ಸಾರಾಂಶ
ಶಿವಕುಮಾರ ಕುಷ್ಟಗಿ ಗದಗ
ಕಡಲೆ ಬೆಳೆ ಮಾರಾಟದಲ್ಲಿ ರೈತರಿಗೆ ₹2.70 ಕೋಟಿ ವಂಚನೆ ಮಾಡಿದ ಆರೋಪದಡಿ ಮೂವರು ಸರ್ಕಾರಿ ಅಧಿಕಾರಿಗಳು ಮತ್ತು ಓರ್ವ ಖಾಸಗೀ ವ್ಯಕ್ತಿಯ ವಿರುದ್ಧ ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ರೈತರಿಗೆ ಆಗಿರುವ ಈ ಬೃಹತ್ ವಂಚನೆ ಪ್ರಕರಣದಲ್ಲಿ ಮೊದಲ ಆರೋಪಿ ಕಡಲೆ ಖರೀದಿ ಮಾಡಿದ ದಾವಣಗೆರೆ ಜಿಲ್ಲೆಯ ಮಾರುತಿಗೌಡ. ಜಿಪಂ ಕಾರ್ಯಾಲಯ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಚಂದ್ರಶೇಖರ ಎಲಿಗಾರ, ತಾಪಂ ಕಾರ್ಯಾಲಯದ ಕಾರ್ಯಕ್ರಮ ವ್ಯವಸ್ಥಾಪಕ ಆನಂದ ಬೆಳವಣಕಿ, ತಾಪಂ ಕಾರ್ಯಾಲಯದ ತಾಲೂಕು ತಾಂತ್ರಿಕ ಸಂಯೋಜಕ ಜಗದೀಶ ಕಂಬಾಳಿಮಠ ಪ್ರಮುಖ ಆರೋಪಿಗಳು.
ತಾಲೂಕು ಬೆಂತೂರು ಗ್ರಾಮದ ನಿವಾಸಿಯೋರ್ವರು ಮೇ.17 ರಂದು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 4 ಅಧಿಕಾರಿಗಳ ಮೇಲೆ ರೈತರಿಗೆ ಆಗಿರುವ ಮೋಸದ ಕುರಿತು ಪ್ರಕರಣ ದಾಖಲಿಸಿದ್ದು, ಜಿಲ್ಲೆಯಾದ್ಯಂತ ಸಂಚಲನಕ್ಕೆ ಕಾರಣವಾಗಿದೆ.₹2.70 ಕೋಟಿ ವಂಚನೆ: 8-1-2024 ರಿಂದ 6-2-2024 ರ ಅವಧಿಯಲ್ಲಿ ಅಂತೂರು, ಬೆಂತೂರು ಗ್ರಾಮದಲ್ಲಿನ 168 ರೈತರಿಂದ ಕಡಲೆಯನ್ನು ದಾವಣಗೆರೆ ಜಿಲ್ಲೆ, ಹರಿಹರ ತಾಲೂಕು ಬನ್ನಿಕೋಡ ಗ್ರಾಮದ ನಿವಾಸಿ ಈ ಪ್ರಕರಣದ ಮೊದಲ ಆರೋಪಿಯಾಗಿರುವ ಮಾರುತಿಗೌಡ ತಂದೆ ಸಂಗನಗೌಡ ಅವರಿಗೆ ಈ ಸರ್ಕಾರಿ ಅಧಿಕಾರಿಗಳೇ ಮುಂದೆ ನಿಂತು ಮಾರಾಟ ಮಾಡಿಸಿದ್ದಾರೆ. ಅದಕ್ಕಾಗಿ 168 ಜನ ರೈತರ ಒಟ್ಟು ₹2,70,12,929 (₹2.70 ಕೋಟಿ) ಹಣವನ್ನು ಆರೋಪಿತರು ಕೊಡದೇ ನಂಬಿಸಿ ರೈತರಿಗೆ ಮೋಸ ಮಾಡಿದ್ದಾರೆ. ಈ ಬಗ್ಗೆ ನ್ಯಾಯ ಕೊಡಿಸುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಏನಿದು ಹಗರಣ?: ಗದಗ ಮತ್ತು ಮುಂಡರಗಿ ತಾಲೂಕಿನ ಕೆಲ ಗ್ರಾಮಗಳ ವ್ಯಾಪ್ತಿಯಲ್ಲಿನ ತಾಪಂ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಎನ್‌ಆರ್ ಎಲ್‌ಎಂ ಯೋಜನೆಯ ಅಡಿಯಲ್ಲಿ ರೈತ ಉತ್ಪಾದಕರ ಗುಂಪುಗಳಿದ್ದು, ಅವುಗಳ ಮೂಲಕ ರೈತರು ಬೆಳೆದ ಬೆಳೆಗಳನ್ನು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಲು ಅನುಕೂಲ ಕಲ್ಪಿಸಲಾಗಿದೆ. ಖರೀದಿದಾರರು ರೈತರಿದ್ದಲ್ಲಿಗೇ ಬಂದು ಖರೀದಿ ಮಾಡಿ ಹಣವನ್ನು ನೇರವಾಗಿ ರೈತರ ಖಾತೆಗೆ ವರ್ಗಾವಣೆ ಮಾಡಬೇಕು. ಇದರಿಂದ ರೈತರಿಗೆ ಬಾಡಿಗೆ, ದಲಾಲಿ, ಹಮಾಲಿ ಉಳಿಯುತ್ತದೆ ಎನ್ನುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಅದಕ್ಕಾಗಿ ಈ ಯೋಜನೆಗೆ ರೈತರು ಹೆಚ್ಚು ಆಸಕ್ತಿ ತೋರಿ ಕಡಲೆಯನ್ನು ರೈತ ಉತ್ಪಾದಕರ ಗುಂಪುಗಳ ಸದಸ್ಯರ (ಎನ್ ಆರ್ ಎಲ್ ಎಂ) ಮೂಲಕ ದಾವಣಗೆರೆ ಮೂಲದ ಕಂಪನಿಯ ವ್ಯಕ್ತಿಯೋರ್ವರಿಗೆ ಮಾರಾಟ ಮಾಡಿ ತೀವ್ರ ನಷ್ಟ ಅನುಭವಿಸುತ್ತಿದ್ದಾರೆ.ರೈತರು ಏನಂತಾರೆ?: ಈ ವಿಷಯವಾಗಿ ಹಲವಾರು ರೈತರನ್ನು ಕನ್ನಡಪ್ರಭ ಸಂಪರ್ಕಿಸಿದಾಗ, ಕೆಲವು ಸರ್ಕಾರಿ ಅಧಿಕಾರಿಗಳು ಗ್ರಾಮಕ್ಕೆ ಬಂದು ಮೌಖಿಕವಾಗಿ ಹಾಗೂ ಅಂತೂರ-ಬೆಂತರ ಗ್ರಾಮಗಳಲ್ಲಿ ಸಭೆಗಳ ಮೂಲಕ ಒಕ್ಕೂಟದ ಆಫೀಸಗಳಲ್ಲಿ ಕೃಷಿ ವಹಿವಾಟುಗಳ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ರೈತರು ಬೆಳೆದ ಬೆಳೆಗಳನ್ನು ನೇರವಾಗಿ ದಲ್ಲಾಳಿಗಳು ಇಲ್ಲದೇ ಖರೀದಿ ಮಾಡಿಸುತ್ತೇವೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ. ಮಾರುಕಟ್ಟೆಗಿಂತ ಉತ್ತಮ ಬೆಲೆ ಸಿಗುತ್ತದೆ. ಇತರೇ ಖರ್ಚುಗಳು ಕಡಿಮೆಯಾಗುತ್ತವೆ ಎಂದಿದ್ದರಿಂದ ನಾವು ಇವರಿಗೆ ಕಡಲೆ ಮಾರಾಟ ಮಾಡಿದ್ದೇವೆ. ಮಾರಾಟ ಮಾಡಿ ವರ್ಷವೇ ಗತಿಸಿದೆ ನಮಗೆ ಬರಬೇಕಾದ ಹಣ ಬಂದಿಲ್ಲ ಎನ್ನುತ್ತಾರೆ.
ವರದಿ ಪರಿಣಾಮ: ಏ.12 ರಂದು ಕನ್ನಡಪ್ರಭ ಗದಗ ಮತ್ತು ಮುಂಡರಗಿ ತಾಲೂಕಿನ ಕೆಲ ಗ್ರಾಮಗಳ ಒಟ್ಟು 450 ಕ್ಕೂ ಅಧಿಕ ಕಡಲೆ ಮಾರಾಟ ಮಾಡಿದ ರೈತರಿಗೆ ಆಗಿರುವ ₹ 6.5 ಕೋಟಿ ಅಧಿಕ ಮೋಸದ ಬಗ್ಗೆ ಸವಿಸ್ತಾರವಾದ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತಿರುವ ಅಧಿಕಾರಿಗಳು ಮತ್ತು ಖರೀದಿಸಿದ ವ್ಯಕ್ತಿ ಈಗಾಗಲೇ ಕೆಲ ಗ್ರಾಮಗಳ ರೈತರಿಗೆ ಹಣ ನೀಡಿದ್ದಾರತೆ. ಆದರೆ ಇನ್ನುಳಿದವರಿಗೆ ಇದುವರೆಗೂ ಹಣ ನೀಡದೇ ಇರುವ ಹಿನ್ನೆಲೆಯಲ್ಲಿ 168 ರೈತರು ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದ ತನಿಖೆ ನಡೆಯುತ್ತಿದ್ದು. ರೈತರಿಂದ, ದೂರು ದಾಖಲುದಾರರಿಂದ ಮಾಹಿತಿ ಸಂಗ್ರಹಿಸಲಾಗಿದೆ. ಆರೋಪಿಗಳ ವಿಚಾರಣೆ ನಡೆಯುತ್ತಿದೆ ಎಂದು ಗದಗ ಎಸ್ಪಿ ಬಿ.ಎಸ್. ನೇಮಗೌಡ್ರ ತಿಳಿಸಿದ್ದಾರೆ.