ಯದಲ್ಲೂ ಯಶಸ್ಸು ಕಾಣಬಹುದು. ಕನಸುಗಳು ದೊಡ್ಡದಾಗಿರಿಸಿಕೊಂಡು ಅದರತ್ತ ತಲುಪಲು ಪ್ರಾಮಾಣಿಕ ಪ್ರಯತ್ನ ನಡೆಸಿ ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೆಗೌಡ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರು ತಮ್ಮ ಹಿರಿಯರೊಂದಿಗೆ ಮಾಹಿತಿ ಪಡೆದು ಕಲಿಕೆಯಲ್ಲಿ ಮುಂದಾಗಬೇಕು. ಯಾವುದೇ ಉನ್ನತ ಸ್ಥಾನ ತಲುಪುವುದು ಸುಲಭವಲ್ಲ ಸರಿ ದಾರಿಯಲ್ಲಿ ನಡೆದು ಎದುರಾಗುವ ಸಮಸ್ಯೆಗಳನ್ನು ಭೇದಿಸಿ ನಿಂತಲ್ಲಿ ಸಾಧನೆ ಸುಲಭವಾಗಿರುತ್ತದೆ. ತಮಗೆ ದೊರಕುವ ಎಲ್ಲ ಅವಕಾಶಗಳ ಸದುಪಯೋಗ ಪಡಿಸಿಕೊಂಡು ಹಂತ ಹಂತವಾಗಿ ಅಭಿವೃದ್ಧಿ ಹೊಂದಬೇಕು. ಯಾವುದೇ ಕೆಲಸವನ್ನು ಕಾಯ, ವಾಚ, ಮನಸಾದಿಂದ ನಿರ್ವಹಿಸಿದಲ್ಲಿ ಯಶಸ್ಸು ಕಂಡಿತ ಸಾಧ್ಯ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಚ್.ಎಸ್. ಕೀರ್ತನಾ ಮಾತನಾಡಿ, ಬಹುತೇಕ ವಿದ್ಯಾರ್ಥಿಗಳಿಗೆ ತಮ್ಮ ಗುರಿ ಹಾಗೂ ಅವುಗಳನ್ನು ತಲುಪುವ ದಾರಿ ಕುರಿತು ಮಾಹಿತಿ ಕೊರತೆಯಿದೆ. ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನದ ಜೊತೆಗೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಷ್ಟಿತ ತರಬೇತಿ ಸಂಸ್ಥೆ ಮೂಲಕ ತರಬೇತಿ ನೀಡಿ ಅವರನ್ನು ಸಾಧನೆಯೆಡೆಗೆ ತಲುಪಲು ಸಹಕರಿಸುವುದು ನಮ್ಮ ಜವಾಬ್ದಾರಿ. ಪ್ರತಿಯೊಬ್ಬ ವಿದ್ಯಾರ್ಥಿಗಳು ಕಾರ್ಯಾಗಾರದ ಸದುಪಯೋಗ ಪಡೆದು ಇಲ್ಲಿ ತಿಳಿಸುವಂತಹ ಮಾಹಿತಿಯನ್ನು ತಮ್ಮ ಸಹಪಾಠಿಗಳಿಗೂ ತಿಳಿಸಿ ಸಮಾಜದ ಉತ್ತಮ ಪ್ರಜೆಗಳಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ತಿಳಿಸಿದರು.ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಂ ಅಮಟೆ, ಚಿಕ್ಕಮಗಳೂರು ಉಪ ವಿಭಾಗಾ ಧಿಕಾರಿ ದಲ್ಜಿತ್ ಕುಮಾರ್, ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಹಾಗೂ ಹಾಸನ ಜಿಲ್ಲೆಯ ಡಿಸಿಎಫ್ ಸೌರಬ್ ಉಪನ್ಯಾಸ ನೀಡಿದರು.ಕಾರ್ಯಕ್ರಮದಲ್ಲಿ ಎಐಟಿ ಕಾಲೇಜಿನ ಪ್ರಾಂಶುಪಾಲ ಡಾ. ಸಿ.ಟಿ. ಜಯದೇವ್‌, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಯೋಗೀಶ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಂಜುನಾಥ್, ಐಟಿಡಿಪಿ ಅಧಿಕಾರಿ ಭಾಗೀರಥಿ, ಹಿಂದುಳಿದ ವರ್ಗಗಳ ತಾಲ್ಲೂಕು ಅಧಿಕಾರಿ ಬಡಿಗೇರ್, ಇನ್ಸೈಟ್ ಅಕಾಡೆಮಿ ಸಂಸ್ಥಾಪಕ ವಿನಯ್ ಕುಮಾರ್ ಹಾಗೂ ಉಪನ್ಯಾಸಕ ಶಮಂತ್‌ ಗೌಡ ಉಪಸ್ಥಿತರಿದ್ದರು.

30 ಕೆಸಿಕೆಎಂ 3ಚಿಕ್ಕಮಗಳೂರಿನ ಎಐಟಿ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ವಿದ್ಯಾರ್ಥಿನಿಲಯಗಳ ನಿಲಯಾರ್ಥಿಗಳಿಗೆ ಐಎಎಸ್, ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಗಾರವನ್ನು ಶಾಸಕ ಎಚ್‌.ಡಿ. ತಮ್ಮಯ್ಯ ಉದ್ಘಾಟಿಸಿದರು. ವಿಧಾನಪರಿಷತ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡ, ಜಿಪಂ ಸಿಇಒ ಕೀರ್ತನಾ, ಡಾ. ಜಯದೇವ್‌, ವಿನಯ್‌ಕುಮಾರ್‌ ಇದ್ದರು.