ಸಾರಾಂಶ
ಬೇಲೂರಿನಲ್ಲಿ ಅಡ್ಹಾಕ್ ಸಮಿತಿ, ಸದಸ್ಯರ ಮುಸುಕಿನ ಗುದ್ದಾಟ । ಅಡಾಕ್ ಸಮಿತಿಗೆ ನೋಟಿಸ್ । ಸಹಕಾರ ನಿಬಂಧಕರ ಕ್ರಮ
ಕನ್ನಡಪ್ರಭ ವಾರ್ತೆ ಬೇಲೂರುಹಾಸನ ಜಿಲ್ಲಾ ಸಹಕಾರ ನಿಬಂಧಕರ ಕಚೇರಿ ಅಧಿಕಾರಿಗಳು ಬೇಲೂರು ತಾಲೂಕು ಒಕ್ಕಲಿಗರ ಸಂಘದ ವ್ಯವಹಾರದ ಕಡತಗಳನ್ನು ತಮ್ಮ ಸುಪರ್ದಿಗೆ ಪಡೆದುಕೊಂಡ ಘಟನೆ ನಡೆದಿದೆ.
ಪಟ್ಟಣದಲ್ಲಿರುವ ತಾಲೂಕು ಒಕ್ಕಲಿಗರ ಸಂಘದಲ್ಲಿ ಈ ಹಿಂದೆ ಶಾಸಕರಾಗಿದ್ದ ವೈ.ಎನ್.ರುದ್ರೇಶ್ ಗೌಡರ ನಿಧನದ ಹಿನ್ನೆಲೆಯಲ್ಲಿ ಸಂಘಕ್ಕೆ ಅಡಾಕ್ ಸಮಿತಿ ನೇಮಕ ಮಾಡಲಾಗಿತ್ತು. ಕಳೆದ 2 ವರ್ಷಗಳಿಂದ ಆಡಳಿತ ಮಂಡಳಿ ಮತ್ತು ಒಕ್ಕಲಿಗರ ಸಂಘದ ಸದಸ್ಯರ ನಡುವೆ ಆಂತರಿಕ ಗುದ್ದಾಟ ನಡೆಯುತ್ತಿತ್ತು. ಈ ನಡುವೆ ಜಿಲ್ಲಾ ಸಹಕಾರ ನಿಬಂಧಕರ ಕಚೇರಿಯಲ್ಲಿ ಆಡಳಿತ ಮಂಡಳಿಯ ವಿರುದ್ಧ ಗುಂಪೊಂದು ದೂರು ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಸಮಗ್ರ ದಾಖಲಾತಿಗಳ ಪರಿಶೀಲನೆ ನಡೆಸಿ ಅಡಾಕ್ ಸಮಿತಿ ವಿರುದ್ಧ ಈ ಹಿಂದೆ ನೋಟಿಸ್ ಜಾರಿ ಮಾಡಿತ್ತು.ಕೂಡಲೇ ಸಂಘದ ಎಲ್ಲಾ ಚಟುವಟಿಗಳನ್ನು ಸ್ಥಗಿತಗೊಳಿಸಿ ಹಾಸನ ಜಿಲ್ಲಾ ಸಹಕಾರ ನಿಬಂಧಕರ ಕಚೇರಿಯನ್ನು ಸುಪರ್ದಿಗೆ ನೀಡುವಂತೆ ಸೂಚಿಸಿತ್ತು. ಹಾಲಿ ಇದ್ದ ಆಡಳಿತ ಮಂಡಳಿಯ ಅಧ್ಯಕ್ಷ ಶೈಲೇಶ್ ಗೌಡ, ಕಾರ್ಯದರ್ಶಿ ಸುರೇಶ್ ಮತ್ತು ನಿರ್ದೇಶಕರು ಸೇರಿದಂತೆ ಅಡಾಕ್ ಕಮಿಟಿ ವಜಾ ಮಾಡದಂತೆ ರಾಜ್ಯ ಹೈಕೋರ್ಟ್‌ನಿಂದ ತಡೆಯಾಜ್ಞೆ ತರಲಾಗಿತ್ತು. ಆದರೂ ಸಂಘದ ಎಲ್ಲಾ ಕಾರ್ಯಚಟುವಟಿಕೆಗಳು ಎಂದಿನಂತೆ ನಡೆಯುತ್ತಿತ್ತು. ಇದನ್ನು ಪ್ರಶ್ನಿಸಿ ಜಿಲ್ಲಾ ಸಹಕಾರ ನಿಬಂಧಕರು ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು.
ನ್ಯಾಯಾಲಯ ಹಾಸನ ಜಿಲ್ಲಾ ಸಹಕಾರ ನಿಬಂಧಕರ ಕಚೇರಿಯ ಅಧಿಕಾರಿಗಳಿಗೆ ಸೂಚನೆ ನೀಡಿ ಬೇಲೂರು ತಾಲೂಕು ಒಕ್ಕಲಿಗರ ಸಂಘದ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ತಮ್ಮ ಸುಪರ್ತಿಗೆ ಪಡೆಯುವಂತೆ ಆದೇಶ ನೀಡಿತ್ತು. ಈ ಪ್ರಕಾರ ಹಾಲಿ ಇದ್ದಂತಹ ಅಡಾಕ್ ಕಮಿಟಿ ಯವರಿಗೆ ಸಹಕಾರ ನಿಬಂಧಕರ ಕಚೇರಿ ಅಧಿಕಾರಿಗಳು ನೋಟಿಸ್ ನೀಡಿ ಸಂಘದ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ನಿಲ್ಲಿಸಿ ತಮ್ಮ ಸುಪರ್ದಿಗೆ ನೀಡುವಂತೆ ಸೂಚಿಸಿದ್ದರು. ಆದರೂ ಕಮಿಟಿಯವರು ಸುಪರ್ದಿಗೆ ನೀಡದೆ ಉದ್ಧಟತನ ಮುಂದುವರೆಸಿ ಎಂದಿನಂತೆ ಸಂಘದ ವ್ಯವಾರಗಳ ಚಟುವಟಿಕೆಗಳನ್ನು ನಡೆಸುತ್ತ ಬಂದಿದ್ದರು.ಸೋಮವಾರ ಏಕಾಏಕಿ ಹಾಸನ ಜಿಲ್ಲಾ ಸಹಕಾರ ನಿಬಂಧಕರ ಕಚೇರಿಯ ಮುಖ್ಯ ಅಧಿಕಾರಿಗಳ ಆದೇಶದ ಮೇರೆಗೆ ಕಚೇರಿಯ ಪ್ರಥಮ ದರ್ಜೆ ಸಹಾಯಕರಾದ ಲೀಲಾ ಮತ್ತು ಅವರ ತಂಡ ಪೊಲೀಸ್ ಇಲಾಖೆಯ ಸಿಬ್ಬಂದಿ ಸಹಕಾರದೊಂದಿಗೆ ಒಕ್ಕಲಿಗರ ಸಂಘದ ಬಳಿ ಬಂದು ಕಚೇರಿಯ ಬೀಗ ಒಡೆದು ಒಳಗೆ ತೆರಳಿ ಕಚೇರಿಯ ಒಳಗಿದ್ದ ಎಲ್ಲಾ ವಸ್ತುಗಳು ಮತ್ತು ದಾಖಲಾತಿಗಳನ್ನು ವಪಡಿಸಿಕೊಂಡು ಇಲಾಖೆಯ ಸುಪರ್ದಿಗೆ ಪಡೆದರು.
ಹಾಸನ ಜಿಲ್ಲಾ ಸಹಕಾರ ನಿಬಂಧಕರ ಕಚೇರಿಯ ಪ್ರಥಮ ದರ್ಜೆ ಸಹಾಯಕಿ ಲೀಲಾ ಮಾತನಾಡಿ, ‘ನಮ್ಮ ಕಚೇರಿಯ ಮೇಲಾಧಿಕಾರಿಗಳ ಆದೇಶದಂತೆ ಬೇಲೂರು ತಾಲೂಕು ವಕ್ಕಲಿಗರ ಸಂಘದ ಆಡಳಿತ ಅಧಿಕಾರಿಯಾಗಿ ತಮ್ಮನ್ನು ನೇಮಕ ಮಾಡಲಾಗಿದೆ. ನೋಟಿಸ್ ನೀಡಿ ಸಂಘದ ಎಲ್ಲಾ ವ್ಯವಹಾರವನ್ನು ಸುಪರ್ದಿಗೆ ನೀಡುವಂತೆ ಸೂಚಿಸಿದ್ದರೂ ಉಡಾಫೆ ತೋರಿದ ಹಿನ್ನಲೆಯಲ್ಲಿ ಕಾನೂನು ಪ್ರಕಾರ ಪೊಲೀಸ್ ಇಲಾಖೆಯ ಸಿಬ್ಬಂದಿ ನೆರವಿನೊಂದಿಗೆ ಸಂಘದ ಎಲ್ಲಾ ವ್ಯವಹಾರಗಳನ್ನು ಇಲಾಖೆಯ ಸುಪರ್ದಿಗೆ ಪಡೆದುಕೊಳ್ಳಲಾಗಿದೆ’ ಎಂದರು.ಸಕಲೇಶಪುರ ನಿಬಂಧಕರ ಕಚೇರಿಯ ಎ.ಆರ್.ಸಿ. ಖಾಲಿದ್. ವರಿಷ್ಠಾಧಿಕಾರಿ ಕುಮಾರ್, ಪೋಲಿಸ್ಸ್ ವೃತ್ತ ನಿರೀಕ್ಷಕರಾದ ಸುಬ್ರಹ್ಮಣ್ಯ, ಜಯರಾಮ್, ಸಿಬ್ಬಂದಿ ಹಾಜರಿದ್ದರು.